ಶಿವಾನಂದ ಗೊಂಬಿ
ಹುಬ್ಬಳ್ಳಿಕೊಲ್ಲಿ ಯುದ್ಧದ ಎಫೆಕ್ಟ್ ಸಿಲಿಂಡರ್, ಕಚ್ಚಾ ತೈಲದ ಬಳಿಕ ಇದೀಗ ಟೈಲ್ಸ್ ಉದ್ಯಮದ ಮೇಲೂ ಬಿದ್ದಿದೆ. ಹೀಗಾಗಿ ಟೈಲ್ಸ್ ಫ್ಯಾಕ್ಟರಿಗಳು ಒಂದೊಂದಾಗಿ ಬಂದ್ ಆಗುತ್ತಿದ್ದು, ಕಟ್ಟಡ ಕೆಲಸಗಳಿಗೆ ಕುತ್ತು ಬರುತ್ತಿದೆ. ಭಾರತದಲ್ಲಿ 1800ಕ್ಕೂ ಅಧಿಕ ಟೈಲ್ಸ್ ಫ್ಯಾಕ್ಟರಿಗಳಿದ್ದರೆ ಇದರಲ್ಲಿ ಬರೋಬ್ಬರಿ 1000ಕ್ಕೂ ಅಧಿಕ ಫ್ಯಾಕ್ಟರಿಗಳು ಇರುವುದು ಗುಜರಾತ್‌ನ ಮೊರಬಿ ಜಿಲ್ಲೆಯಲ್ಲಿ. ಈ ಪ್ರದೇಶದಿಂದಲೇ ಬಹುತೇಕ ರಾಜ್ಯಗಳಿಗೆ ಸರಬರಾಜು ಆಗುತ್ತದೆ. ರಾಜಸ್ತಾನ, ಕರ್ನಾಟಕ, ಆಂಧ್ರಪ್ರದೇಶ ಸೇರಿದಂತೆ ವಿವಿಧೆಡೆ ಫ್ಯಾಕ್ಟರಿಗಳಿದ್ದರೂ ಹೆಚ್ಚು ಫ್ಯಾಕ್ಟರಿ ಹೊಂದಿರುವುದು ಮೊರಬಿ.
ಟೈಲ್ಸ್ ತಯಾರಿಕೆಗೆ ಪ್ರಮುಖವಾಗಿ ಬೇಕಿರುವ ಪ್ರೊಪೈನ್ ಗ್ಯಾಸ್ ಮಧ್ಯ ಪ್ರಾಚ್ಯ ದೇಶಗಳಿಂದ ಬರುತ್ತದೆ. ಇದೀಗ ಅಲ್ಲಿ ಯುದ್ಧ ನಡೆಯುತ್ತಿರುವ ಪರಿಣಾಮ ಪೂರೈಕೆ ಸ್ಥಗಿತವಾಗಿದೆ. ಸಂಗ್ರಹಿಸಿ ಇಟ್ಟುಕೊಂಡಿದ್ದ ಗ್ಯಾಸ್ ಖಾಲಿಯಾಗಿದ್ದು ಅರ್ಧಕ್ಕೂ ಹೆಚ್ಚು ಫ್ಯಾಕ್ಟರಿಗಳು ಬಾಗಿಲು ಮುಚ್ಚಿದರೆ, ಬೆರೆಳಣಿಕೆಯಷ್ಟು ಮಾತ್ರ ಉತ್ಪಾದನೆ ಮಾಡುತ್ತಿವೆ. ಇನ್ನೊಂದು ವಾರ ಕಳೆದರೆ ಅವೂ ಸಹ ಬಾಗಿಲು ಮುಚ್ಚಲಿವೆ.ಶೇ. 30ರಷ್ಟು ಸರಬರಾಜು:
ರಾಜ್ಯದಲ್ಲಿ ಶಿರಾ, ಹೊಸಕೋಟೆ, ಬೆಂಗಳೂರು, ಮಂಗಳೂರು ಸೇರಿದಂತೆ ಕೆಲವೆಡೆ ಟೈಲ್ಸ್ ಫ್ಯಾಕ್ಟರಿಗಳಿವೆ. ಆದರೆ ಗುಜರಾತ್‌ನಷ್ಟು ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸುವುದಿಲ್ಲ ಎಂದು ಹೇಳಲಾಗುತ್ತಿದೆ. ಹೀಗಾಗಿ ಬೇಡಿಕೆಗೆ ತಕ್ಕಷ್ಟು ಪೂರೈಕೆಯಾಗದೆ ಶೇ. 30ರಷ್ಟು ಮಾತ್ರ ಸರಬರಾಜು ಮಾಡಲಾಗುತ್ತಿದೆ. ಇದರಿಂದ ಟೈಲ್ಸ್ ಉದ್ಯಮಕ್ಕೆ ಹೊಡೆತ ಬೀಳುವ ಜತೆಗೆ ಕಟ್ಟಡ ಕೆಲಸಗಳಿಗೂ ಹಿನ್ನಡೆಯಾಗಿದೆ. ಇರುವುದೆಲ್ಲವೂ ಖಾಲಿಯಾಗುತ್ತಿದ್ದು ಹೇಗೆ ಮಾಡುವುದು ಎಂದು ತಿಳಿಯುತ್ತಿಲ್ಲ. ಇದೇ ಪರಿಸ್ಥಿತಿ ಮುಂದುವರಿದರೆ ಮತ್ತಷ್ಟು ತೊಂದರೆಯಾಗುತ್ತದೆ ಎಂದು ಹುಬ್ಬಳ್ಳಿಯ ಟೈಲ್ಸ್ ಮಾರಾಟಗಾರೊಬ್ಬರು ಹೇಳಿದರು.
ದರವೂ ಹೆಚ್ಚಳ:
ಬೇಡಿಕೆಗೆ ತಕ್ಕಷ್ಟು ಟೈಲ್ಸ್ ಪೂರೈಕೆಯಾಗದ ಹಿನ್ನಲೆ ದರದಲ್ಲಿ ಶೇ. 20ರಿಂದ 25ರಷ್ಟು ಹೆಚ್ಚಿದೆ, ಕಟ್ಟಡ ಪಂಬ್ಲಿಂಗ್‌ಗೆ ಬಳಸುವ ಪಿವಿಸಿ ಹಾಗೂ ಯುಪಿವಿಸಿ ಸಾಮಗ್ರಿಗಳ ಬೆಲೆಯೂ ಶೇ. 20-30ರಷ್ಟು ಹೆಚ್ಚಳವಾಗಿದೆ. ಪಿವಿಸಿ, ಯುಪಿವಿಸಿ ಪೈಪ್ ಸೇರಿದಂತೆ ವಿವಿಧ ವಸ್ತು ತಯಾರಿಸಲು ಗ್ಯಾಸ್ ಅತ್ಯಗತ್ಯವಂತೆ. ಹೀಗಾಗಿ ಅವುಗಳ ಉತ್ಪಾದನೆಯೂ ದಿನೇ ದಿನೇ ಕಡಿಮೆಯಾಗುತ್ತಿದೆ. ಹೀಗಾಗಿ ದರ ಹೆಚ್ಚಳವಾಗಿದೆ ಎಂದು ಎಂಜಿನಿಯರ್‌ರೊಬ್ಬರು ಕನ್ನಡಪ್ರಭಕ್ಕೆ ತಿಳಿಸಿದರು.ಗುಜರಾತ್‌ನ ಮೊರಬಿಯಿಂದ ಕರ್ನಾಟಕ ಸೇರಿದಂತೆ ಬಹುತೇಕ ರಾಜ್ಯಗಳಿಗೆ ಟೈಲ್ಸ್ ಸರಬರಾಜು ಆಗುತ್ತಿದೆ. ಆದರೆ, ಪ್ರೊಪೈನ್ ಗ್ಯಾಸ್ ಕೊರತೆಯಿಂದ ಹಲವು ಫ್ಯಾಕ್ಟರಿ ಬಂದಾಗಿದ್ದರೆ, ಕೆಲ ಫ್ಯಾಕ್ಟರಿಗಳು ಬೇಡಿಕೆಗೆ ತಕ್ಕಷ್ಟು ಉತ್ಪಾದಿಸುತ್ತಿಲ್ಲ. ಸದ್ಯಕ್ಕೆ ದಾಸ್ತಾನು ಇರುವುದರಲ್ಲಿ ವ್ಯಾಪಾರ ಮಾಡುತ್ತಿದ್ದೇವೆ.ಅನಿಲ್, ಹುಬ್ಬಳ್ಳಿಯಲ್ಲಿ ಟೈಲ್ಸ್ ಮಾರಾಟಗಾರರುಟೈಲ್ಸ್ ಅಷ್ಟೇ ಅಲ್ಲ. ಪಿವಿಸಿ ಸಾಮಗ್ರಿ ಮೇಲೂ ಕೊಲ್ಲಿ ದೇಶದ ಯುದ್ಧದ ಎಫೆಕ್ಟ್ ಆಗಿದೆ. ಪಿವಿಸಿ ಪೈಪ್ಸ್ ಸೇರಿದಂತೆ ಇತರೆ ಸಾಮಗ್ರಿ ಶೇ. 20ರಿಂದ 30 ರಷ್ಟು ಹೆಚ್ಚಳವಾಗುತ್ತಿದೆ. ಕಟ್ಟಡದ ಕಾಮಗಾರಿಗಳ ಮೇಲೆ ಪರಿಣಾಮ ಬೀರುತ್ತಿದೆ.
ವಿಜಯ ಮೆಹರವಾಡೆ, ಸಿವಿಲ್ ಎಂಜಿನಿಯರ್, ಹುಬ್ಬಳ್ಳಿ