ಸಾರಾಂಶ
ಗುಂಡ್ಲುಪೇಟೆ-ಸುಲ್ತಾನ್ ಬತ್ತೇರಿ ಹೆದ್ದಾರಿಯ ಮದ್ದಯ್ಯನಹುಂಡಿ ಕೆರೆ ಬಳಿ ಗುರುವಾರ ಮಧ್ಯಾಹ್ನ ಹಾಡು ಹಗಲೇ ಹುಲಿ ಕಾಣಿಸಿಕೊಂಡ ಹಿನ್ನೆಲೆ ಹುಲಿ ಪತ್ತೆಗೆ ಎಸಿಎಫ್ ಕೆ.ಸುರೇಶ್ ನೇತೃತ್ವದಲ್ಲಿ ಸಾಕಾನೆ ರೋಹಿತ್ ಜೊತೆಗೆ ಅರಣ್ಯ ಸಿಬ್ಬಂದಿಗಳ ಮೂಲಕ ಕೂಂಬಿಂಗ್ ಆರಂಭಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಗುಂಡ್ಲುಪೇಟೆ-ಸುಲ್ತಾನ್ ಬತ್ತೇರಿ ಹೆದ್ದಾರಿಯ ಮದ್ದಯ್ಯನಹುಂಡಿ ಕೆರೆ ಬಳಿ ಗುರುವಾರ ಮಧ್ಯಾಹ್ನ ಹಾಡು ಹಗಲೇ ಹುಲಿ ಕಾಣಿಸಿಕೊಂಡ ಹಿನ್ನೆಲೆ ಹುಲಿ ಪತ್ತೆಗೆ ಎಸಿಎಫ್ ಕೆ.ಸುರೇಶ್ ನೇತೃತ್ವದಲ್ಲಿ ಸಾಕಾನೆ ರೋಹಿತ್ ಜೊತೆಗೆ ಅರಣ್ಯ ಸಿಬ್ಬಂದಿಗಳ ಮೂಲಕ ಕೂಂಬಿಂಗ್ ಆರಂಭಿಸಿದ್ದಾರೆ.ಇತ್ತೀಚಿಗೆ ಬೇರಂಬಾಡಿ ರೈತ ರಾಜೇಶ್ ಜಮೀನಿನಲ್ಲಿ ಹುಲಿ ದಾಳಿ ನಡೆಸಿ ಕಾಡು ಹಂದಿ ಸಾಯಿಸಿತ್ತು. ಗುರುವಾರ ಮಧ್ಯಾಹ್ನ ಹಾಡು ಹಗಲೇ ಮದ್ದಯ್ಯನಹುಂಡಿ ಗ್ರಾಮದ ಬಳಿ ಹೆದ್ದಾರಿಗೆ ಹೊಂದಿಕೊಂಡಂತಿರುವ ಕೆರೆ ಬಳಿ ಹುಲಿ ಕಾಣಿಸಿಕೊಂಡಿತ್ತು. ಈ ಹಿನ್ನೆಲೆ ಎಸಿಎಫ್ ಕೆ.ಸುರೇಶ್ ಹುಲಿ ಕಾಣಿಸಿಕೊಂಡ ಸ್ಥಳದ ಸುತ್ತಮುತ್ತ ೧೦ ಕ್ಯಾಮೆರಾ ಕಟ್ಟಿಸಿದ್ದರು.
ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಕ್ಷೇತ್ರ ನಿರ್ದೇಶಕ ಎಸ್.ಪ್ರಭಾಕರನ್ ಸೂಚನೆ ಬಳಿಕ ಸಾಕಾನೆ ರೋಹಿತ್, ಪಶು ವೈದ್ಯ ಡಾ.ವಾಸೀ ಮಿರ್ಜಾ ಕರೆಯಿಸಿ ಹುಲಿ ಕಾಣಿಸಿಕೊಂಡ ಸ್ಥಳದ ಸುತ್ತ ಮುತ್ತ ಕೂಂಬಿಂಗ್ ನಡೆಸಿದರೂ ಹುಲಿ ಪತ್ತೆಯಾಗಿಲ್ಲ. ಕ್ಯಾಮೆರಾದಲ್ಲೂ ಸೆರೆಯಾಗಿಲ್ಲ ಎಂದು ಎಸಿಎಫ್ ಕೆ.ಸುರೇಶ್ ತಿಳಿಸಿದ್ದಾರೆ.ಈಗಾಗಲೇ ಹುಲಿ ಪತ್ತೆಗೆ ೧೬ ಕ್ಯಾಮೆರಾವನ್ನು ಹುಲಿ ಕಂಡುಬಂದ ಸ್ಥಳದ ಸುತ್ತಮುತ್ತ ಕಟ್ಟಲಾಗಿದ್ದು, ದ್ರೋಣ್ ಹಾರಾಟ ನಡೆಸಲಾಗಿದ್ದರೂ ಹುಲಿ ಪತ್ತೆಯಾಗಿಲ್ಲ. ಕಾರ್ಯಾಚರಣೆ ಶನಿವಾರವೂ ಮುಂದುವರಿಸಲಾಗುವುದು ಎಂದರು.
ಹುಲಿ ಪತ್ತೆಗೆ ಅಳವಡಿಸಲಾದ ಕ್ಯಾಮೆರಾದಲ್ಲಿ ಹುಲಿ ಫೋಟೋ ಸಿಕ್ಕರೆ ಮುಂದಿನ ಕಾರ್ಯಾಚರಣೆ ಬಗ್ಗೆ ಸ್ಪಷ್ಟ ಮಾಹಿತಿ ಸಿಗಲಿದೆ. ತಾಲೂಕಿನ ಮದ್ದಯ್ಯನಹುಂಡಿ ಕೆರೆ ಬಳಿ ಹಾಗೂ ಬೇರಂಬಾಡಿ ಗ್ರಾಮದ ರೈತರ ಜಮೀನಿನ ಬಳಿಕ ಕಾಣಿಸಿಕೊಂಡ ಹುಲಿ ವಯಸ್ಸಾಗಿದ್ದರೆ ಸೆರೆ ಹಿಡಿಯಲು ಇಲಾಖೆಯ ಅನುಮತಿ ಪಡಯಬೇಕಿದೆ. ಹಾಗಾಗಿ ಹುಲಿ ಪತ್ತೆಗೆ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದರು.