ಪರೀಕ್ಷೆ ಭಯಪಡುವ ಅಗತ್ಯವಿಲ್ಲ. ಹಬ್ಬದಂತೆ ಸಂಭ್ರಮಿಸಬೇಕು.

ಕುರುಗೋಡು: ವಿದ್ಯಾರ್ಥಿ ಜೀವನದಲ್ಲಿ ಎಸ್ಸೆಸ್ಸೆಲ್ಸಿ ಪ್ರಮುಖ ಘಟ್ಟ. ಶ್ರದ್ಧೆಯಿಂದ ಓದಿ ಜೀವನ ದಾರಿ ಸುಗಮಗೊಳಿಸಿಕೊಳ್ಳಬೇಕು ಎಂದು ಗ್ರೇಡ್-2 ತಹಶೀಲ್ದಾರ್ ಮಲ್ಲೇಶಪ್ಪ ಸಲಹೆ ನೀಡಿದರು.ಇಲ್ಲಿನ ಪಟ್ಟಣದಲ್ಲಿ ಬಾಲಕರ ಸರ್ಕಾರಿ ಪ್ರೌಢಶಾಲೆಯಲ್ಲಿ ತಾಲ್ಲೂಕು ಆಡಳಿತ, ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ ಮತ್ತು ಸನ್ಮಾರ್ಗಗೆಳೆಯರ ಬಳಗ ಬುಧವಾರ ಆಯೋಜಿಸಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷಾಪೂರ್ವ ಸಿದ್ಧತಾ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಪರೀಕ್ಷೆ ಭಯಪಡುವ ಅಗತ್ಯವಿಲ್ಲ. ಹಬ್ಬದಂತೆ ಸಂಭ್ರಮಿಸಬೇಕು. ಉಳಿದ ಸಮಯವನ್ನು ಸದುಪಯೋಗಪಡಿಸಿಕೊಂಡು ಪರೀಕ್ಷೆ ಎದುರಿಸಿ ಹೆಚ್ಚು ಅಂಕಗಳಿಸಿ ಉತ್ತೀರ್ಣರಾಗಬೇಕು ಎಂದರು.

ಶಾಲೆಯಲ್ಲಿ ಶಿಕ್ಷಕರು ಹೇಳಿಕೊಟ್ಟ ಪಾಠಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕು. ಪರೀಕ್ಷೆಯಲ್ಲಿ ಕೇಳಿದ ಪ್ರಶ್ನೆಗಳನ್ನು ಸರಿಯಾಗಿ ಅರ್ಥಮಾಡಿಕೊಂಡು ನೇರವಾಗಿ ಉತ್ತರ ಬರೆಯುವ ಮೂಲಕ ಹೆಚ್ಚು ಅಂಕಗಳಿಸಲು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಕೆ.ಸಿದ್ಧಲಿಂಗಮೂರ್ತಿ ಮಾತನಾಡಿ, ಪರೀಕ್ಷೆಗೆ ಕೇವಲ 10 ದಿನ ಬಾಕಿಉಳಿದಿದೆ. ಸಮಯ ವ್ಯರ್ಥ ಮಾಡದೇ ಸಮರ್ಪಕವಾಗಿ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸರ್ಕಾರಿ ಶಾಲೆಗಳಲ್ಲಿ ಅಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸನ್ಮಾರ್ಗ ಗೆಳೆಯರ ಬಳಗದ ಕಾರ್ಯದರ್ಶಿ ಚಂದ್ರಶೇಖರ ಆಚಾರಿ ಕಾರ್ಯಕ್ರಮ ಕುರಿತು ಪ್ರಾಸ್ತಾವಿಕ ಮಾತನಾಡಿದರು.

ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಸಿದ್ಧಲಿಂಗೇಶ್ ಗದಗಿನ, ಪುರುಷೋತ್ತಮ್ ಮತ್ತು ಹರಿಪ್ರಸಾದ್ ವಿದ್ಯಾರ್ಥಿಗಳಿಗೆ ವಿಷಯವಾರು ಮಾರ್ಗದರ್ಶನ ನೀಡಿದರು.

ಮುಖ್ಯ ಶಿಕ್ಷಕ ಮಾರುತಿ ಗಾಳಿ ಮತ್ತು ಡಿ.ಎಂ. ಮಲ್ಲಿಕಾರ್ಜುನ, ಜಡೇಶ್ ಎಮ್ಮಿಗನೂರು, ಕ್ಷೇತ್ರ ಶಿಕ್ಷಣ ಸಂಯೋಜಕ ವಿಶ್ವನಾಥ, ಶಶಿಕಲಾ, ಎನ್.ಬಸವರಾಜ ಇದ್ದರು.

ಕುರುಗೋಡು ಪಟ್ಟಣದಲ್ಲಿ ಬಾಲಕರ ಸರ್ಕಾರಿ ಪ್ರೌಢಶಾಲೆಯಲ್ಲಿ ಜರುಗಿದ ಎಸ್ಸೆಸ್ಸೆಲ್ಸಿ ಪರೀಕ್ಷಾ ಪೂರ್ವಸಿದ್ಧತಾ ಕಾರ್ಯಾಗಾರವನ್ನು ಗ್ರೇಟ್-2 ತಹಶೀಲ್ದಾರ್ ಮಲ್ಲೇಶಪ್ಪ ಉದ್ಘಾಟಿಸಿದರು.