ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕಕೇರಿ
ಬಿರುನಾಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೆರಾಲು ಗ್ರಾಮದಲ್ಲಿ ಎರಡು ಸಾಕಾನೆಗಳನ್ನು ಬಳಸಿಕೊಂಡು ಸಾಕು ಪ್ರಾಣಿಗಳನ್ನು ನಿರಂತರವಾಗಿ ಈ ವ್ಯಾಪ್ತಿಯಲ್ಲಿ ಬಲಿ ಪಡೆಯುತ್ತಿರುವ ಹುಲಿಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಕಾರ್ಯಾಚರಣೆ ಕೈಗೊಂಡಿದೆ.ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಮೇರಿಯಂಡ ಸಂಕೇತ್ ಪೂವಯ್ಯ ಅವರು ಮೇಲ್ವಿಚಾರಣೆಯಲ್ಲಿ ಶನಿವಾರ ಕಾರ್ಯಾಚರಣೆ ಆರಂಭವಾಗಿದ್ದು, ಕಾರ್ಯಾಚರಣೆ ವೇಳೆ ಹುಲಿಯ ಹೆಜ್ಜೆ ಗುರುತು ಪತ್ತೆಯಾಗಿದೆ. ಹುಲಿ ಕಂಡಿರುವ ಬಗ್ಗೆ ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.
60 ಸಿಬ್ಬಂದಿ ಕಾರ್ಯಾಚರಣೆ: ಸ್ಥಳದಲ್ಲಿ ಈಗಾಗಲೇ ಅರಣ್ಯ ಇಲಾಖೆಯ ಕ್ಷಿಪ್ರ ಕಾರ್ಯಪಡೆ (ಆರ್. ಆರ್. ಎಫ್) ಕಾಡಾನೆ ಕಾರ್ಯಪಡೆ (ಇ. ಟಿ. ಎಫ್ )ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಸೇರಿ ಸುಮಾರು 60 ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ.ಮೊದಲ ಹಂತದ ಕಾರ್ಯಾಚರಣೆಯಲ್ಲಿ ಹುಲಿಯ ಇರುವುವಿಕೆಯನ್ನು ಪತ್ತೆ ಹಚ್ಚುವುದಕ್ಕಾಗಿ ಹುಲಿಯ ಹೆಜ್ಜೆ ಗುರುತಿನ ಜಾಡನ್ನು ಹಿಡಿಯಲು ಸಿಬ್ಬಂದಿ ಪ್ರಯತ್ನಿಸುತ್ತಿದ್ದಾರೆ. ಸ್ಥಳೀಯ ಕಾರ್ಮಿಕರು ಎರಡು ದಿನಗಳ ಹಿಂದೆ ಒಂದು ದೊಡ್ಡ ಹುಲಿ ಹಾಗೂ ಅದರೊಂದಿಗೆ ಮೂರು ಮರಿಗಳು ಇರುವುದನ್ನು ಪ್ರತ್ಯಕ್ಷವಾಗಿ ಕಂಡಿರುವುದಾಗಿ ಕಾರ್ಯಾಚರಣೆ ತಂಡಕ್ಕೆ ನೇರವಾಗಿ ಮಾಹಿತಿ ನೀಡಿದರು.
ಇದಲ್ಲದೆ ತೆರಾಲು ಗ್ರಾಮದಲ್ಲಿರುವ ದಿವಂಗತ ಅನಿಲ್ ಮಲೋತ್ರ ಎಂಬವರ ಖಾಸಗಿ ಜಾಗದಲ್ಲಿ ಹುಲಿ ಇರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಅವರ ಜಾಗದೊಳಗೆ ಕಾರ್ಯಾಚರಣೆ ಕೈಗೊಳ್ಳಲು ನಿರ್ಧರಿಸಲಾಗಿದೆ.ಈಗಾಗಲೇ ಸ್ಥಳಕ್ಕೆ ದುಬಾರೆ ಸಾಕಾನೆ ಸಿಬಿರದಿಂದ ಶ್ರೀರಾಮ ಹಾಗೂ ಗೋಪಿ ಎಂಬ ಎರಡು ಕಾಡಾನೆಗಳನ್ನು ಕರೆತರಲಾಗಿದೆ. ಹುಲಿಯ ಹೆಜ್ಜೆ ಗುರುತು ಆಧರಿಸಿ ಹುಲಿ ಇರುವಿಕೆ ಖಚಿತ ಪಡಿಸಿಕೊಂಡ ನಂತರ ಸಾಕಾನೆಗಳನ್ನು ಬಳಸಿ ಪಶು ವೈದ್ಯಾಧಿಕಾರಿಗಳ ನೆರವಿನಿಂದ ಅರವಳಿಕೆ ಮೂಲಕ ಹುಲಿ ಸೆರೆಗೆ ಕಾರ್ಯಾಚರಣೆ ನಿರ್ಧರಿಸಲಾಗಿದೆ.
ಸಾಕಾನೆ ಸಹಿತ ಕಾರ್ಯಾಚರಣೆ: ಈ ಸಂದರ್ಭ ಮಾತನಾಡಿದ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಸಂಕೇತ್ ಪೂವಯ್ಯ ಅವರು ಹುಲಿಯನ್ನು ಸೆರೆ ಹಿಡಿಯಲು ಕ್ಷೇತ್ರ ಶಾಸಕ ಎ.ಎಸ್. ಪೊನ್ನಣ್ಣ ಅವರು ಆದೇಶ ಮಾಡಿದ್ದಾರೆ. ಹುಲಿಯನ್ನು ಅರವಳಿಕೆ ನೀಡಿ ಸೆರೆಹಿಡಿದು ಪುನರ್ವಸತಿ ಮಾಡಲು ಸಾಕಾನೆ ಸಹಿತ ಕಾರ್ಯಾಚರಣೆ ಆರಂಭಿಸಲಾಗಿದೆ. ಕಾರ್ಯಾಚರಣೆ ವೇಳೆ ಪಕ್ಕದಲ್ಲಿ ಸುಮಾರು 300 ಎಕರೆ ಖಾಸಗಿ ಜಾಗದ ಕಾಡಿನಲ್ಲಿ ಹುಲಿ ಇರುವ ಶಂಕೆ ಇದೆ. ಈ ವ್ಯಾಪ್ತಿಯಲ್ಲಿ ಹುಲಿಯ ಚಲನವಲನ ಹಾಗೂ ಹೆಜ್ಜೆ ಗುರುತು ಸಿಕ್ಕಿದೆ. ಇದನ್ನು ಆಧರಿಸಿ ಹುಲಿ ಸೆರೆ ಕಾರ್ಯಾಚರಣೆ ಕೈಗೊತ್ತಿಕೊಳ್ಳಲಾಗಿದೆ ಎಂದು ತಿಳಿಸಿದರು.ಕಾರ್ಯಾಚರಣೆಯಲ್ಲಿ ಭಾಗವಹಿಸಿರುವ ಮಡಿಕೇರಿ ಇಲಾಖೆಯ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ನೆಹರು ಅವರು ಮಾತನಾಡಿ, ಕಳೆದ 15 ದಿನಗಳಿಂದ ಶ್ರೀಮಂಗಲ, ಬಿರುನಾಣಿ, ಟಿ. ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಸಾಕು ಪ್ರಾಣಿಗಳ ಮೇಲೆ ಹುಲಿ ನಿರಂತರವಾಗಿ ದಾಳಿ ನಡೆಸುತ್ತಿದೆ. ದುಬಾರೆ ಸಾಕಾನೆ ಶಿಬಿರದಿಂದ ಎರಡು ಸಾಕಾನೆಗಳನ್ನು ಬಳಸಿಕೊಳ್ಳಲಾಗಿದೆ. ಡಾ.ಚಿಟ್ಯಪ್ಪ, ಡಾ. ರಮೇಶ್, ಶಾರ್ಪ್ ಶೂಟರ್ ರಂಜನ್ ಸೇರಿ 60 ಮಂದಿ ಸಿಬ್ಬಂದಿ ಗಳನ್ನು ಕಾರ್ಯಾಚರಣೆಗೆ ಬಳಸಿಕೊಳ್ಳಲಾಗಿದೆ. ಈ ಹಿಂದೆ ಹುಲಿಯ ಚಹರೆ ಪತ್ತೆಯಾಗಿದ್ದು, ಇದಲ್ಲದೆ ತೆರಾಲು ಭಾಗದಲ್ಲಿ ದಾಳಿ ನಡೆಸುತ್ತಿದ್ದ ಹುಲಿ ಸಹ ಗುರುತು ಪತ್ತೆಯಾಗಿದೆ. ಈ ಹುಲಿಗಳನ್ನು ಸೆರೆ ಹಿಡಿಯಲು ಅನುಮತಿ ದೊರೆತಿದೆ. ಒಂದು ವೇಳೆ ಗಾಯವಾಗಿ ಗ್ರಾಮದಲ್ಲಿ ಹುಲಿ ಸುತ್ತುತ್ತಿದೆಯೇ ಎಂಬ ಬಗ್ಗೆ ಕಾರ್ಯಾಚರಣೆ ವೇಳೆ ಗೊತ್ತಾಗಲಿದೆ ಹಾಗೂ ಇದು ಯಾವ ಹುಲಿ ಎಂಬುದು ಸಹ ಕಾರ್ಯಾಚರಣೆಯಲ್ಲಿ ಗೊತ್ತಾಗಲಿದೆ ಎಂದು ತಿಳಿಸಿದರು.
ಈ ಸಂದರ್ಭ ಬಿರುನಾಣಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಆಮ್ಮತ್ತಿರ ರಾಜೇಶ್, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್, ಪೊನ್ನಂಪೇಟೆ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕಾಳಿಮಾಡ ಪ್ರಶಾಂತ್, ಟಿ. ಶೆಟ್ಟಿಗೇರಿ ವಲಯ ಕಾಂಗ್ರೆಸ್ ಅಧ್ಯಕ್ಷ ತೀತಿರ ಪ್ರಭು, ಸ್ಥಳೀಯ ಪ್ರಮುಖರಾದ ಅಪ್ಪಚಂಗಡ ಮೋಟಯ್ಯ, ಮಚ್ಚ ಮಾಡ ರಂಜಿ ಹಾಗೂ ಶ್ರೀಮಂಗಲ ವಲಯ ಅರಣ್ಯಧಿಕಾರಿ ಸಂತೋಷ್ ಹೂಗಾರ್, ಉಪ ಅರಣ್ಯಧಿಕಾರಿ ಶ್ರೀ ಶೈಲಾ, ಗ್ರಾಮಸ್ಥರು ಪಾಲ್ಗೊಂಡಿದ್ದರು.