ದಾಖಲೆ ಪರಿಶೀಲನೆಗೆ ಕಾಲ ಹರಣ: ಶಾಲಾ ಬಸ್ಸಿನಲ್ಲಿ ಆತಂಕ

| Published : Jul 26 2024, 01:31 AM IST / Updated: Jul 26 2024, 01:32 AM IST

ದಾಖಲೆ ಪರಿಶೀಲನೆಗೆ ಕಾಲ ಹರಣ: ಶಾಲಾ ಬಸ್ಸಿನಲ್ಲಿ ಆತಂಕ
Share this Article
  • FB
  • TW
  • Linkdin
  • Email

ಸಾರಾಂಶ

ಸಾರಿಗೆ ಇಲಾಖೆಯ ಅಧಿಕಾರಿಗಳು ತಮ್ಮ ಪರಿಶೀಲನೆ ಮೊಟಕುಗೊಳಿಸಿ ಬಸ್ಸು ಪ್ರಯಾಣ ಮುಂದುವರೆಯಲು ಅವಕಾಶ ನೀಡಿದ ಘಟನೆ ಬುಧವಾರ ಮಾರ್ಪಾಡಿ ಗ್ರಾಮದ ಮರಿಯಾಡಿಯಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ಶಾಲಾ ಬಸ್ಸಿನ ದಾಖಲೆ ಪರಿಶೀಲನೆಗೆಂದು ಶಾಲೆಯಿಂದ ಪುಟಾಣಿಗಳ ಮನೆಯತ್ತ ಹೊರಟಿದ್ದ ಬಸ್ಸನ್ನು ರಸ್ತೆ ಬದಿ ನಿಲ್ಲಿಸಿ ಕಾಲ ಹರಣ ಮಾಡಿದ ಅಧಿಕಾರಿಗಳಿಗೆ ಸಾರ್ವಜನಿಕರು ಸಕಾಲದಲ್ಲಿ ಮಧ್ಯ ಪ್ರವೇಶಿಸಿ ಆತಂಕಿತ ಪುಟಾಣಿಗಳಿಗೆ ಸ್ಪಂದಿಸಿದ್ದಾರೆ. ಈ ಬೆಳವಣಿಗೆಯಿಂದ ಎಚ್ಚೆತ್ತುಕೊಂಡ ಸಾರಿಗೆ ಇಲಾಖೆಯ ಅಧಿಕಾರಿಗಳು ತಮ್ಮ ಪರಿಶೀಲನೆ ಮೊಟಕುಗೊಳಿಸಿ ಬಸ್ಸು ಪ್ರಯಾಣ ಮುಂದುವರೆಯಲು ಅವಕಾಶ ನೀಡಿದ ಘಟನೆ ಬುಧವಾರ ಮಾರ್ಪಾಡಿ ಗ್ರಾಮದ ಮರಿಯಾಡಿಯಲ್ಲಿ ನಡೆದಿದೆ.

ಪ್ರಾಥಮಿಕ ಶಾಲೆಯ ಮಕ್ಕಳು ಎಂದಿನಂತೆ ಬುಧವಾರ ಸಂಜೆ ಶಾಲೆ ಬಿಟ್ಟ ನಂತರ ಸ್ಕೂಲ್ ಬಸ್‌ನಲ್ಲಿ ಕೋಟೆಬಾಗಿಲು ಮಾರ್ಗವಾಗಿ ಮನೆಗೆ ಹೊರಟಿದ್ದರು. ಮರಿಯಾಡಿಯಲ್ಲಿ ಆರ್‌ಟಿಒ ಅಧಿಕಾರಿಗಳು ವಾಹನವನ್ನು ತಡೆದು ನಿಲ್ಲಿಸಿ ಚಾಲಕನನ್ನು ತಮ್ಮ ಜೀಪಿನ ಬಳಿಗೆ ಕರೆಸಿಕೊಂಡು ದಾಖಲೆಗಳನ್ನು ಕೇಳುತ್ತಿದ್ದರು. ಅರ್ಧ ಗಂಟೆಯಾದರೂ ವಿಚಾರಣೆ ಮುಗಿಯಲಿಲ್ಲ.

ಇತ್ತ ಸ್ಕೂಲ್ ಬಸ್ಸಿನಲ್ಲಿದ್ದ ಕೆಲವು ಚಿಕ್ಕ ಮಕ್ಕಳು ಮನೆಗೆ ಹೋಗುವುದು ತಡವಾಯಿತ್ತೆಂದು ಅಳಲಾರಂಭಿಸಿದ್ದನ್ನು ಗಮನಿಸಿದ ಸ್ಥಳೀಯರು ಅಧಿಕಾರಿಗಳತ್ತ ತೆರಳಿ `ಚಾಲಕನ ವಿಚಾರಣೆಯ ಕಾರಣಕ್ಕೆ ಚಿಕ್ಕ ಮಕ್ಕಳನ್ನು ರಸ್ತೆ ಬದಿಯಲ್ಲಿ ಯಾಕೆ ಕಾಯುವಂತೆ ಮಾಡುತ್ತಿದ್ದೀರಿ, ಅವರು ಮನೆಗೆ ಹೋಗುವುದು ಬೇಡವೆ, ಮಕ್ಕಳನ್ನು ರಸ್ತೆ ಬದಿಯಲ್ಲಿ ನಿಲ್ಲಿಸುವ ಅಧಿಕಾರ ನಿಮಗಿದೆಯೆ?` ಎಂದು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡರು ಎನ್ನಲಾಗಿದೆ. ಇದರಿಂದ ತಬ್ಬಿಬ್ಬಾದ ಅಧಿಕಾರಿ ಕೂಡಲೇ ಸ್ಕೂಲ್ ಬಸ್ ಚಾಲಕನ ವಿಚಾರಣೆ ಅರ್ಧದಲ್ಲಿ ನಿಲ್ಲಿಸಿ ಬಸ್ಸು ಮುಂದುವರಿಯಲು ಅವಕಾಶ ನೀಡಿದ್ದಾರೆ.