ಹುಲಿ ಉಗುರು: ನಿರಪರಾಧಿ ಅರ್ಚಕರ ಬಂಧನ ಖಂಡನೀಯ
KannadaprabhaNewsNetwork | Published : Oct 31 2023, 01:17 AM IST
ಹುಲಿ ಉಗುರು: ನಿರಪರಾಧಿ ಅರ್ಚಕರ ಬಂಧನ ಖಂಡನೀಯ
ಸಾರಾಂಶ
ಹುಲಿ ಉಗುರು: ನಿರಪರಾಧಿ ಅರ್ಚಕರ ಬಂಧನ ಖಂಡನೀಯ
ಸಮಾಜದಲ್ಲಿ ಶೋಷಿತರಾಗುತ್ತಿರುವ ಬ್ರಾಹ್ಮಣರು: ಲಕ್ಷ್ಮೀನಾರಾಯಣ ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು ಹುಲಿ ಉಗುರು ಪ್ರಕರಣದಲ್ಲಿ ಇತ್ತೀಚೆಗೆ ಇಬ್ಬರು ನಿರಪರಾಧಿ ಅರ್ಚಕರನ್ನು ಬಂಧಿಸಿರುವ ಘಟನೆ ಖಂಡನೀಯ ಎಂದು ಖಾಂಡ್ಯ ಮಾರ್ಕಾಂಡೇಶ್ವರ ದೇವಸ್ಥಾನದ ತಂತ್ರಿಗಳಾದ ಕಮ್ಮರಡಿಯ ಲಕ್ಷ್ಮೀ ನಾರಾಯಣ ಸೋಮಯಾಜಿ ಹೇಳಿದರು. ಖಾಂಡ್ಯ ಮಾರ್ಕಾಂಡೇಶ್ವರ ದೇಗುಲದ ಸಭಾಂಗಣದಲ್ಲಿ ಭಾನುವಾರ ನಡೆದ ಶೃಂಗೇರಿ ಕ್ಷೇತ್ರ ಮಟ್ಟದ ಅರ್ಚಕ, ಪುರೋಹಿತರ ಸಭೆಯಲ್ಲಿ ಮಾತನಾಡಿದರು. ಪರಂಪರೆಯಿಂದ ಬಂದ ವಸ್ತುಗಳನ್ನು ಅರ್ಚಕರು ಧಾರಣೆ ಮಾಡಿದಕ್ಕೆ ಅವರಿಗೆ ನೀಡಿದ ತೊಂದರೆ ವೃತ್ತಿ ಬಾಂಧವರಿಗೆ ಬೇಸರ ತಂದಿದೆ. ಅಧಿಕಾರಿಗಳ ಆಲೋಚನಾ ಶಕ್ತಿಯಿಂದ ಅರ್ಚಕರಿಗೆ ತೊಂದರೆಯಾಗಿದ್ದು, ಬ್ರಾಹ್ಮಣ ಸಮುದಾಯ ಇಂದು ಸಂಘಟಿತ ರಾಗದೇ ಇರುವುದೇ ಇದಕ್ಕೆ ಕಾರಣ ಎಂದರು. ಕಾನೂನಿನ ಅರಿವಿಲ್ಲದ ಅರ್ಚಕರಿಗೆ ತೊಂದರೆಯಾದ ಇಂತಹ ಸಂದರ್ಭದಲ್ಲೂ ನಾವು ಸಂಘಟಿತರಾಗದೇ ಇದ್ದರೆ ಮುಂದಿನ ದಿನಗಳಲ್ಲಿ ಕಷ್ಟವಿದೆ. ಜೈಲಿಗೆ ಹೋದ ಅರ್ಚಕರು ದೇವಾಲಯದ ಪೂಜೆಗೆ ಅರ್ಹರಲ್ಲ. ಅವರು ಪೂಜೆ ಮಾಡುವುದು ಬೇಡ ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ ಅವರಾಗಿಯೇ ಯಾವುದೇ ತಪ್ಪುಗಳನ್ನು ಮಾಡಿಲ್ಲ. ಇಬ್ಬರು ಅರ್ಚಕರು ಅಪರಾಧಿಗಳಲ್ಲ. ಈ ಬಗ್ಗೆ ಶೃಂಗೇರಿ ಕಿರಿಯ ಶ್ರೀಗಳ ಬಳಿ ಮಾತನಾಡಿದ್ದು, ಇಬ್ಬರು ಅರ್ಚಕರಿಗೆ ಕೆಲವೊಂದು ಧಾರ್ಮಿಕ ವಿಧಿಗಳನ್ನು ಮಾಡಿಸಿ ಪೂಜಾ ಕೈಂಕರ್ಯ ಮುಂದುವರೆಸಲು ಹೇಳಿದ್ದಾರೆ. ಇಬ್ಬರು ಅರ್ಚಕರು ಸಹ ಪೂಜೆ ಸಲ್ಲಿಸಲು ಅರ್ಹರಿದ್ದಾರೆ ಎಂದರು. ಕೂಟ ಮಹಾಜಗತ್ತು ಅಂಗ ಸಂಸ್ಥೆಯ ಪ್ರಮುಖ ಬುಕಡಿಬೈಲು ವಿಶ್ವನಾಥಭಟ್ ಮಾತನಾಡಿ, ಹುಲಿ ಉಗುರು ಪ್ರಕರಣದಲ್ಲಿ ತನ್ನದಲ್ಲದ ತಪ್ಪಿಗೆ ಅರ್ಚಕರ ಬಂಧನವನ್ನು ಸಂಸ್ಥೆ ತೀವ್ರವಾಗಿ ಖಂಡಿಸಿದೆ. ಕೂಡಲೇ ಇಬ್ಬರನ್ನೂ ಸಹ ಕೇಸಿನಿಂದ ಖುಲಾಸೆ ಮಾಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು. ಕೇಸಿನಿಂದ ಇಬ್ಬರು ಅರ್ಚಕರನ್ನು ಖುಲಾಸೆ ಮಾಡದಿದ್ದರೆ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಅರ್ಚಕರು, ಪುರೋಹಿತರು ಖಾಂಡ್ಯ ಕ್ಷೇತ್ರಕ್ಕೆ ಬಂದು ಹೋರಾಟ ನಡೆಸಲಿದ್ದಾರೆ. ಅರ್ಚಕರನ್ನು ಸಮಾಜ ಎಷ್ಟು ಗೌರವಯುತವಾಗಿ ನೋಡಿಕೊಳ್ಳುತ್ತದೋ ಸಮಾಜ ಅಷ್ಟು ಉನ್ನತವಾಗಿ ಬೆಳೆಯಲಿದೆ. ಅರ್ಚಕ, ಪುರೋಹಿತರಿಗೆ ಇನ್ನೆಂದೂ ಕೂಡ ಇಂತಹ ಸಂಕಷ್ಟ ಬರಬಾರದು. ರಾಜ್ಯದ ಹಲವು ಗಣ್ಯ ವ್ಯಕ್ತಿಗಳ ಬಳಿಯಿರುವುದು ಪ್ಲಾಸ್ಟಿಕ್ ಉಗುರು, ಅರ್ಚಕರ ಬಳಿಯಿರುವುದು ನೈಜ ಎನ್ನುತ್ತಿರುವುದು ವಿಪರ್ಯಾಸ. ಅರ್ಚಕರು ಉದ್ದೇಶಪೂರ್ವಕವಾಗಿ ಅದನ್ನು ತಮ್ಮ ಬಳಿ ಇಟ್ಟುಕೊಂಡಿಲ್ಲ. ಈ ಬಗ್ಗೆ ನೋಟಿಸ್ ನೀಡದೆ ಏಕಾಏಕಿ ಬಂಧನ ಖಂಡನೀಯ ಎಂದರು. ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎಸ್.ವಿ.ಮಂಜುನಾಥ್ ಮಾತನಾಡಿ, ಪ್ರಕರಣದಲ್ಲಿ ಅರ್ಚಕರ ಮೇಲೆ ಅಚಾನಕ್ ಅಚಾತುರ್ಯವಾಗಿದೆ. ನೈಜ ಹುಲಿ ಉಗುರು ಇರುವ ಸೆಲೆಬ್ರಿಟಿಗಳ ಬಂಧನವಾಗಿಲ್ಲ. ಸಾಮಾನ್ಯ ಅರ್ಚಕರ ಬಂಧನವಾಗಿರುವುದು ದುರದೃಷ್ಟಕರ. ಮಲೆನಾಡು ಭಾಗದಲ್ಲಿ ಈ ಹಿಂದಿನಿಂದಲೂ ಇಂತಹ ವಸ್ತುಗಳನ್ನು ಇಟ್ಟುಕೊಳ್ಳುವ ಪದ್ಧತಿಯಿತ್ತು. ಈ ಬಗ್ಗೆ ಜನರಿಗೆ ತಿಳುವಳಿಕೆ ನೀಡಿ ವಾಪಾಸ್ ನೀಡಲು ಕಾಲಾವಕಾಶ ನೀಡಬೇಕಿತ್ತು. ಆದರೆ ಹಾಗೆ ಮಾಡಿಲ್ಲ. ಅರ್ಚಕರಿಗೆ ದೇವಾಲಯ ಸಮಿತಿ ಸಂಪೂರ್ಣ ಬೆಂಬಲ ನೀಡಲಿದೆ. ಹುಲಿ ಉಗುರು ಕುರಿತು ಕ್ಷೇತ್ರದ ಶಾಸಕರು ಅರಣ್ಯ ಸಚಿವರ ಬಳಿ ಚರ್ಚಿಸಿದ್ದು, ಸರ್ಕಾರ ಈ ಬಗ್ಗೆ ವಿನಾಯಿತಿ ನೀಡಲು ಸಿದ್ಧವಿದೆ. ಆದರೆ ಅಧಿಕಾರಿಗಳು ಸಿದ್ಧವಿಲ್ಲ ಎಂದರು. ಅರ್ಚಕರಾದ ನಾಗೇಂದ್ರ ಜೋಯಿಸ್, ಕೃಷ್ಣಾನಂದ ಹೊಳ್ಳ, ಕೇಶವಮೂರ್ತಿ ಭಟ್ ಸೇರಿದಂತೆ ಬ್ರಾಹ್ಮಣ ಮಹಾಸಭಾ, ಅರ್ಚಕ, ಪುರೋಹಿತರ ಪರಿಷತ್ ಹಾಗೂ ಕೂಟ ಮಹಾಜಗತ್ತು ಸಂಸ್ಥೆ ಪದಾಧಿಕಾರಿಗಳು ಭಾಗವಹಿಸಿದ್ದರು. ೩೦ಬಿಹೆಚ್‌ಆರ್ ೫: ಬಾಳೆಹೊನ್ನೂರು ಸಮೀಪದ ಖಾಂಡ್ಯದಲ್ಲಿ ನಡೆದ ಅರ್ಚಕ, ಪುರೋಹಿತರ ಸಭೆಯಲ್ಲಿ ಕೂಟ ಮಹಾಜಗತ್ತು ಅಂಗ ಸಂಸ್ಥೆಯ ವಿಶ್ವನಾಥ ಭಟ್ ಮಾತನಾಡಿದರು. ಲಕ್ಷ್ಮೀನಾರಾಯಣ ಸೋಮಯಾಜಿ, ನಾಗೇಂದ್ರ ಜೋಯಿಸ್, ಕೃಷ್ಣಾನಂದ ಹೊಳ್ಳ, ಕೇಶವಮೂರ್ತಿ ಭಟ್ ಇದ್ದರು.