ಹುಲಿ ಸಂಚಾರ ಗ್ರಾಮದಲ್ಲಿ ಅತಂಕ

| Published : Oct 28 2025, 12:44 AM IST

ಸಾರಾಂಶ

ಕಾಡಾನೆಗಳ ಜೊತೆಗೆ ಹುಲಿಯ ಸಂಚಾರವೂ ಆತಂಕ ಸೃಷ್ಟಿಸಿದೆ. ಕೂಲಿ ಕೆಲಸ ನಿರ್ವಹಿಸಲು ಭಯಪಡುವಂತಾಗಿದೆ.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯ 7ನೇ ಹೊಸಕೋಟೆ, ಕೆದಕಲ್, ಹೊರೂರು, ಕೊಡಗರಹಳ್ಳಿ ಕಂಬಿಬಾಣೆ ಚಿಕ್ಲಿಹೊಳೆ ಭಾಗಗಳಲ್ಲಿ ಕಾಡಾನೆಗಳ ಜೊತೆಗೆ ಹುಲಿಯ ಸಂಚಾರವೂ ಆತಂಕ ಸೃಷ್ಟಿಸಿದೆ. ತೋಟದ ಮಾಲೀಕರು ಕಾರ್ಮಿಕರು ತೋಟಗಳಲ್ಲಿ ಕೂಲಿ ಕೆಲಸ ನಿರ್ವಹಿಸಲು ಪ್ರಾಣಭಯ ಪಡುವಂತಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ. ಈಗಾಗಲೇ ಈ ವ್ಯಾಪ್ತಿಯಲ್ಲಿ ದಿನನಿತ್ಯ ಆನೆಗಳ ಸಂಚಾರ ಮತ್ತು ಹಾವಳಿ ವರದಿಯಾಗುತ್ತಿದೆ. ಬೆರಳೆಣಿಕೆ ಅನಾಹುತಗಳು ಸಂಭವಿಸಿದೆ. ಇದೀಗ ಹುಲಿ ಸಂಚಾರದ ಹೆಜ್ಜೆ ಗುರುತುಗಳು ಕಂಡು ಒಂದೆಡೆ ಆತಂಕವಾದರೆ ಇನ್ನೊಂದೆಡೆ ಪ್ರಾಣಪಾಯ ಸಂಭವಿಸುವ ಮುನ್ನ ಸಂಬಂಧಿಸಿದವರು ಎಚ್ಚೆತುಕೊಳ್ಳಬೇಕು. ಕೊಡಗರಹಳ್ಳಿ ಕೆದಕಲ್, ಹೊರೂರು, ಮೊದ್ದೂರು ಕಂಬಿಬಾಣೆ, ಚಿಕ್ಲಿಹೊಳೆ, 7ನೇ ಹೊಸಕೋಟೆ ಭಾಗಗಳಲ್ಲಿ ಶಾಲೆಗಳಿದ್ದು, ಸಾವಿರಾರು ಮಕ್ಕಳು ವಿವಿಧ ಭಾಗಗಳಿಂದ ಆಗಮಿಸಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ಕೆಲವು ಸಮಯದ ಹಿಂದೆ ದಕ್ಷಿಣ ಕೊಡಗಿನಲ್ಲಿ ಸದ್ದುಮಾಡಿದ ಹುಲಿಯ ದಾಳಿ ಇದೀಗ ಕೆದಕಲ್ ಮೂಲಕ ಆನೆ ದಾಳಿಯಿಡುವ ಎಲ್ಲಾ ಗ್ರಾಮಗಳಲ್ಲಿ ಆತಂಕ ಹುಟ್ಟುಹಾಕಿದೆ. ಅರಣ್ಯ ಇಲಾಖೆಯಿಂದ ಕಾಡಾನೆಗಳನ್ನು ಓಡಿಸುವುದು ಹೊರತು ಪಡಿಸಿದರೆ ಬೇರೆ ಇಲ್ಲದಿರುವುದು ದುರಾದೃಷ್ಟಕರ. ಈ ವ್ಯಾಪ್ತಿಯಲ್ಲಿ ಹೆಚ್ಚೆಂದರೆ 10ರಿಂದ15 ಕಾಡಾನೆಗಳು ಕಂಟಕಪ್ರಾಯವಾಗಿದ್ದು ಅವುಗಳನ್ನು ಸೆರೆಹಿಡಿದು ಪಳಗಿಸಬೇಕಾಗಿದೆ. ಸರ್ಕಾರ ಇಲಾಖೆಯ ಮೂಲಕ ಪರಿಹಾರ ಮತ್ತು ಹಿರಿಯ ಅಧಿಕಾರಿಯೊಬ್ಬರನ್ನು ನೊಡಲ್ ಅಧಿಕಾರಿಯಾಗಿ ನೇಮಿಸಿದ ಮಾತ್ರಕ್ಕೆ ಆನೆ ಮಾನವ ಸಂಘರ್ಷ ಮುಗಿಯುವುದಿಲ್ಲ. ಏಕ ಕಾಲಕ್ಕೆ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಷ್ಟವೆಂದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಹಂತ ಹಂತವಾಗಿ ತಾತ್ಕಾಲಿಕ ಮತ್ತು ದೀರ್ಘಕಾಲಿನ ಪರಿಹಾರ ಕ್ರಮಗಳನ್ನು ವೈಜ್ಞಾನಿಕ ಹಿನ್ನೆಲೆಯಲ್ಲಿ ತೆಗೆದುಕೊಳ್ಳಬೇಕಾಗಿದೆ.ಶೀಘ್ರ ಕ್ರಮ:

ಇದೇ ರೀತಿಯಲ್ಲಿ ಹುಲಿ ದಾಳಿ ಮಾಡಿದ ನಂತರ ಅಥವಾ ಸಾವು ನೋವು ಸಂಭವಿಸಿದ ಮೇಲೆ ಹುಲಿಯನ್ನು ಹಿಡಿಯುವುದು ಪ್ರಯೋಜನವಾಗುವುದಿಲ್ಲ. ಬದಲಾಗಿ ಹುಲಿ ಸಂಚಾರದ ಬಗ್ಗೆ ಪ್ರತ್ಯಕ್ಷಗೊಂಡಿರುವ ಬಗ್ಗೆ ಮಾಹಿತಿ ಕಲೆಹಾಕಿ ದಾಳಿಯನ್ನು ತಡೆಗಟ್ಟುವ ಕಾರ್ಯಕ್ಕೆ ಅರಣ್ಯ ಇಲಾಖೆ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಕೃಷಿಕರು ಮತ್ತು ಸಾರ್ವಜನಿಕರು ಆಗ್ರಹಿಸಿದ್ದಾರೆ. ಕಾಡಾನೆಯನ್ನು ಪಾರಂಪರಿಕ ಪ್ರಾಣಿ ಮತ್ತು ಅಳಿವಿನ ಅಂಚಿನಲ್ಲಿರುವ ಪ್ರಾಣಿ ಪ್ರಭೇದ ಎಂದು ಘೋಷಣೆ ಮಾಡಲಾಗಿದೆ. ಅದೇ ಹೊತ್ತಿಗೆ ಹುಲಿಯು ರಾಷ್ಟ್ರೀಯ ಪ್ರಾಣಿಯಾಗಿದ್ದು ಅದರ ಬಗ್ಗೆ ವಿಶೇಷ ಕ್ರಮ ಕೈಗೊಳ್ಳಬೇಕಾದ ಅಗತ್ಯ ಇದೀಗ ಕಂಡು ಬರುತ್ತಿದೆ. ಈ ನಿಟ್ಟಿನಲ್ಲಿ ಸಂಬಂಧಿಸಿ ಸರ್ಕಾರದ ಜನಪ್ರತಿನಿಧಿಗಳು ಹಾಗೂ ಇಲಾಖೆಯ ಮೇಲಾಧಿಕಾರಿಗಳು ಕ್ರಮಕ್ಕೆ ಮುಂದಾಗಬೇಕು ಎಂದು ಕೃಷಿಕರು ಆಗ್ರಹಿಸಿದ್ದಾರೆ. ಈ ಬಗ್ಗೆ ಸಂಸದರು, ಜಿಲ್ಲೆಯ, ಶಾಸಕರು, ಉಸ್ತುವಾರಿ ಸಚಿವರು, ಇಲಾಖೆಯ ನೊಡಲ್ ಅಧಿಕಾರಿ, ಉಸ್ತುವಾರಿ ಕಾರ್ಯದರ್ಶಿ ಒಡಕು ಮತ್ತು ಅಳಿವು ಉಳಿವಿನ ಪ್ರಶ್ನೆಯಾಗಿರುವ ಈ ಸಮಸ್ಯೆ ಕುರಿತು ಆದ್ಯತೆ ಮೇರೆಗೆ ಪ್ರಮುಖ ವಾಗಿ ಗಂಭೀರವಾದ ಚರ್ಚೆಗಳು ನಡೆಸಬೇಕಾದ ತುರ್ತು ಅವಶ್ಯಕತೆ ಎದುರಾಗಿದೆ.ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ:

ಕೆದಕಲ್ ಹೊರೂರು ಭಾಗ ಸೇರಿದಂತೆ ಚಿಕ್ಲಿಹೊಳೆ ಮತ್ತು ಆನೆಕಾಡು ವ್ಯಾಪ್ತಿಯಲ್ಲಿ ಹುಲಿ ಸಂಚಾರದ ಬಗ್ಗೆ ಮಾತುಗಳು ಕೇಳಿ ಬಂದ ಹಿನ್ನಲೆಯಲ್ಲಿ ಮೊದ್ದೂರು, ಹೊರೂರು ವ್ಯಾಪ್ತಿಯಲ್ಲಿ ಹುಲಿ ಹೆಜ್ಜೆ ಕಂಡು ಬಂದಿದೆ. ಈ ಬಗ್ಗೆ ಖಚಿತ ಪಡಿಸಿರುವ ಈ ವ್ಯಾಪ್ತಿಯ ಉಪ ಅರಣ್ಯ ವಲಯಾಧಿಕಾರಿ ದೇವಯ್ಯ ಅವರು ಇದು ಹುಲಿ ಹೆಜ್ಜೆಯೇ ಆಗಿದ್ದು ಹೊರೂರು ಭಾಗದಿಂದ ಮಡಿಕೇರಿ ಕಡೆ ಸಂಚಾರ ಮಾಡಿರಬಹುದೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಅವರ ಸೂಚನೆಯಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಹಾಲಿ ಸದಸ್ಯ ಮುಕ್ಕಾಟಿರ ಸಂಜಪೊನ್ನಪ್ಪ ಮಾತನಾಡಿ ಈಗಾಗಲೇ ಕಾಡಾನೆ ಹಾವಳಿಯಿಂದ ಹೈರಾಣಾಗಿದ್ದೇವೆ. ಇದೀಗ ಕಳೆದ 2 ದಿನಗಳಿಂದ ನಮ್ಮ ವ್ಯಾಪ್ತಿಯಲ್ಲಿ ಹುಲಿ ಸಂಚಾರದ ಬಗ್ಗೆ ಸುದ್ದಿ ಕೇಳಿ ಬಂದಿದ್ದು, ದಾರಿ ತೋಚದಂತಾಗಿದೆ. ಹವಾಮಾನ ವೈಪರೀತ್ಯ ಆಕಾಲಿಕ ಮಳೆಯಿಂದಾಗಿ ವರ್ಷಕ್ಕೊಮ್ಮೆ ಬರುವ ಫಸಲನ್ನು ನಂಬಿ ಬದುಕುವ ನಾವು ತಲೆ ಮೇಲೆ ಕೈಹೊತ್ತು ಕೂರುವಂತಾಗಿದೆ ಎಂದು ವಿಷಾದದಿಂದ ನುಡಿದರು.