ಪುತ್ರನಿಗೆ ಟಿಕೆಟ್: ಈಶ್ವರಪ್ಪ ‘ಮಾಡು ಇಲ್ಲವೆ ಮಡಿ’ ತಂತ್ರ ಅನುರಿಸ್ತಾರಾ?

| Published : Mar 12 2024, 02:03 AM IST

ಪುತ್ರನಿಗೆ ಟಿಕೆಟ್: ಈಶ್ವರಪ್ಪ ‘ಮಾಡು ಇಲ್ಲವೆ ಮಡಿ’ ತಂತ್ರ ಅನುರಿಸ್ತಾರಾ?
Share this Article
  • FB
  • TW
  • Linkdin
  • Email

ಸಾರಾಂಶ

ಹಾವೇರಿ-ಗದಗ ಲೋಕಸಭಾ ಚುನಾವಣಾ ಟಿಕೆಟ್ ಅನ್ನು ತಮ್ಮ ಪುತ್ರ ಕೆ.ಇ. ಕಾಂತೇಶ್ ಅವರಿಗೆ ಪಡೆಯಲು ತೀವ್ರ ಯತ್ನ ನಡೆಸುತ್ತಿರುವ ಮಾಜಿ ಉಪ ಮುಖ್ಯಮಂತ್ರಿ, ಬಿಜೆಪಿ ಕಟ್ಟಾಳು, ಪ್ರಖರ ಹಿಂದುತ್ವವಾದಿ ಕೆ.ಎಸ್. ಈಶ್ವರಪ್ಪ ಅವರು ಒಂದು ಪಕ್ಷ ಟಿಕೆಟ್ ನೀಡದೇ ಇದ್ದರೆ ಮುಂದೇನು ಎಂಬ ಪ್ರಶ್ನೆ ಎದುರಿಗಿಟ್ಟುಕೊಂಡು ತಮ್ಮ ಬೆಂಬಲಿಗರ ಜೊತೆ ಗಂಭೀರ ಮಾತುಕತೆ ನಡೆಸುತ್ತಿದ್ದಾರೆ. ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಅನಿವಾರ್ಯದ ಹೆಜ್ಜೆಗೆ ಮುಂದಾಗುತ್ತಿದ್ದಾರೆಯೇ?

ಗೋಪಾಲ್ ಯಡಗೆರೆ

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಹಾವೇರಿ-ಗದಗ ಲೋಕಸಭಾ ಚುನಾವಣಾ ಟಿಕೆಟ್ ಅನ್ನು ತಮ್ಮ ಪುತ್ರ ಕೆ.ಇ. ಕಾಂತೇಶ್ ಅವರಿಗೆ ಪಡೆಯಲು ತೀವ್ರ ಯತ್ನ ನಡೆಸುತ್ತಿರುವ ಮಾಜಿ ಉಪ ಮುಖ್ಯಮಂತ್ರಿ, ಬಿಜೆಪಿ ಕಟ್ಟಾಳು, ಪ್ರಖರ ಹಿಂದುತ್ವವಾದಿ ಕೆ.ಎಸ್. ಈಶ್ವರಪ್ಪ ಅವರು ಒಂದು ಪಕ್ಷ ಟಿಕೆಟ್ ನೀಡದೇ ಇದ್ದರೆ ಮುಂದೇನು ಎಂಬ ಪ್ರಶ್ನೆ ಎದುರಿಗಿಟ್ಟುಕೊಂಡು ತಮ್ಮ ಬೆಂಬಲಿಗರ ಜೊತೆ ಗಂಭೀರ ಮಾತುಕತೆ ನಡೆಸುತ್ತಿದ್ದಾರೆ. ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಅನಿವಾರ್ಯದ ಹೆಜ್ಜೆಗೆ ಮುಂದಾಗುತ್ತಿದ್ದಾರೆಯೇ? ಎಂತಹ ಸಂದರ್ಭದಲ್ಲಿಯೂ ಪಕ್ಷ ಹೇಳಿದ ಮಾತು ತಪ್ಪದ ಕಟ್ಟಾಳು ಎಂಬ ಹಣೆಪಟ್ಟಿ ಹಚ್ಚಿಕೊಂಡ ಈಶ್ವರಪ್ಪ ತಮ್ಮ ರಾಜಕೀಯ ಜೀವನದ ಕೊನೆಯ ಹಂತದಲ್ಲಿ ಪಕ್ಷದ ವಿರುದ್ಧ ತೊಡೆ ತಟ್ಟಲಿದ್ದಾರೆಯೇ ಎಂಬ ಚರ್ಚೆ ಬಿಜೆಪಿ ವಲಯದಲ್ಲಿ ತೀವ್ರವಾಗಿ ನಡೆಯುತ್ತಿದೆ.

ಪಕ್ಷ ಮತ್ತು ಸಂಘಟನೆ ಮಾತುಗಳನ್ನು ಸದಾ ಶಿರಸಾವಹಿಸಿ ನೆರವೇರಿಸುತ್ತಿದ್ದವರು ಈಶ್ವರಪ್ಪ. ಇದೀಗ ಆ ಸ್ಥಿತಿಯಲ್ಲಿ ಇಲ್ಲ. ತಮ್ಮ ಮತ್ತು ಪುತ್ರನ ರಾಜಕೀಯ ಜೀವನಕ್ಕೆ ಉದ್ದೇಶಪೂರ್ವಕವಾಗಿ ಕೆಲವರು ಅಡ್ಡಿಪಡಿಸುತ್ತಿದ್ದಾರೆ ಎಂಬ ಮನಃಸ್ಥಿತಿಗೆ ಬಂದಂತೆ ಕಾಣುತ್ತಿದ್ದಾರೆ. ತಮ್ಮ ಕೊನೆಯ ನಿರ್ಧಾರ ಕೈಗೊಳ್ಳುವ ಅಂತಿಮ ಕ್ಷಣದತ್ತ ಮುಖ ಮಾಡಿದಂತೆ ಕಾಣುತ್ತಿದ್ದಾರೆ. ತಮ್ಮ ಪುತ್ರನ ಟಿಕೆಟ್ ಕುರಿತು ಖಚಿತ ಭರವಸೆ ದೊರಕದೇ ಇದ್ದಲ್ಲಿ ತಮ್ಮ ದಾರಿ ತಮಗೆ ಎಂಬ ನಿಲುವಿಗೆ ಬರಲು ಸಿದ್ಧತೆ ನಡೆಸಿದಂತೆ ಕಾಣುತ್ತಿದೆ. ಈ ಸಂಬಂಧ ತಮ್ಮ ಆಪ್ತರು, ಕಾರ್ಯಕರ್ತರು, ಎರಡನೇ ಹಂತದ ನಾಯಕರು ಎಲ್ಲರ ಜೊತೆ ಮಾತುಕತೆ ನಡೆಸುತ್ತಿದ್ದಾರೆ.

ಮಾಡು ಇಲ್ಲವೇ ಮಡಿ:

ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಮಗೆ ಟಿಕೆಟ್ ನಿರಾಕರಿಸಿದಾಗ ಮೌನವಾಗಿ ಒಪ್ಪಿಕೊಂಡ ಈಶ್ವರಪ್ಪ ತಮ್ಮ ಪುತ್ರನಿಗೆ ನೀಡಿ ಎಂದು ಕೇಳಿದಾಗಲೂ ಪಕ್ಷ ಒಪ್ಪಲಿಲ್ಲ. ಆಗಲೂ ಇದನ್ನು ಒಪ್ಪಿಕೊಂಡಿದ್ದರು ಈಶ್ವರಪ್ಪ. ತಮ್ಮ ಪುತ್ರ ಕೆ.ಇ. ಕಾಂತೇಶ್ ಅವರಿಗೆ ಹಾವೇರಿ-ಗದಗ ಲೋಕಸಭಾ ಕ್ಷೇತ್ರದಿಂದ ಟಿಕೆಟ್‌ ನೀಡಿ ಎಂದು ಕೋರಿಕೆ ಸಲ್ಲಿಸಿದ್ದರು. ಈ ಸಂಬಂಧ ಹೈಕಮಾಂಡ್‌ ನಾಯಕರನ್ನು ಭೇಟಿ ಮಾಡಿ, ಭರವಸೆ ಪಡೆದಿದ್ದರು. ಎರಡು ವರ್ಷಗಳಿಂದ ಹಾವೇರಿ ಕ್ಷೇತ್ರದಲ್ಲಿ ಓಡಾಡಿ ಜನ ಸಂಪರ್ಕ ಬೆಳೆಸಿಕೊಂಡಿದ್ದರು. ಪಕ್ಷದ ವರಿಷ್ಠ ಯಡಿಯೂರಪ್ಪ ಅವರನ್ನು ಕೂಡ ಭೇಟಿ ಮಾಡಿದ್ದರು. ಕೊನೆಯವರೆಗೆ ತಮ್ಮ ಪುತ್ರನಿಗೆ ಟಿಕೆಟ್ ಖಚಿತ ಎಂದು ನಂಬಿಕೊಂಡಿದ್ದ ಈಶ್ವರಪ್ಪ ಅವರಿಗೆ ಕಳೆದ ವಾರದಿಂದ ನಡೆದ ಬೆಳವಣಿಗೆಗಳು ಸಹಜವಾಗಿಯೇ ಆತಂಕ ಮೂಡಿಸಿದೆ. ಯಾವ ಮೂಲದಿಂದಲೂ ಕೊನೆ ಕ್ಷಣದವರೆಗೂ ಸ್ಪಷ್ಟ ಭರವಸೆ ಸಿಗದ ಕಾರಣ ಅವರು ಟಿಕೆಟ್‌ ವಿಚಾರದಲ್ಲಿ ‘ಮಾಡು ಇಲ್ಲವೇ ಮಡಿ’ ಎಂಬ ತೀರ್ಮಾನಕ್ಕೆ ಬಂದಂತೆ ಕಾಣುತ್ತಿದೆ.

ಈಗ ನಡೆಯುತ್ತಿರುವ ಬೆಳವಣಿಗೆ ನೋಡಿದರೆ ಟಿಕೆಟ್ ಪಡೆಯುವುದು ಕಷ್ಟ ಎಂಬುದು ಅವರಿಗೂ ಅರಿವಾಗುತ್ತಿದೆ. ಒಂದೆಡೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಇನ್ನೊಂದೆಡೆ ಮಾಜಿ ಸಚಿವ ಬಿ.ಸಿ. ಪಾಟೀಲ್ ತಮಗೆ ಟಿಕೆಟ್ ನೀಡುವಂತೆ ಒತ್ತಡ ಹಾಕುತ್ತಿದ್ದಾರೆ. ಇವರ ನಡುವೆ ಜಗದೀಶ್ ಶೆಟ್ಟರ್ ಹೆಸರು ಕೂಡ ಹಾವೇರಿ ಕ್ಷೇತ್ರದಲ್ಲಿ ಕೇಳಿಬರುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಕಾಂತೇಶ್ ಅವರ ಹೆಸರು ಪರಿಗಣನೆಗೆ ಬರುವುದೇ ಎಂಬುದೇ ಈಶ್ವರಪ್ಪ ಆತಂಕಕ್ಕೆ ಕಾರಣ.

- - - ಬಾಕ್ಸ್ ಈಶ್ವರಪ್ಪ ಪರ ಬೆಂಬಲಿಗರ ಬ್ಯಾಟಿಂಗ್‌ ಹಲವು ಬಾರಿ ಪಕ್ಷಕ್ಕಾಗಿ ತ್ಯಾಗ ಮಾಡಿದ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಈಶ್ವರಪ್ಪ ಮತ್ತು ಅವರ ಪುತ್ರನಿಗೆ ಟಿಕೆಟ್ ನಿರಾಕರಿಸಿದಾಗಲೂ ಪಕ್ಷ ಹೇಳಿದ ಅಭ್ಯರ್ಥಿಯನ್ನು ಈಶ್ವರಪ್ಪ ಅವರು ಗೆಲ್ಲಿಸಿಕೊಂಡು ಬಂದಿದ್ದಾರೆ. ಅವರಿಗೆ ಈಗಲೂ ಪುನಃ ಅನ್ಯಾಯ ಮಾಡುವುದು ಸರಿಯೇ ಎಂಬುದು ಅವರ ಬೆಂಬಲಿಗರ ಪ್ರಶ್ನೆ. ಕುಟುಂಬ ರಾಜಕಾರಣ ಎಂಬುದು ಈಶ್ವರಪ್ಪ ಕುಟುಂಬಕ್ಕೆ ಮಾತ್ರ ಅನ್ವಯವೇ ಎಂಬ ಪ್ರಶ್ನೆಯನ್ನು ಕೂಡ ಈ ಬೆಂಬಲಿಗರು ಎತ್ತುತ್ತಿದ್ದಾರೆ.- - - ಕೋಟ್:

ಊಹಾಪೋಹದ ಮಾತುಗಳಿಗೆ ನಾನು ಉತ್ತರಿಸುವುದಿಲ್ಲ. ಈಗಲೂ ಪಕ್ಷ ಟಿಕೆಟ್ ನೀಡುತ್ತದೆ ಎಂಬುದು ನನ್ನ ನಂಬಿಕೆ. ಟಿಕೆಟ್ ಸಿಗದಿದ್ದರೆ ಮುಂದೇನು ಎಂಬುದು ಆ ಸಂದರ್ಭದ ಪ್ರಶ್ನೆ ಮಾತ್ರ.

- ಕೆ.ಎಸ್. ಈಶ್ವರಪ್ಪ, ಮಾಜಿ ಡಿಸಿಎಂ

- - - --ಫೋಟೋ: ಕೆ.ಎಸ್. ಈಶ್ವರಪ್ಪ, ಮಾಜಿ ಉಪ ಮುಖ್ಯಮಂತ್ರಿ