ಸಾರಾಂಶ
ಮಣ್ಣಿನಲ್ಲಿ ಹುದುಗಿಸಿದ್ದ ಅರ್ಧ ಹುಲಿ ಕಳೇಬರ ಪತ್ತೆಯಾದ ಕಳವಳಕಾರಿ ಘಟನೆ ಹನೂರು ತಾಲೂಕಿನ ಪಚ್ಚೆದೊಡ್ಡಿ ಗ್ರಾಮದ ಸಮೀಪ ನಡೆದಿದೆ.
ಕನ್ನಡಪ್ರಭ ವಾರ್ತೆ, ಹನೂರು
ಮಣ್ಣಿನಲ್ಲಿ ಹುದುಗಿಸಿದ್ದ ಅರ್ಧ ಹುಲಿ ಕಳೇಬರ ಪತ್ತೆಯಾದ ಕಳವಳಕಾರಿ ಘಟನೆ ಹನೂರು ತಾಲೂಕಿನ ಪಚ್ಚೆದೊಡ್ಡಿ ಗ್ರಾಮದ ಸಮೀಪ ನಡೆದಿದೆ.ಮಲೆ ಮಹದೇಶ್ವರ ವನ್ಯಜೀವಿಧಾಮದ ಹನೂರು ವಲಯದ ಹನೂರು ಗಸ್ತಿನಲ್ಲಿರುವ ಪಚ್ಚೆದೊಡ್ಡಿ ಗ್ರಾಮದ ಸಮೀಪ ಗುರುವಾರ ಅರಣ್ಯ ಇಲಾಖೆ ಸಿಬ್ಬಂದಿ ಗಸ್ತು ತಿರುಗುವಾಗ ಹುಲಿಯ ಕಳೇಬರ ಮಣ್ಣಿನಲ್ಲಿ ಹುದಗಿಸಿರುವುದು ಪತ್ತೆಯಾಗಿದೆ. ಹುಲಿಯ ತಲೆ, ಭುಜ, ಮುಂಗಾಲುಗಳು ಪತ್ತೆಯಾಗಿದ್ದು ಉಳಿದ ಭಾಗಗಳು ಸಿಕ್ಕಿಲ್ಲ. ಅರಣ್ಯ ಇಲಾಖೆಗೆ ಸಿಕ್ಕಿರುವ ಕಳೇಬರದಲ್ಲಿ ಉಗುರುಗಳು ಮತ್ತು ಹಲ್ಲುಗಳು ಇದ್ದು, ಇನ್ನುಳಿದ ಭಾಗವನ್ನು ಪತ್ತೆ ಹಚ್ಚಲು ಅಧಿಕಾರಿ ಸಿಬ್ಬಂದಿ ಕಾರ್ಯಾಚರಣೆ ಮುಂದುವರೆಸಿದ್ದಾರೆ.
ಪ್ರಾಣಿಗಳ ಸಾವು ಪ್ರಾಣಿ ಪ್ರಿಯರ ಆತಂಕ:ಹನೂರು ತಾಲೂಕಿನ ಹೂಗ್ಯಂ ವಲಯ ಅರಣ್ಯ ಪ್ರದೇಶದಲ್ಲಿ ತಾಯಿ ಮತ್ತು ಮರಿಗಳು ಸೇರಿ ಐದು ಹುಲಿಗಳು ಸಾವನ್ನಪ್ಪಿದ್ದು ಜೊತೆಗೆ ಚಿರತೆ ಹಾಗೂ ಆನೆಗಳ ಸಾವು ನಿರಂತರವಾಗಿ ಸಂಭವಿಸಿವೆ. ಇದರಿಂದ ಪ್ರಾಣಿ ಪ್ರಿಯರು ಆತಂಕ ವ್ಯಕ್ತಪಡಿಸಿದ್ದಾರೆ. ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಪ್ರಾಣಿಗಳ ಸಾವಿನ ಬಗ್ಗೆ ನಿಖರವಾದ ಮಾಹಿತಿ ಒಳಗೊಂಡಂತೆ ಪತ್ತೆ ಹಚ್ಚಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಕಳ್ಳ ಬೇಟೆಯ ಪ್ರಕರಣವೆಂದು ಪರಿಗಣಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಮಲೆ ಮಹದೇಶ್ವರ ವನ್ಯಜೀವಿಧಾಮದ ಡಿಸಿಎಫ್ ಭಾಸ್ಕರ್ ತಿಳಿಸಿದ್ದಾರೆ.