ಸಾರಾಂಶ
ಗದಗ: ಗದಗ ಮತ್ತು ಮುಂಡರಗಿ ತಾಲೂಕಿನ ರೈತರಿಗೆ ಬರಬೇಕಿದ್ದ ಕಡಲೆ ಬಾಕಿ ಹಣ ಪಾವತಿಸುವಂತೆ ಆಗ್ರಹಿಸಿ ವಿವಿಧ ರೈತ ಸಂಘಟನೆ ನೇತೃತ್ವದಲ್ಲಿ ಜಿಲ್ಲೆಯ ಕಡಲೆ ಬೆಳೆಗಾರರು ಹಾಗೂ ರೈತ ಮುಖಂಡರು ಜಿಲ್ಲಾಡಳಿತದ ಮುಂದೆ ನಡೆಸುತ್ತಿರುವ ಅಹೋರಾತ್ರಿ ಪ್ರತಿಭಟನೆ ಮಂಗಳವಾರ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ರೈತರು ಜಿಲ್ಲಾಡಳಿ ಭವನದ ಗೇಟ್‌ಗೆ ಜಾನುವಾರು ಕಟ್ಟಿ, ಅಲ್ಲಿಯೇ ಅಡುಗೆ ತಯಾರಿಸುವ ಮೂಲಕ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾ ಸ್ಥಳದಲ್ಲಿ ರೈತರು ಬಾರಕೋಲ್ ಮೂಲಕ ಚಾಟಿ ಬೀಸಿ, ಒನಕೆ ಹಿಡಿದು ಮಾನವ ಸರಪಳಿ ನಿರ್ಮಿಸಿ ರಸ್ತೆ ಬಂದ್ ಮಾಡಿ, ವಾಹನ ತಡೆದು ಪ್ರತಿಭಟನೆ ನಡೆಸಿದರಲ್ಲದೇ ಕಡಲೆ ಬೆಳೆ ಬಾಕಿ ಹಣ ನೀಡದೇ ಅನ್ನದಾತರನ್ನು ಸತಾಯಿಸುತ್ತಿರುವ ಸರ್ಕಾರಕ್ಕೆ ಹಿಡಿಶಾಪ ಹಾಕಿದರು.ಎನ್‌ಆರ್‌ಎಲ್‌ಎಂ ಗದಗ ಒಕ್ಕೂಟದಡಿ ನೇಮಿಸಿದ ಕೃಷಿ ಸಖಿ ಅಡಿ ಬರುವ ಮಹಿಳಾ ಸ್ವಸಹಾಯ ಸಂಘಗಳ ಮೂಲಕ ಜಿಲ್ಲೆಯ ಗದಗ ಮತ್ತು ಮುಂಡರಗಿ ತಾಲೂಕಿನ 450 ರೈತರಿಂದ ಕಡಲೆ ಖರೀದಿಸಿ 12 ತಿಂಗಳಾದರೂ ಬಾಕಿ ಹಣ ಪಾವತಿಸಿಲ್ಲ. ಜಿಲ್ಲಾಡಳಿತ ಮಧ್ಯ ಪ್ರವೇಶಿಸಿ ಹಣ ಕೊಡಿಸಬೇಕು ಎಂದು ಒತ್ತಾಯಿಸಿದರು.
ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ (ಎನ್‌ಆರ್‌ಎಲ್‌ಎಂ) ಗದಗ ಒಕ್ಕೂಟದಡಿ ಬರುವ ಮಹಿಳಾ ಸ್ವಸಹಾಯ ಸಂಘಗಳ ಮೂಲಕ ಎನ್‌ಆರ್‌ಎಲ್‌ಎಂ ಜಿಪಂ ಕಾರ್ಯಕ್ರಮ ವ್ಯವಸ್ಥಾಪಕ ಚಂದ್ರಶೇಖರ ಎಲಿಗಾರ, ತಾಪಂ ಕಾರ್ಯಕ್ರಮ ವ್ಯವಸ್ಥಾಪಕ ಆನಂದ ಮೆಳವಣಿಕಿ ಹಾಗೂ ತಾಲೂಕು ತಾಂತ್ರಿಕ ಸಂಯೋಜಕ ಜಗದೀಶ ಕಂಬಾಳಿಮಠ ಎಂಬುವವರು ದಾವಣಗೆರೆಯ ಮಾರುತಿ ಗೌಡ ಎಂಬುವವರೊಂದಿಗೆ ಮಧ್ಯಸ್ಥಿಕೆ ವಹಿಸಿ ಮೂರು ತಿಂಗಳಲ್ಲಿ ಅಂದಾಜು ₹27 ಕೋಟಿ ಮೌಲ್ಯದ ಕಡಲೆ ಹಲವು ಗ್ರಾಮಗಳಲ್ಲಿ ಕೊಡಿಸಿದ್ದಾರೆ. ಇದರ ಭಾಗವಾಗಿ ₹ 20 ಕೋಟಿ ಆರ್‌ಟಿಜಿಎಸ್ ಮೂಲಕ ಪಾವತಿಸಿದ್ದು, ಬಾಕಿ ಉಳಿದ ₹ 6.50 ಕೋಟಿ ಪಾವತಿಸುತ್ತಿಲ್ಲ. ಸಂಬಂಧಿಸಿದ ಅಧಿಕಾರಿಗಳಿಗೆ ಈ ಬಗ್ಗೆ ಕೇಳಿದರೆ ಸರಿಯಾಗಿ ಸ್ಪಂದಿಸುತ್ತಿಲ್ಲ. ರೈತರು ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಮನವಿ ನೀಡಿದ್ದರೂ ಪ್ರಯೋಜನವಾಗಿಲ್ಲ. ರೈತರ ಸಮಸ್ಯೆ ಬಗೆಹರಿಸಲು ಇದುವರೆಗೂ ಯಾವುದೇ ಸಭೆ ಕರೆದಿಲ್ಲ ಎಂದು ಆಕ್ರೋಶ ಹೊರ ಹಾಕಿದರು.ಅಖಿಲ ಕರ್ನಾಟಕ ಭ್ರಷ್ಟಾಚಾರ ನಿರ್ಮೂಲನ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಡಿ.ಎಚ್. ನವಲಗುಂದ ಹಾಗೂ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಮಹಾದೇವಿ ಹುಯಿಲಗೋಳ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಅನಿರ್ಧಿಷ್ಟಾವಧಿ ಧರಣಿಯಲ್ಲಿ ಜಿಲ್ಲಾಡಳಿತ ಭವನದ ಗೇಟ್ ಗೆ ಜಾನುವಾರಗಳನ್ನು ಕಟ್ಟಿ, ಅಲ್ಲಿಯೇ ಅಡಿಗೆ ತಯಾರಿಸಿ ಊಟ ಸವಿದರು. ಬೇಡಿಕೆ ಈಡೇರುವವವರೆಗೆ ಅಹೋ ರಾತ್ರಿ ಧರಣಿ ಮುಂದುವರಿಯಲಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.