ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ ಕಳೆದ ಹಲವು ಸಮಯದಿಂದ ಗ್ರಾಮದಲ್ಲಿ ನಿರಂತರವಾಗಿರುವ ಹುಲಿ ಮತ್ತು ಕಾಡಾನೆಗಳ ಹಾವಳಿ ಗ್ರಾಮಸ್ಥರಿಗೆ ತೀವ್ರ ಸಮಸ್ಯೆಯಾಗಿದೆ. ಈ ಕುರಿತು ಸಂಬಂಧಿಸಿದ ಅರಣ್ಯ ಇಲಾಖೆಗೆ ದೂರು ನೀಡಿದರೂ ಇದುವರೆಗೂ ಸ್ಪಂದಿಸಿಲ್ಲ ಎಂದು ಕೊಳತೋಡು ಗ್ರಾಮಸ್ಥರು ದೂರಿದ್ದಾರೆ.
ಈ ಕುರಿತು ಗ್ರಾಮಸ್ಥರ ಪರವಾಗಿ ಹೇಳಿಕೆ ನೀಡಿರುವ ಪೊನ್ನಂಪೇಟೆ ತಾಲೂಕಿನ ಕೊಳತೋಡು ಗ್ರಾಮದ ಮುರುವಂಡ ಸಾವನ್, ಕಳೆದ ಹಲವು ತಿಂಗಳಿಂದ ನಡೆಯುತ್ತಿರುವ ಈ ವನ್ಯಜೀವಿಗಳ ಉಪಟಳದಿಂದಾಗಿ ಜನ ಬೇಸತ್ತು ಹೋಗಿದ್ದಾರೆ. ಕಾಡಿನಲ್ಲಿ ಇರಬೇಕಾದ ವನ್ಯಜೀವಿಗಳು ನಾಡಿಗೆ ಬಂದು ಕೃಷಿಕರಿಗೆ ತೀವ್ರ ತೊಂದರೆ ನೀಡುತ್ತಿದ್ದು, ಇದಕ್ಕೆ ಅರಣ್ಯ ಇಲಾಖೆಯ ನಿರ್ಲಕ್ಷವೇ ಕಾರಣ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಹಲವು ತಿಂಗಳಿಂದ ಹುಲಿಯೊಂದು ಗ್ರಾಮದಲ್ಲಿ ನಿರಂತರವಾಗಿ ಅಡ್ಡಾಡುತ್ತಿದೆ. ತನ್ನ ಮರಿಯೊಂದಿಗೆ ಆಗಾಗ ಜನರ ಕಣ್ಣಿಗೆ ಕಾಣಿಸಿಕೊಳ್ಳುತ್ತಿರುವ ಈ ಹುಲಿಯ ಸಂಚಾರದಿಂದಾಗಿ ಗ್ರಾಮಸ್ಥರು ಭಯದಿಂದಲೇ ದಿನ ಕಳೆಯುವಂತಾಗಿದೆ. ಕಳೆದ ಎರಡು ದಿನಗಳ ಹಿಂದೆ ಗ್ರಾಮಸ್ಥರೊಬ್ಬರ ಎರಡು ನಾಯಿಗಳು ಕಾಣೆಯಾಗಿದ್ದು, ಇವುಗಳು ಹುಲಿಯ ದಾಳಿಗೆ ಬಲಿಯಾಗಿರಬಹುದು ಎಂದು ಶಂಕಿಸಲಾಗಿದೆ ಎಂದರು.ಹುಲಿ ಸಂಚಾರದಿಂದಾಗಿ ಕಾರ್ಮಿಕರು ಭಯಪಡುತ್ತಿದ್ದು, ತೋಟದ ಕೆಲಸಗಳಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಇದು ಕೃಷಿ ಚಟುವಟಿಕೆಗಳಿಗೆ ನೇರ ಪರಿಣಾಮ ಬೀರುತ್ತಿದೆ. ಅಲ್ಲದೆ ಈ ಭಾಗದಲ್ಲಿರುವ ಕೃಷಿಕರ ಮತ್ತು ಕೃಷಿ ಕಾರ್ಮಿಕರ ಮಕ್ಕಳು ಪ್ರತಿನಿತ್ಯ ಆತಂಕದಲ್ಲೇ ಶಾಲಾ-ಕಾಲೇಜುಗಳಿಗೆ ತೆರಳುವ ಪರಿಸ್ಥಿತಿ ನಿರ್ಮಾಣಗೊಂಡಿದೆ ಎಂದು ಸಾವನ್ ವಿವರಿಸಿದ್ದಾರೆ.ಗ್ರಾಮದ ಸಣ್ಣ ಮತ್ತು ಅತಿ ಸಣ್ಣ ಭತ್ತದ ಕೃಷಿಕರು ತಮಗಿರುವ ಅಲ್ಪ ಸ್ವಲ್ಪ ಗದ್ದೆಯಲ್ಲಿ ಭತ್ತದ ಕೃಷಿ ಮಾಡಿದ್ದಾರೆ. ಇದೀಗ ಭತ್ತ ಕೊಯ್ಲಿಗೆ ಬರುತ್ತಿದ್ದಂತೆ ಗ್ರಾಮಕ್ಕೆ ಲಗ್ಗೆ ಇಡುವ ಕಾಡಾನೆಗಳ ಹಿಂಡು ಭತ್ತದ ಗದ್ದೆಗೆ ನುಗ್ಗಿ ಇಡೀ ಕೃಷಿಯನ್ನೇ ನಾಶಗೊಳಿಸುತ್ತಿದೆ. ಪ್ರತಿ ದಿನ ರಾತ್ರಿ ಗದ್ದೆ ಭಾಗದಲ್ಲಿ ಕಾಡಾನೆಗಳು ಕಾಣಿಸಿಕೊಳ್ಳುತ್ತಿದ್ದು, ತೆನೆಗಳನ್ನು ತುಳಿದು ಧ್ವಂಸ ಮಾಡುತ್ತಿದೆ ಎಂದು ಸಮಸ್ಯೆ ವಿವರಿಸಿದ ಸಾವನ್, ಈ ಕುರಿತು ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರೆ ವಿವಿಧ ನೆಪಗಳನ್ನು ಒಡ್ಡಿ ಸಮಸ್ಯೆ ಪರಿಹಾರಕ್ಕೆ ಮುಂದಾಗುತ್ತಿಲ್ಲ ಎಂದು ಆಪಾದಿಸಿದ್ದಾರೆ.ಇದೀಗ ಭತ್ತ ಕೃಷಿ ಕಟಾವಿಗೆ ಬಂದಿದ್ದು, ವನ್ಯ ಪ್ರಾಣಿಗಳಿಂದ ಬೆಳೆಗಳಿಗೆ ರಕ್ಷಣೆ ನೀಡಬೇಕಾಗಿರುವುದು ಅರಣ್ಯ ಇಲಾಖೆಯ ಹೊಣೆಗಾರಿಕೆಯಾಗಿದೆ. ಆದ್ದರಿಂದ ಗ್ರಾಮದಲ್ಲಿ ನಿರಂತರವಾಗಿ ಕಾಣಿಸಿಕೊಳ್ಳುತ್ತಿರುವ ಹುಲಿಯ ಸೆರೆಗಾಗಿ ಬೋನನ್ನು ಅಳವಡಿಸಿ ಅರಣ್ಯ ಇಲಾಖೆ ಗ್ರಾಮದಲ್ಲಿ ಗಸ್ತು ನಡೆಸಬೇಕು. ಗ್ರಾಮಕ್ಕೆ ಲಗ್ಗೆ ಇಡುವ ಕಾಡಾನೆಗಳನ್ನು ಕಾಡಿಗಟ್ಟಿ ಅವುಗಳು ನಾಡಿಗೆ ಬರದಂತೆ ಸೂಕ್ತ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಗ್ರಾಮಸ್ಥರ ಪರವಾಗಿ ಒತ್ತಾಯಿಸಿದ್ದಾರೆ.
ಇನ್ನಾದರೂ ಅರಣ್ಯ ಇಲಾಖೆ ಸ್ಪಂದಿಸದಿದ್ದಲ್ಲಿ ಗ್ರಾಮದ ಮಹಿಳೆಯರು ಸೇರಿದಂತೆ ಸಾರ್ವಜನಿಕರೊಡಗೂಡಿ ಅರಣ್ಯ ಇಲಾಖೆಯ ಕಚೇರಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.