ದೇವಿಕೊಪ್ಪದಲ್ಲಿನ ಮರಮುಟ್ಟು ಡಿಪೋ ಬಂದ್‌

| Published : Aug 20 2024, 12:48 AM IST

ದೇವಿಕೊಪ್ಪದಲ್ಲಿನ ಮರಮುಟ್ಟು ಡಿಪೋ ಬಂದ್‌
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯ ಸರ್ಕಾರ ದೇವಿಕೊಪ್ಪದ ಟಿಂಬರ್‌ ಡಿಪೋ ಬಂದ್‌ ಮಾಡಿ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಕಿರುವತ್ತಿಯಲ್ಲಿನ ಡಿಪೋಕ್ಕೆಮರಗಳನ್ನು ಸ್ಥಳಾಂತರಿಸಲು ಆದೇಶಿಸಿದೆ.

ಶಿವಾನಂದ ಗೊಂಬಿ

ಹುಬ್ಬಳ್ಳಿ:

ಕಳೆದ ನಾಲ್ಕೈದು ದಶಕಗಳಿಂದ ಇದ್ದ ಕಲಘಟಗಿ ತಾಲೂಕಿನ ದೇವಿಕೊಪ್ಪ ಗ್ರಾಮದ ಮರಮುಟ್ಟು ಸಂಗ್ರಹಗಾರ (ಅರಣ್ಯ ಇಲಾಖೆ ಟಿಂಬರ್‌ ಡಿಪೋ)ವನ್ನು ರಾಜ್ಯ ಸರ್ಕಾರ ಈಗ ಬಂದ್‌ ಮಾಡಿದೆ. ಇದಕ್ಕೆ ಧಾರವಾಡ ಜಿಲ್ಲೆಯ ಬಡಿಗರು (ಕಾರ್ಪೆಂಟರ್‌) ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕಾಡಲ್ಲಿ ಮರಗಳು ನೈಸರ್ಗಿಕವಾಗಿ ಬಿದ್ದರೆ, ಅಂದರೆ ಗಾಳಿ-ಮಳೆಯಿಂದಾಗಲಿ ಅಥವಾ ವಯಸ್ಸಾದ ಮರಗಳು ನೆಲಕುರುಳಿದರೆ ಅವುಗಳನ್ನು ಈ ಟಿಂಬರ್‌ ಡಿಪೋಗಳಿಗೆ ಸಾಗಿಸಲಾಗುತ್ತದೆ. ಇನ್ನು ಕಳ್ಳರು ಮರಗಳನ್ನು ಕಡಿದು ಸಾಗಿಸುವಾಗ ಸಿಕ್ಕು ಬಿದ್ದರೆ ಅವರಿಂದ ವಶಪಡಿಸಿಕೊಳ್ಳುವ ಮರದ ದಿನ್ನೆಗಳನ್ನೆಲ್ಲ ಇದೇ ಡಿಪೋಗಳಲ್ಲಿ ಸಂಗ್ರಹಿಸಲಾಗುತ್ತದೆ. ಹೀಗೆ ಸಂಗ್ರಹಿಸಿಟ್ಟ ಮರದ ದಿನ್ನೆಗಳನ್ನು ಆರು ತಿಂಗಳಿಗೊಮ್ಮೆಯೋ, ವರ್ಷಕ್ಕೊಮ್ಮೆಯೋ ಅವು ಸಂಗ್ರಹವಾಗಿದ್ದನ್ನು ಲೆಕ್ಕ ಹಾಕಿ ಹರಾಜು ಹಾಕಲಾಗುತ್ತದೆ. ಇವುಗಳಲ್ಲಿ ಹೆಚ್ಚಾಗಿ ಸಾಗವಾನಿ, ನಂದಿ, ಕರಿಮತ್ತಿ ಸೇರಿದಂತೆ ಮತ್ತಿತರರ ಕಟ್ಟಿಗೆ ನಾಟಾಗಳೇ ಹೆಚ್ಚು. ಇವುಗಳನ್ನು ಕನಿಷ್ಠವೆಂದರೂ ಐದಾರು ತಿಂಗಳು ಒಂದೆಡೆ ಇಡುವುದರಿಂದ ಪೂರ್ಣ ಪ್ರಮಾಣದಲ್ಲಿ ಒಣಗಿರುತ್ತವೆ. ಹೀಗಾಗಿ ಇವುಗಳಿಗೆ ಬೆಲೆ ಜಾಸ್ತಿ. ಬಡಿಗತನ ಮಾಡುವವರು, ಸಾರ್ವಜನಿಕರು ಹರಾಜಿನಲ್ಲಿ ಪಾಲ್ಗೊಂಡು ಖರೀದಿಸುತ್ತಾರೆ. ಇಲ್ಲಿ ಸಿಗುವ ಸಾಗವಾನಿ ಸೇರಿದಂತೆ ವಿವಿಧ ಬಗೆಯ ಕಟ್ಟಿಗೆಗಳು ಕಟ್ಟಡದ ಬಾಗಿಲು, ಚೌಕಟ್ಟು, ಟೇಬಲ್‌, ಕುರ್ಚಿ ಸೇರಿದಂತೆ ಗೃಹಬಳಕೆಯ ವಿವಿಧ ವಸ್ತುಗಳನ್ನು ಮಾಡಲು ಬಹಳಷ್ಟು ಅನುಕೂಲವಾಗಿರುತ್ತವೆ.

ಈಗ ಆಗಿರುವುದೇನು?

ಕಲಘಟಗಿ ತಾಲೂಕು ಮಲೆನಾಡಿನ ವ್ಯಾಪ್ತಿಗೆ ಬರುತ್ತದೆ. ಇಲ್ಲಿ ಮಳೆ ಜಾಸ್ತಿಯಾಗಿರುವುದರಿಂದ ಅರಣ್ಯ ಪ್ರದೇಶವೂ ಹೇರಳವಾಗಿಯೇ ಇದೆ. ಹೀಗಾಗಿ ಸಹಜವಾಗಿ ಮರಗಳ್ಳತನ, ಕಾಡಿನಲ್ಲಿ ದೊಡ್ಡದೊಡ್ಡ ಮರಗಳು ನೆಲಕ್ಕುರುಳುವುದು ಕೂಡ ಮಾಮೂಲಿ. ಈ ಹಿನ್ನೆಲೆಯಲ್ಲಿ ಕಳೆದ 4 ದಶಕಗಳಿಗಿಂತಲೂ ಮೊದಲು ಸರ್ಕಾರ ಕಲಘಟಗಿ ತಾಲೂಕಿನ ದೇವಿಕೊಪ್ಪ ಗ್ರಾಮದಲ್ಲಿ ಮರಮಟ್ಟು ಸಂಗ್ರಹಗಾರವನ್ನು ಮಾಡಿತ್ತು. ಅಲ್ಲಿಂದ ಈ ವರೆಗೂ ಚೆನ್ನಾಗಿಯೇ ನಡೆಯುತ್ತಿದೆ. ಅದರಲ್ಲೂ ಕಲಘಟಗಿ ಹಾಗೂ ಅಳ್ನಾವರ ತಾಲೂಕುಗಳಲ್ಲಿ ಬಡಿಗತನ ಜಾಸ್ತಿ. ಇವರಿಗೆಲ್ಲ ದೇವಿಕೊಪ್ಪ ಹಾಗೂ ಕಲಕೇರಿಯಲ್ಲಿನ ಡಿಪೋದಲ್ಲಿ ಸಂಗ್ರಹವಾಗಿದ್ದ ಮರಗಳ ದಿನ್ನೆಗಳಿಂದ ಬಹಳಷ್ಟು ಅನುಕೂಲವಾಗುತ್ತಿತ್ತು.

ರಾಜ್ಯ ಸರ್ಕಾರ ಇದೀಗ ದೇವಿಕೊಪ್ಪದಲ್ಲಿನ ಡಿಪೋವನ್ನು ಬಂದ್‌ ಮಾಡಿ ಆದೇಶಿಸಿದೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಕಿರುವತ್ತಿಯಲ್ಲಿನ ಡಿಪೋಕ್ಕೆ ಇನ್ಮುಂದೆ ಮರದ ದಿನ್ನೆ ಕಳುಹಿಸಬೇಕು. ದೇವಿಕೊಪ್ಪ ಹಾಗೂ ಕಿರುವತ್ತಿ ಎರಡು ಊರುಗಳ ಮಧ್ಯೆ ಬರೀ 10-12 ಕಿಮೀ ಮಾತ್ರ ಅಂತರ. ಇಷ್ಟು ಕಡಿಮೆ ಅಂತರದಲ್ಲಿ ಎರಡೆರಡು ಡಿಪೋಗಳೇಕೆ ಬೇಕು ಎಂದು ಸ್ಪಷ್ಟನೆ ನೀಡಿ ಸರ್ಕಾರ ಕಿರುವತ್ತಿಯಲ್ಲಿನ ಡಿಪೋದಲ್ಲೇ ದೇವಿಕೊಪ್ಪದ ಡಿಪೋವನ್ನು ಸೇರಿಸಿದೆ.

ಆಕ್ರೋಶ:

ಸರ್ಕಾರದ ಈ ಕ್ರಮಕ್ಕೆ ಬಡಿಗತನ ನಡೆಸುವವರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇಷ್ಟು ದಿನ ಇಲ್ಲೇ ಮರದ ದಿನ್ನೆಗಳನ್ನು ಖರೀದಿಸುತ್ತಿದ್ದೇವು. ಇದೀಗ ಉತ್ತರ ಕನ್ನಡ ಜಿಲ್ಲೆಗೆ ಹೋಗಬೇಕಿದೆ. ಜತೆಗೆ ಕಳೆದ 4-5 ದಶಕಗಳಿಂದಲೇ 2 ಕಡೆಗಳಲ್ಲೂ ಡಿಪೋಗಳಿದ್ದವು. ಆಗ ಅಂತರ ಕಡಿಮೆ ಎನಿಸಲಿಲ್ಲವೇ? ಇಲ್ಲಿ ಮರದ ದಿನ್ನೆಗಳು ಹೆಚ್ಚಿಗೆ ಸಂಗ್ರಹವಾಗುತ್ತಿಲ್ಲ. ಲಾಭದಲ್ಲಿ ಇಲ್ಲ ಎಂದರೆ ಒಕೆ. ಆದರೆ ಇಲ್ಲೂ ಮರದದಿನ್ನೆಗಳು ಸಂಗ್ರಹವಾಗುತ್ತವೆ.. ಜತೆಗೆ ಕಾಲಕಾಲಕ್ಕೆ ಹರಾಜು ಕೂಡ ಆಗುತ್ತದೆ. ಇದರಿಂದ ಇಲಾಖೆಗೂ ಲಾಭ ಬರುತ್ತದೆ. ಮತ್ತೇಕೆ ಉತ್ತರ ಕನ್ನಡ ಜಿಲ್ಲೆಯಲ್ಲಿನ ಡಿಪೋಕ್ಕೆ ಸೇರ್ಪಡೆ ಮಾಡಿದ್ದು ಎಂದು ಪ್ರಶ್ನಿಸುತ್ತಿದ್ದಾರೆ.

ಧಾರವಾಡ ಜಿಲ್ಲೆಯ ಬಗ್ಗೆ ರಾಜ್ಯ ಸರ್ಕಾರಕ್ಕೆ ತಾತ್ಸಾರ ಏಕೆ ಎಂದು ಪ್ರಶ್ನೆ ಮಾಡುವ ಬಿಜೆಪಿಗರು, ಜಿಲ್ಲಾ ಉಸ್ತುವಾರಿ ಸಚಿವರ ಸ್ವಕ್ಷೇತ್ರದಲ್ಲಿನ ಟಿಂಬರ್‌ ಡಿಪೋ ಪಕ್ಕದ ಜಿಲ್ಲೆಯ ಡಿಪೋದೊಳಗೆ ಸೇರ್ಪಡೆಯಾದರೂ ಅವರೇಕೆ ಮೌನವಾಗಿದ್ದಾರೆ ಎಂದು ಪ್ರಶ್ನಿಸಿದೆ.

ದೇವಿಕೊಪ್ಪ ಹಾಗೂ ಕಿರುವತ್ತಿಯಲ್ಲಿ ಡಿಪೋ ಮಧ್ಯೆ ಬರೀ 10-12 ಕಿಲೋ ಮೀಟರ್‌ ಮಾತ್ರ ಅಂತರವಿದೆ. ಹೀಗಾಗಿ ಇಲ್ಲಿನದನ್ನು ಬಂದ್‌ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಇಲ್ಲಿ ಮರಗಳ ದಿನ್ನೆ ಸಿಕ್ಕರೆ ಕಿರುವತ್ತಿ ಡಿಪೋಕ್ಕೆ ಇನ್ಮೇಲೆ ಸಾಗಿಸಬೇಕಾಗುತ್ತದೆ. ಸದ್ಯ ದಾಸ್ತಾನಿರುವ ಮರದ ದಿನ್ನಗಳನ್ನು ಅಲ್ಲಿಗೇ ಸಾಗಿಸಲಾಗುತ್ತಿದೆ ಧಾರವಾಡ ಅರಣ್ಯ ಉಪ ಸಂರಕ್ಷಣಾಧಿಕಾರಿ ವಿವೇಕ ಕಮರಿ ಹೇಳಿದ್ದಾರೆ.

ದೇವಿಕೊಪ್ಪದಲ್ಲಿನ ಟಿಂಬರ್‌ ಡಿಪೋ ಬಂದ್‌ ಮಾಡಿರುವುದು ಬೇಸರದ ಸಂಗತಿ. ನಮ್ಮ ತಾಲೂಕಿನಲ್ಲಿ ಸಾಕಷ್ಟು ಬಡಿಗತನ ಮಾಡುವವರಿದ್ದೇವೆ. ಅದರಲ್ಲೂ ಕಲಘಟಗಿ ಹಾಗೂ ಅಳ್ನಾವರದಲ್ಲಿ ಬಡಿಗತನ ವೃತ್ತಿಯವರು ಸಾಕಷ್ಟು ಜನ. ಅವರಿಗೆಲ್ಲ ದೇವಿಕೊಪ್ಪದ ಡಿಪೋ ಬಹಳಷ್ಟು ಅನುಕೂಲವಾಗಿತ್ತು ಅಳ್ನಾವರದ ಟಿಂಬರ್‌ ಮಾಲೀಕ ಕುಮಾರ ತಿಳಿಸಿದರು.