ಮೂರ್ನಾಲ್ಕು ದಿನಗಳಿಂದ ಗಂಗಾವತಿ ತಾಲೂಕಿನ ಅರಣ್ಯ ಪ್ರದೇಶದಲ್ಲಿ ಹುಲಿ ಕಾಣಿಸಿಕೊಳ್ಳುತ್ತಿರುವುದರಿಂದ ಗ್ರಾಮಸ್ಥರು ಅತಂಕಕ್ಕೆ ಒಳಗಾಗಿದ್ದಾರೆ. ಮಲ್ಲಾಪುರ, ಸಂಗಾಪುರ, ರಾಂಪುರ, ಕಡೆಬಾಗಿಲು, ತೆಂಬ ಅರಣ್ಯ ಪ್ರದೇಶ, ಹಳೇ ಕುಮಟಾ, ಹೇಮಗುಡ್ಡ, ಹಿರೇಬೆಣಕಲ್ ಗುಡ್ಡಗಾಡು ಪ್ರದೇಶಗಳ ಸಮೀಪ ಇರುವ ಗ್ರಾಮಸ್ಥರು ಭಯಗೊಂಡಿದ್ದಾರೆ.

ರಾಮಮೂರ್ತಿ ನವಲಿ

ಗಂಗಾವತಿ: ಕಿಷ್ಕಿಂದೆಯ ನಾಡಿನಲ್ಲಿ ಹುಲಿ ಕಾಣಿಸಿಕೊಂಡಿರುವುದು ಜನರಲ್ಲಿ ಆತಂಕ ಮೂಡಿಸಿದೆ.

ಕಳೆದ ಮೂರ್ನಾಲ್ಕು ದಿನಗಳಿಂದ ಗಂಗಾವತಿ ತಾಲೂಕಿನ ಆನೆಗೊಂದಿಯ ತೆಂಬ ಎನ್ನುವ ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆ ಅಳವಡಿಸಿದ್ದ ಸಿಸಿ ಕ್ಯಾಮೆರಾದಲ್ಲಿ ಹುಲಿ ಕಾಣಿಸಿಕೊಂಡಿದೆ. ಇದಕ್ಕಿಂತ ಪೂರ್ವದಲ್ಲಿ ರೆಸಾರ್ಟ್ ಒಂದರ ಸಿಸಿ ಕ್ಯಾಮೆರಾದಲ್ಲೂ ಹುಲಿಯ ಚಲನವಲನ ಸೆರೆಯಾಗಿದೆ.

ಗಂಗಾವತಿ ಸುತ್ತಮುತ್ತಲಿನ 7 ಗುಡ್ಡಗಳ ಪ್ರದೇಶದಲ್ಲಿ ಚಿರತೆ, ಕರಡಿಗಳಿವೆ. ಸಣ್ಣಪ್ರಾಣಿಗಳೂ ಸಾಕಷ್ಟಿವೆ. ಈ ಹಿಂದೆ ಚಿರತೆ ಸೆರೆ ಹಿಡಿಯಲು ಹಲವು ಕಾರ್ಯಾಚರಣೆಗಳು ನಡೆದಿವೆ. ಅರಣ್ಯ ಇಲಾಖೆಯವರು ಆನೆಗಳನ್ನು ಕರೆ ತಂದಿದ್ದರು. ಗುಡ್ಡಗಾಡುಗಳಲ್ಲಿ ಡ್ರೋಣ್‌ ಕ್ಯಾಮೆರಾ ಕಾರ್ಯಾಚರಣೆ ನಡೆಸಿದ್ದರು.

ಈಗ ದಟ್ಟ ಅರಣ್ಯ ಪ್ರದೇಶದಲ್ಲಿರುವ ಹುಲಿ ಬಯಲುಸೀಮೆಗೆ ಬಂದಿದ್ದು ಹೇಗೆ? ಎನ್ನುವುದು ಅರಣ್ಯ ಇಲಾಖೆ ಮುಂದಿರುವ ಪ್ರಶ್ನೆ. ದಾಂಡೇಲಿ, ಬಂಡಿಪುರ, ಚಿಕ್ಕಮಗಳೂರು, ನಾಗರಹೊಳೆ ದಟ್ಟ ಅರಣ್ಯ ಪ್ರದೇಶದಿಂದ ಹುಲಿ ಬಂದಿರಬಹುದು ಎಂಬುದು ಅರಣ್ಯ ಇಲಾಖೆಯ ಅಂದಾಜು. ಇನ್ನೊಂದೆಡೆ ಕಮಾಲಪುರ ಬಳಿ ಇರುವ ಅಟಲ್ ಬಿಹಾರಿ ವಾಜಪೇಯಿ ಪ್ರಾಣಿ ಸಂಗ್ರಹಾಲಯದಿಂದ ತಪ್ಪಿಸಿಕೊಂಡು ಬಂದಿರಬಹುದು ಎಂದು ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ.

ಆತಂಕದಲ್ಲಿ ಗ್ರಾಮಸ್ಥರು: ಮೂರ್ನಾಲ್ಕು ದಿನಗಳಿಂದ ಗಂಗಾವತಿ ತಾಲೂಕಿನ ಅರಣ್ಯ ಪ್ರದೇಶದಲ್ಲಿ ಈ ಹುಲಿ ಕಾಣಿಸಿಕೊಳ್ಳುತ್ತಿರುವುದರಿಂದ ಗ್ರಾಮಸ್ಥರು ಅತಂಕಕ್ಕೆ ಒಳಗಾಗಿದ್ದಾರೆ. ಮಲ್ಲಾಪುರ, ಸಂಗಾಪುರ, ರಾಂಪುರ, ಕಡೆಬಾಗಿಲು, ತೆಂಬ ಅರಣ್ಯ ಪ್ರದೇಶ, ಹಳೇ ಕುಮಟಾ, ಹೇಮಗುಡ್ಡ, ಹಿರೇಬೆಣಕಲ್ ಗುಡ್ಡಗಾಡು ಪ್ರದೇಶಗಳ ಸಮೀಪ ಇರುವ ಗ್ರಾಮಸ್ಥರು ಭಯಗೊಂಡಿದ್ದಾರೆ. ಕೆಲವು ತಿಂಗಳ ಹಿಂದೆ ಈ ಗ್ರಾಮಗಳ ಜನರು ಚಿರತೆ ದಾಳಿಯಿಂದ ತತ್ತರಿಸಿ ಹೋಗಿದ್ದರು.

ಹುಲಿ ಸೆರೆಗೆ ಸಿದ್ಧತೆ: ಅರಣ್ಯ ಪ್ರದೇಶದಲ್ಲಿ ಸಂಚರಿಸುತ್ತಿರುವ ಹುಲಿ ಸೆರೆ ಹಿಡಿಯಲು ಅರಣ್ಯ ಮತ್ತು ಪೊಲೀಸ್ ಇಲಾಖೆ ಸಿಬ್ಬಂದಿ ಸಿದ್ಧತೆ ನಡೆಸಿದ್ದಾರೆ. ಸೋಮವಾರ ವಿರೂಪಾಪುರಗಡ್ಡೆಯ ಅರಣ್ಯ ಇಲಾಖೆಯ ಪ್ರವಾಸಿ ಮಂದಿರದಲ್ಲಿ ಬಳ್ಳಾರಿ, ಕೊಪ್ಪಳದ ಹಿರಿಯ ಅರಣ್ಯ ಅಧಿಕಾರಿಗಳು ಸಭೆ ನಡೆಸಿ, ಕಾರ್ಯಾಚರಣೆ ಕುರಿತು ಚರ್ಚಿಸಿದ್ದಾರೆ. ಈ ವೇಳೆ ಬಳ್ಳಾರಿಯ ಐಜಿಪಿ ಡಾ. ಹರ್ಷ ಗುಪ್ತಾ ಅವರು ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಿ, ಕೂಡಲೆ ಹುಲಿ ಸೆರೆ ಹಿಡಿಯುವಂತೆ ಸೂಚಿಸಿದ್ದಾರೆ. ಕಾರ್ಯಾಚರಣೆಗೆ ಬಂಡಿಪುರ ತಜ್ಞರನ್ನು ಕರೆಸಲು ಚರ್ಚಿಸಲಾಗಿದೆ.

ಈಗಾಗಲೇ 15 ಕಾನ್‌ಸ್ಟೆಬಲ್‌ಗಳು, ಜಿಲ್ಲಾ ಪೊಲೀಸ್ ಪಡೆ, 25ಕ್ಕೂ ಹೆಚ್ಚು ಅರಣ್ಯ ಇಲಾಖೆ ಸಿಬ್ಬಂದಿ, ಬೋನ್ ಅಳವಡಿಕೆ ಸೇರಿದಂತೆ ಕಾರ್ಯಾಚರಣೆಗೆ ಅವಶ್ಯವಿರುವ ಸಲಕರಣೆಗಳನ್ನು ಸಿದ್ಧಪಡಿಸಿಕೊಂಡಿದ್ದಾರೆ.ಹುಲಿಯ ಚಲನವಲನದ ಬಗ್ಗೆ ನಿಗಾ ವಹಿಸಲಾಗಿದೆ. ಈಗಾಗಲೇ ಸಿಸಿ ಕ್ಯಾಮೆರಾ ದೃಶ್ಯಾವಳಿ ಆಧಾರದಲ್ಲಿ ಕೆಲವೊಂದು ಅರಣ್ಯ ಪ್ರದೇಶಗಳನ್ನು ಗುರುತಿಸಲಾಗಿದೆ. ಕಾರ್ಯಾಚರಣೆಗೆ ಇಲಾಖೆಯ ಹಿರಿಯ ಅಧಿಕಾರಿಗಳ ಮಾರ್ಗದರ್ಶನ ಪಡೆಯಲಾಗಿದೆ. ಶೀಘ್ರದಲ್ಲಿ ಹುಲಿ ಸೆರೆ ಹಿಡಿದು ಬೇರೆ ಅರಣ್ಯ ಪ್ರದೇಶಕ್ಕೆ ಬಿಡಲಾಗುತ್ತದೆ ಎಂದು ವಲಯ ಅರಣ್ಯಾಧಿಕಾರಿ ಬಸವರಾಜ್ ಹೇಳಿದರು.

ಗಂಗಾವತಿ ತಾಲೂಕಿನ 7 ಗುಡ್ಡಗಳ ಪ್ರದೇಶದಲ್ಲಿ ಹುಲಿ ಕಾಣಿಸಿಕೊಂಡಿದ್ದರಿಂದ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ಮೊದಲನೇ ಬಾರಿಗೆ ಹುಲಿ ಕಾಣಿಸಿಕೊಂಡಿದ್ದರಿಂದ ಬೇರೆ ಪ್ರದೇಶದಿಂದ ಬಂದಿರಬಹುದು ಎಂದು ಊಹಿಸಲಾಗುತ್ತದೆ. ಕೂಡಲೆ ಅಧಿಕಾರಿಗಳು ಕ್ರಮ ಕೈಗೊಂಡು ಹುಲಿ ರಕ್ಷಿಸುವ ಜತೆಗೆ ಜನರ ಆತಂಕ ತಪ್ಪಿಸಬೇಕು ಎಂದು ಮಾಜಿ ಎಂಎಲ್‌ಸಿ ಎಚ್.ಆರ್. ಶ್ರೀನಾಥ ಹೇಳಿದರು.