ಉತ್ಸವ ಆಚರಣೆಗೆ ಮಾಡಿಕೊಳ್ಳಬೇಕಾಗಿದ್ದ ಸಿದ್ಧತೆಗಾಗಿ ಲಕ್ಷಾಂತರ ವೆಚ್ಚವಾಗಿದೆ

ಎಂ. ಪ್ರಹ್ಲಾದ್ ಕನಕಗಿರಿ

ಜಿಲ್ಲಾಡಳಿತ 5ನೇ ಬಾರಿ ನಡೆಸಲು ಉದ್ದೇಶಿಸಿದ್ದ ಕನಕಗಿರಿ ಉತ್ಸವ ಮರೀಚಿಕೆಯಾಗಿದ್ದು, ಉತ್ಸಾಹದಲ್ಲಿದ್ದ ಜನರಿಗೆ ನಿರುತ್ಸಾಹ ಉಂಟಾಗಿದೆ.

ಹೌದು, 2026ರ ಮೇ 8 ಹಾಗೂ 9ಕ್ಕೆ ಕನಕಗಿರಿ ಉತ್ಸವ ಆಚರಿಸಲು ನಿರ್ಧರಿಸಿದ್ದರು. ಸ್ಥಳೀಯವಾಗಿ ದುರ್ಗಾದೇವಿ ಜಾತ್ರೆ ಹಿನ್ನೆಲೆ ಉತ್ಸವದ ದಿನಾಂಕವನ್ನು ಮುಂದೂಡಲಾಗಿತ್ತು. ಇದಾದ ಬಳಿ ಮೇ16 ಹಾಗೂ 17ರಂದು ಎರಡು ದಿನಗಳ ಕಾಲ ಉತ್ಸವ ಆಚರಣೆಗೆ ಜಿಲ್ಲಾಡಳಿತ ಸಿದ್ಧತೆಯಲ್ಲಿತ್ತು. ಆಡಳಿತಾತ್ಮಕ ಕಾರಣದಿಂದ ಉತ್ಸವವನ್ನು ಜೂ.10ಕ್ಕೆ ಮುಂದೂಡಲಾಯಿತು.ಇದೀಗ ನವೆಂಬರ್ ತಿಂಗಳಲ್ಲಿ ಉತ್ಸವ ನಡೆಯಲಿದೆ ಎನ್ನುವ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ.

ಉತ್ಸವ ಆಚರಣೆಗೆ ಮಾಡಿಕೊಳ್ಳಬೇಕಾಗಿದ್ದ ಸಿದ್ಧತೆಗಾಗಿ ಲಕ್ಷಾಂತರ ವೆಚ್ಚವಾಗಿದೆ. ಗುತ್ತಿಗೆದಾರರು, ಉಪ ಗುತ್ತಿಗೆದಾರರು ಹಾಗೂ ಕಾರ್ಮಿಕರ ವೆಚ್ಚ ಮತ್ತು ಸಾಮಗ್ರಿಗಳ ಸಾರಿಗೆ ವೆಚ್ಚ, ವಿದ್ಯುತ್ ಅಲಂಕಾರಕ್ಕೆ ತಂದಿದ್ದ ಸಾಮಗ್ರಿ, ಊಟದ ಶೆಡ್ ನಿರ್ಮಾಣ, ಊಟಕ್ಕೆ ಕಿರಾಣಿ ದಾಸ್ತಾನು ಸೇರಿದಂತೆ ನಾನಾ ದಿನಸಿ ಸಾಮಗ್ರಿಗಳನ್ನು ತಂದು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಉತ್ಸವದ ಶೇ.60 ರಷ್ಟು ಸಿದ್ಧತೆ ಕಾರ್ಯ ಮುಗಿದಿತ್ತು. ಇನ್ನೆರಡು ದಿನಗಳಲ್ಲಿ ನಡೆಯಬೇಕಿದ್ದ ಉತ್ಸವವನ್ನು ಜಿಲ್ಲಾಧಿಕಾರಿಗಳು ಏಕಾಏಕಿ ಆಡಳಿತಾತ್ಮಕ ಕಾರಣ ನೀಡಿ ಮುಂದೂಡಿದ್ದು, ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ನಿರಾಶೆಯಲ್ಲಿ ತಂಗಡಗಿ: ಕನಕಗಿರಿ ಇತಿಹಾಸದಲ್ಲೇ 5ನೇ ಬಾರಿಗೆ ಉತ್ಸವ ಆಚರಣೆಗೆ ಉತ್ಸುಕರಾಗಿದ್ದ ಶಾಸಕ ಶಿವರಾಜ ತಂಗಡಗಿ ಕೊನೆಗೂ ಸಾಧ್ಯವಾಗದೆ ಇದ್ದಾಗ ನಿರಾಶೆಯಾಗಿದೆ. ಮೇ 8 ಮತ್ತು 9ರಂದು ನಿಗದಿಯಾದಂತೆ ಉತ್ಸವ ನಡೆದಿದ್ದರೆ ಎಲ್ಲರಿಗೂ ಒಳಿತಾಗುತ್ತಿತ್ತು. ಸದರಿ ದಿನದಂದೇ ಜಾತ್ರೆ ಇರುವುದರಿಂದ ಉತ್ಸವದ ದಿನ ಮುಂದೂಡಿದ್ದರಿಂದಲೇ ಸಾಧ್ಯವಾಗಲಿಲ್ಲ. ಜೂ.10ಕ್ಕೆ ಮುಂದೂಡಿದ್ದ ಕನಕಗಿರಿ ಉತ್ಸವವನ್ನು ನವೆಂಬರ್ ಗೆ ಮುಂದೂಡಲಾಗಿದೆ ಎಂದು ತಿಳಿದು ಬಂದಿದ್ದು, ಈ ತಿಂಗಳಲ್ಲಿ ಬಾರಿ ಚಳಿ ಬೀಳುವ ಸಾಧ್ಯತೆ ದಟ್ಟವಾಗಿದೆ.

ಆಗಿಲ್ಲ ಬ್ಯಾನರ್ ತೆರವು: ಕನಕಗಿರಿ ಉತ್ಸವ ಆಚರಣೆ ಕುರಿತಂತೆ ಜಿಲ್ಲೆಯಾದ್ಯಂತ ಅಳವಡಿಸಿದ ಪ್ಲೆಕ್ಸ್, ಬ್ಯಾನರ್ ಗಳಲ್ಲಿ ಮುಖ್ಯಮಂತ್ರಿ ಸ್ಥಾನದಲ್ಲಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಸ್ಥಾನದಲ್ಲಿ ಡಿ.ಕೆ. ಶಿವಕುಮಾರ ಎಂದಿದೆ. ಸಿಎಂ ಬದಲಾವಣೆಯಿಂದ ಸಚಿವ ಸ್ಥಾನದಿಂದ ನಿರ್ಗಮಿಸಿರುವ ಶಾಸಕ ತಂಗಡಗಿ ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿದ್ದಾರೆ. ಡಿಕೆಶಿ ಸಿಎಂ ಆಗಿ 15 ದಿನಗಳಾದರೂ ಹಳೇ ಪ್ಲೆಕ್ಸ್, ಬ್ಯಾನರ್ ತೆರವಾಗದಿರುವುದಕ್ಕೆ ಸಾರ್ವಜನಿಕರ ಬೇಸರಕ್ಕೆ ಕಾರಣವಾಗಿದೆ.

ಕನಕಗಿರಿ ಉತ್ಸವದ ಆಚರಣೆಗೆ ಬಿಡುಗಡೆಯಾದ ಅನುದಾನದಲ್ಲಿ ಅವ್ಯವಹಾರದ ವಾಸನೆ ಬಂದಿದೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು. ಜೂ.10 ಹಾಗೂ 11ಕ್ಕೆ ಮುಂದೂಡಿದ್ದ ಉತ್ಸವದ ಆಚರಣೆಯಾಗಿಲ್ಲ. ಉತ್ಸವದ ಆಚರಣೆ ಕುರಿತಂತೆ ಜಿಲ್ಲಾಧಿಕಾರಿಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇತ್ತ ಶಾಸಕರು ಸಹ ಉತ್ಸವದ ಬಗ್ಗೆ ತುಟಿ ಬಿಚ್ಚುತ್ತಿಲ್ಲ ಎಂದು ಕರವೇ ಹೋರಾಟಗಾರ ಬಸವರಾಜ ಕೋರಿ ತಿಳಿಸಿದ್ದಾರೆ.

ಕನಕಗಿರಿ ಉತ್ಸವವನ್ನು 5ನೇ ಬಾರಿ ಆಚರಿಸಲು ಮುಂದಾಗಿದ್ದೆ. ಆದರೆ ಕೆಲ ಸಣ್ಣ-ಪುಟ್ಟ ಸಮಸ್ಯೆಗಳಿಂದ ಅನಿವಾರ್ಯವಾಗಿ ಉತ್ಸವ ಮುಂದೂಡಲಾಗಿದೆ. ನವೆಂಬರ್ ನಲ್ಲಿ ಉತ್ಸವ ಆಚರಣೆ ಕೈಗೆತ್ತಿಕೊಳ್ಳುತ್ತೇನೆ. ಕನಕಗಿರಿ ಜನತೆಯ ರಾಷ್ಟ್ರ ಮಟ್ಟದವರೆಗೆ ಬೆಳೆಸಿದ್ದಾರೆ. 5ನೇ ಉತ್ಸವವನ್ನು ಅದ್ದೂರಿಯಾಗಿ ಆಚರಿಸುವ ಮಹದಾಸೆ ಹೊಂದಿದ್ದೇನೆ ಎಂದು ಶಾಸಕ ಶಿವರಾಜ ತಂಗಡಗಿ ತಿಳಿಸಿದ್ದಾರೆ.