ಹುಲಿ ಹತ್ಯೆ ಕೇಸ್‌: ಮತ್ತೆ ಇಬ್ಬರ ಬಂಧನ

| Published : Oct 16 2025, 02:00 AM IST

ಸಾರಾಂಶ

ಮಲೆ ಮಹದೇಶ್ವರ ವನ್ಯಜೀವಿ ಧಾಮದ ಪಚ್ಚೆದೊಡ್ಡಿ ಅರಣ್ಯ ಪ್ರದೇಶದಲ್ಲಿ ಹುಲಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಕುಟುಂಬಸ್ಥರೇ ಕರೆ ತಂದು ಅರಣ್ಯಾಧಿಕಾರಿಗಳಿಗೆ ಒಪ್ಪಿಸಿದ್ದಾರೆ. ಆ ಮೂಲಕ ಬಂಧಿತರ ಸಂಖ್ಯೆ ಆರಕ್ಕೇರಿದೆ.

ಕನ್ನಡಪ್ರಭ ವಾರ್ತೆ ಹನೂರು

ಮಲೆ ಮಹದೇಶ್ವರ ವನ್ಯಜೀವಿ ಧಾಮದ ಪಚ್ಚೆದೊಡ್ಡಿ ಅರಣ್ಯ ಪ್ರದೇಶದಲ್ಲಿ ಹುಲಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಕುಟುಂಬಸ್ಥರೇ ಕರೆ ತಂದು ಅರಣ್ಯಾಧಿಕಾರಿಗಳಿಗೆ ಒಪ್ಪಿಸಿದ್ದಾರೆ. ಆ ಮೂಲಕ ಬಂಧಿತರ ಸಂಖ್ಯೆ ಆರಕ್ಕೇರಿದೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಪಚ್ಚೆದೊಡ್ಡಿ ಗ್ರಾಮದ ಪಚ್ಚಮಲ್ಲು, ಗಣೇಶ್, ಸಿದ್ದು ಹಾಗೂ ಕಾಂಚಳ್ಳಿ ಗ್ರಾಮದ ಸಂಪಿಗೆ ಮಾದೇವನನ್ನು ಬಂಧಿಸಿದ್ದ ಅರಣ್ಯಾಧಿಕಾರಿಗಳು ವಿಚಾರಣೆ ನಡೆಸಿ ಅ.10 ರಂದು ಕೊಳ್ಳೇಗಾಲದ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು ನಾಲ್ವರು ಆರೋಪಿಗಳನ್ನು 13 ದಿನಗಳವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಈ ಕೃತ್ಯದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಕಾಂಚಳ್ಳಿ ಗ್ರಾಮದ ಹಸುವಿನ ಮಾಲೀಕ ಚಂದು, ವಿವಿಧ ಕಳ್ಳಬೇಟೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಗಂಗನದೊಡ್ಡಿ ಗ್ರಾಮದ ಗೋವಿಂದ ಹಾಗೂ ಕಾಂಚಳ್ಳಿ ಗ್ರಾಮದ ಅಭಿಷೇಕ್ ಸೆರೆಗೆ ಅಧಿಕಾರಿಗಳು ಬಲೆಬೀಸಿದ್ದರು. ಇದರ ಬೆನ್ನಲ್ಲೇ ಮಂಗಳವಾರ ಕುಟುಂಬಸ್ಥರೇ ಆರೋಪಿಗಳಾದ ಚಂದು ಹಾಗೂ ಅಭಿಷೇಕ್‌ನನ್ನು ಪತ್ತೆಹಚ್ಚಿ ಹನೂರಿನ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಒಪ್ಪಿಸಿದರು. ವಶಕ್ಕೆ ಪಡೆದ ಎಸಿಎಫ್ ವಿರಾಜ್ ಹೊಸೂರ್, ವಲಯ ಅರಣ್ಯಾಧಿಕಾರಿಗಳಾದ ನಾಗರಾಜು ಹಾಗೂ ಜೀತೇಂದ್ರ ಕೃತ್ಯ ನಡೆದ ಸ್ಥಳ ಹಾಗೂ ಗ್ರಾಮಕ್ಕೆ ಕರೆದೊಯ್ದು ಮಹಜರು ನಡೆಸಿದರು. ಇದೀಗ ಬಂಧಿತರಾಗಿರುವ ಇಬ್ಬರನ್ನು ವಿಚಾರಣೆ ನಡೆಸಿ ಬುಧವಾರ ನ್ಯಾಯಾಲಯಕ್ಕೆ ಹಾಜರುಪಡಿಸುವುದಾಗಿ ಅರಣ್ಯಾಧಿಕಾರಿಯೊಬ್ಬರು ತಿಳಿಸಿದ್ದಾರೆ. ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿ ಗೋವಿಂದನ ಪತ್ತೆಗೆ ಅಧಿಕಾರಿಗಳು ಕ್ರಮವಹಿಸಿದ್ದಾರೆ.