ಹಂಪಿಯಲ್ಲಿ ಪ್ರವಾಸಿಗರಿಗೆ ಟಿಕೆಟ್‌ ಕಿರಿಕಿರಿ

| Published : Nov 27 2023, 01:15 AM IST

ಸಾರಾಂಶ

ಹಂಪಿಯ ಕಮಲ ಮಹಲ್‌, ಕಮಲಾಪುರದ ಬಳಿಯ ಪ್ರಾಚ್ಯವಸ್ತು ಸಂಗ್ರಹಾಲಯ ಮತ್ತು ವಿಜಯ ವಿಠ್ಠಲ ದೇಗುಲದ ಬಳಿ ಟಿಕೆಟ್‌ ಕೌಂಟರ್‌ಗಳನ್ನು ತೆರೆಯಲಾಗಿದೆ. ಈ ಕೌಂಟರ್‌ಗಳ ಬಳಿ ವೀಕೆಂಡ್‌ನಲ್ಲಿ ಹೆಚ್ಚಿನ ಪ್ರವಾಸಿಗರು ಆಗಮಿಸುವುದರಿಂದ ಸರದಿ ಸಾಲಿನಲ್ಲಿ ನಿಂತು ಪ್ರವಾಸಿಗರು ಟಿಕೆಟ್‌ ಪಡೆಯುವ ಸ್ಥಿತಿ ಇರುತ್ತದೆ. ಈ ಕೌಂಟರ್‌ಗಳ ಬಳಿ ಪ್ರವಾಸಿಗರ ಸಂಖ್ಯೆಗಳನ್ನು ಗಮನಿಸಿ ತಲಾ ಒಂದೊಂದು ಹೆಚ್ಚುವರಿ ಟಿಕೆಟ್‌ ಕೌಂಟರ್‌ಗಳನ್ನು ತೆರೆಯಬೇಕು ಎಂಬುದು ಪ್ರವಾಸಿಗರ ಆಗ್ರಹವಾಗಿದೆ.

ಕೃಷ್ಣ ಎನ್‌. ಲಮಾಣಿ

ಕನ್ನಡಪ್ರಭ ವಾರ್ತೆ ಹೊಸಪೇಟೆ

ವಿಶ್ವ ಪರಂಪರೆ ತಾಣ ಹಂಪಿಗೆ ದೇಶ- ವಿದೇಶಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಆದರೆ, ಟಿಕೆಟ್‌ ಕೌಂಟರ್‌ಗಳಲ್ಲಿ ಪ್ರವಾಸಿಗರು ಸರದಿ ಸಾಲಿನಲ್ಲೇ ನಿಲ್ಲುವ ಸ್ಥಿತಿ ಇದೆ. ಗಂಟೆಗಟ್ಟಲೇ ಟಿಕೆಟ್‌ ಕೌಂಟರ್‌ಗಳಲ್ಲಿ ಕಾಯುತ್ತಿದ್ದರೂ ಇನ್ನೂ ಪ್ರತ್ಯೇಕ ಕೌಂಟರ್‌ಗಳನ್ನು ತೆರೆಯಲು ಕೇಂದ್ರ ಪುರಾತತ್ವ ಇಲಾಖೆ ಮುಂದಾಗಿಲ್ಲ.

ಹಂಪಿಯಲ್ಲಿ ಪ್ರವಾಸೋದ್ಯಮ ಏರುಗತಿಯಲ್ಲಿ ಸಾಗಿದೆ. ಜಿ- 20 ಶೃಂಗಸಭೆ ಬಳಿಕ ಹಂಪಿಗೆ ಆಗಮಿಸುವ ಪ್ರವಾಸಿಗರ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗುತ್ತಿದೆ. ಅದಕ್ಕೆ ತಕ್ಕಂತೆ ಕೇಂದ್ರ ಪುರಾತತ್ವ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆಗಳು ಸಿದ್ಧತೆ ಮಾಡಿಕೊಳ್ಳುವಲ್ಲಿ ಎಡವಿದ್ದು, ಪ್ರವಾಸಿಗರು ಟಿಕೆಟ್‌ ಕೌಂಟರ್‌ಗಳ ಎದುರೇ ತಾಸುಗಟ್ಟಲೇ ನಿಲ್ಲುವ ಸ್ಥಿತಿ ನಿರ್ಮಾಣಗೊಂಡಿದೆ. ವಾರದ ಕೊನೆಯಲ್ಲಿ ಇಷ್ಟೊಂದು ರಶ್‌ ಇದ್ದರೂ ಹೆಚ್ಚುವರಿ ಕೌಂಟರ್‌ ತೆರೆಯುತ್ತಿಲ್ಲ, ಇದ್ದ ಒಂದೇ ಕೌಂಟರ್‌ನಲ್ಲಿ ನಿಭಾಯಿಸಲು ಯತ್ನಿಸಲಾಗುತ್ತಿದೆ.

ಭಾರೀ ಏರಿಕೆ:

ಹಂಪಿಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ ವೀಕೆಂಡ್‌ನಲ್ಲಿ ಹೆಚ್ಚಿಗೆ ಇರುತ್ತಿದೆ. ಕಳೆದ ಮೂರು ವರ್ಷಗಳಿಗೆ ಹೋಲಿಕೆ ಮಾಡಿದರೆ, ಈ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಹಂಪಿಗೆ ಬರುತ್ತಿದ್ದಾರೆ. ನ. 25ರಂದು ಎಂಟು ಸಾವಿರಕ್ಕೂ ಅಧಿಕ ಪ್ರವಾಸಿಗರು ಇದ್ದರೆ, ನ. 26ರಂದು 80 ಸಾವಿರಕ್ಕೂ ಅಧಿಕ ಪ್ರವಾಸಿಗರು ಹಂಪಿಗೆ ಆಗಮಿಸಿದ್ದರು. ಹಂಪಿಯ ವಿಜಯ ವಿಠ್ಠಲ ದೇವಾಲಯದ ಬಳಿಯ ಟಿಕೆಟ್‌ ಕೌಂಟರ್‌ನಲ್ಲಿ ಪ್ರವಾಸಿಗರು ಗಂಟೆಗಟ್ಟಲೆ ಕಾದು, ಕಾದು ಸುಸ್ತಾಗುತ್ತಿದ್ದರೂ ಪರ್ಯಾಯ ಟಿಕೆಟ್‌ ಕೌಂಟರ್‌ ತೆರೆಯದೇ ಪುರಾತತ್ವ ಇಲಾಖೆ ಅಧಿಕಾರಿಗಳು ಪ್ರವಾಸಿಗರ ಸಮಸ್ಯೆಗೆ ಸ್ಪಂದಿಸದೇ ಮೀನಮೇಷ ಎಣಿಸಿದ್ದಾರೆ.

ಮೂರು ಕಡೆ ಕೌಂಟರ್‌:

ಹಂಪಿಯ ಕಮಲ ಮಹಲ್‌, ಕಮಲಾಪುರದ ಬಳಿಯ ಪ್ರಾಚ್ಯವಸ್ತು ಸಂಗ್ರಹಾಲಯ ಮತ್ತು ವಿಜಯ ವಿಠ್ಠಲ ದೇಗುಲದ ಬಳಿ ಟಿಕೆಟ್‌ ಕೌಂಟರ್‌ಗಳನ್ನು ತೆರೆಯಲಾಗಿದೆ. ಈ ಕೌಂಟರ್‌ಗಳ ಬಳಿ ವೀಕೆಂಡ್‌ನಲ್ಲಿ ಹೆಚ್ಚಿನ ಪ್ರವಾಸಿಗರು ಆಗಮಿಸುವುದರಿಂದ ಸರದಿ ಸಾಲಿನಲ್ಲಿ ನಿಂತು ಪ್ರವಾಸಿಗರು ಟಿಕೆಟ್‌ ಪಡೆಯುವ ಸ್ಥಿತಿ ಇರುತ್ತದೆ. ಈ ಕೌಂಟರ್‌ಗಳ ಬಳಿ ಪ್ರವಾಸಿಗರ ಸಂಖ್ಯೆಗಳನ್ನು ಗಮನಿಸಿ ತಲಾ ಒಂದೊಂದು ಹೆಚ್ಚುವರಿ ಟಿಕೆಟ್‌ ಕೌಂಟರ್‌ಗಳನ್ನು ತೆರೆಯಬೇಕು ಎಂಬುದು ಪ್ರವಾಸಿಗರ ಆಗ್ರಹವಾಗಿದೆ.

ಟಿಕೆಟ್‌ ದರ:

ಹಂಪಿಯ ಸ್ಮಾರಕಗಳ ವೀಕ್ಷಣೆಗೆ ದೇಶಿ ಪ್ರವಾಸಿಗರಿಗೆ ತಲಾ ಒಬ್ಬರಿಗೆ ₹40 ಮತ್ತು ವಿದೇಶಿ ಪ್ರವಾಸಿಗರಿಗೆ ತಲಾ ಒಬ್ಬರಿಗೆ ₹600 ಟಿಕೆಟ್‌ ದರ ನಿಗದಿಪಡಿಸಲಾಗಿದೆ. 14 ವರ್ಷದೊಳಗಿನ ಮಕ್ಕಳಿಗೆ ಹಂಪಿ ಸ್ಮಾರಕಗಳ ವೀಕ್ಷಣೆ ಉಚಿತವಾಗಿದೆ. ದೇಶ- ವಿದೇಶಗಳಿಂದ ಆಗಮಿಸುವ ಪ್ರವಾಸಿಗರಿಗೆ ಹಂಪಿ ಸ್ಮಾರಕಗಳ ವೀಕ್ಷಣೆಗೆ ಅನುಕೂಲ ಮಾಡಿಕೊಡಲು ಸೂಕ್ತ ಟಿಕೆಟ್‌ ಕೌಂಟರ್‌ಗಳನ್ನು ಹಂಪಿ ತೆರೆಯಲಾಗಿಲ್ಲ. ಇರುವ ಒಂದೊಂದೆ ಟಿಕೆಟ್‌ ಕೌಂಟರ್‌ಗಳಲ್ಲಿ ಗಂಟೆಗಟ್ಟಲೆ ಕಾದು ಟಿಕೆಟ್‌ ಪಡೆಯುವ ಸ್ಥಿತಿ ಇದೆ.

ವಹಿವಾಟು ಚೇತರಿಕೆ:

ಈಗ ಹಂಪಿಯಲ್ಲಿ ಪ್ರವಾಸೋದ್ಯಮ ಚೇತರಿಕೆ ಕಂಡಿದ್ದು, ಹೋಟೆಲ್, ರೆಸ್ಟೊರಂಟ್, ಟ್ಯಾಕ್ಸಿ, ಆಟೋ ಚಲಾಯಿಸುವವರು, ಪ್ರವಾಸಿ ಗೈಡ್‌ಗಳು, ಬೀದಿಬದಿ ವ್ಯಾಪಾರಿಗಳು ಸೇರಿದಂತೆ ವಿವಿಧ ಕ್ಷೇತ್ರಗಳ ವಹಿವಾಟು ಚೇತರಿಸಿಕೊಂಡಿದೆ. ಆದರೆ ಪ್ರವಾಸಿಗರಿಗೆ ಬೇಕಿರುವ ಮೂಲ ಸೌಕರ್ಯ ಮಾತ್ರ ಹಂಪಿಯಲ್ಲಿ ಇದುವರೆಗೆ ಒದಗಿಸಲು ಆಗುತ್ತಿಲ್ಲ. ಈಗ ಟಿಕೆಟ್‌ಗಾಗಿ ಗಂಟೆಗಟ್ಟಲೆ ಕಾಯುವ ಸ್ಥಿತಿ ಬೇರೆ ನಿರ್ಮಾಣವಾಗುತ್ತಿದೆ ಎಂಬುದು ಪ್ರವಾಸಿಗರ ಅಳಲಾಗಿದೆ.

ಪ್ರವಾಸಿಗರ ಸಮಸ್ಯೆಗಳ ಕುರಿತು ಪ್ರತಿಕ್ರಿಯೆ ಪಡೆಯಲು ಕೇಂದ್ರ ಪುರಾತತ್ವ ಇಲಾಖೆಯ ಅಧಿಕಾರಿ ನಿಹಿಲ್‌ ದಾಸ್‌ ಅವರಿಗೆ ಕನ್ನಡಪ್ರಭ ದೂರವಾಣಿ ಕರೆ ಮಾಡಿ ಸಂಪರ್ಕಿಸಿದರೂ ಅವರು ಕರೆ ಸ್ವೀಕರಿಸಲಿಲ್ಲ.ಕೌಂಟರ್‌ ಹೆಚ್ಚಲಿ: ಹಂಪಿಯಲ್ಲಿ ಟಿಕೆಟ್‌ಗಾಗಿ ಗಂಟೆಗಟ್ಟಲೆ ಕಾಯುವ ಸ್ಥಿತಿ ಇದೆ. ಪ್ರವಾಸಿಗರ ಅನುಕೂಲಕ್ಕಾಗಿ ಟಿಕೆಟ್‌ ಕೌಂಟರ್‌ಗಳನ್ನು ಹೆಚ್ಚಳ ಮಾಡಬೇಕು. ಸ್ಮಾರಕಗಳನ್ನು ನೋಡಲು ದೂರದಿಂದ ಬಂದಿರುತ್ತೆವೆ. ಟಿಕೆಟ್‌ ಪಡೆಯಲು ತಾಸುಗಟ್ಟಲೇ ನಿಂತರೆ, ಮುಂದೆ ಎಲ್ಲ ಸ್ಮಾರಕಗಳನ್ನು ನೋಡುವುದು ಯಾವಾಗ? ಕನಿಷ್ಠ ಪರಿಜ್ಞಾನ, ಪುರಾತತ್ವ ಹಾಗೂ ಪ್ರವಾಸೋದ್ಯಮ ಇಲಾಖೆಗಳಿಗೆ ಇರಬೇಕು ಎನ್ನುತ್ತಾರೆ ನವನೀತ್, ನಂದಕಿಶೋರ್‌.