ಸಾರಾಂಶ
ಲಕ್ಷ್ಮೇಶ್ವರ: ಖ್ಯಾತ ಚಿತ್ರನಟ, ರಾಕಿಂಗ್ ಸ್ಟಾರ್ ಯಶ್ ಜನ್ಮದಿನ ಆಚರಣೆಗೆ ಬೃಹತ್ ಕಟೌಟ್ ನಿಲ್ಲಿಸುವ ವೇಳೆ ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿ ಮೂವರು ಯುವಕರು ಮೃತಪಟ್ಟು, ಇನ್ನೂ ಮೂವರು ಗಂಭೀರವಾಗಿ ಗಾಯಗೊಂಡ ಹೃದಯ ವಿದ್ರಾವಕ ಘಟನೆ ತಾಲೂಕಿನ ಸೂರಣಗಿ ಗ್ರಾಮದಲ್ಲಿ ಭಾನುವಾರ ತಡರಾತ್ರಿ ನಡೆದಿದೆ.
ಸೂರಣಗಿ ಗ್ರಾಮದ ಅಂಬೇಡ್ಕರ್ ಕಾಲನಿ ನಿವಾಸಿಗಳಾದ ಹನುಮಂತಪ್ಪ ಮಜ್ಜೂರಪ್ಪ ಹರಿಜನ (21), ಮುರಳಿ ನೀಲಪ್ಪ ನಡುವಿನಮನಿ (22), ನವೀನ ನೀಲಪ್ಪ ಗಾಜಿ (22) ಮೃತಪಟ್ಟ ದುರ್ದೈವಿಗಳು. ಮರಣೋತ್ತರ ಪರೀಕ್ಷೆಯ ಬಳಿಕ ಸಾಮೂಹಿಕ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಬಾಳಿ ಬದುಕಬೇಕಿದ್ದ ಮೂವರು ಯುವಕರು ನೆಚ್ಚಿನ ನಾಯಕನ ಅಭಿಮಾನಕ್ಕೆ ಬಲಿಯಾಗಿರುವುದು ಆಯಾ ಕುಟುಂಬ ಅಷ್ಟೇ ಅಲ್ಲ ಇಡೀ ಸೂರಣಗಿ ಗ್ರಾಮವನ್ನು ಶೋಕಸಾಗರದಲ್ಲಿ ಮುಳುಗಿಸಿದೆ.
ಮಿಂಚಿನಂತೆ ಎರಗಿದ ಸಾವು: ಎಲ್ಲೆಡೆಯಂತೆ ಸೂರಣಗಿ ಗ್ರಾಮದಲ್ಲೂ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿದ್ದಾರೆ. ಈ ಅಭಿಮಾನಿ ಯುವಕರು ಪ್ರತಿವರ್ಷದಂತೆ ಭಾನುವಾರ ರಾತ್ರಿ 11.30ರ ವೇಳೆಗೆ ತಮ್ಮ ನೆಚ್ಚಿನ ನಟ ಯಶ್ ಹುಟ್ಟು ಹಬ್ಬಕ್ಕೆ ಸಿದ್ಧತೆ ನಡೆಸುತ್ತಿದ್ದರು.
ಗೆಳೆಯರೇ ಸೇರಿಕೊಂಡು ಒಂದಿಷ್ಟು ಹಣ ಕೂಡಿಸಿಕೊಂಡು, ಬೃಹತ್ ಗಾತ್ರದ ಫ್ಲೆಕ್ಸ್ ಮಾಡಿಸಿದ್ದರು. ಅತೀ ಎತ್ತರದ ಈ ಕಟೌಟ್ ಅಳವಡಿಸುವ ಸಂದರ್ಭದಲ್ಲಿ ಅವರ ಕೈಯಲ್ಲಿದ್ದ ಫ್ಲೆಕ್ಸ್ ಚೌಕಟ್ಟಿನ ಕಬ್ಬಿಣ ಸಲಾಖೆಗೆ ವಿದ್ಯುತ್ ತಂತಿ ಸ್ಪರ್ಶವಾಗಿ ತೀವ್ರತರದ ಶಾಕ್ ಹೊಡೆದಿದೆ.
ಮಿಂಚು ಹೊಡೆದಂತಾಗಿ ಕ್ಷಣಾರ್ಧದಲ್ಲಿ ಮೂವರು ಕುಸಿದು ಬಿದ್ದಿದ್ದಾರೆ. ಅಪಾಯ ಅರಿತ ಇನ್ನುಳಿದವರು ಚಿರಾಟ ಕೂಗಾಟ ಮಾಡುತ್ತ ಅವರನ್ನು ಉಳಿಸಲು ಪ್ರಯತ್ನಿಸಿದ್ದಾರೆ. ವಿದ್ಯುತ್ ಶಾಕ್ ರಭಸಕ್ಕೆ ಕುಸಿದು ಬೀಳುತ್ತಿದ್ದಂತೆ ಮೂವರು ಪ್ರಾಣ ಬಿಟ್ಟಿದ್ದಾರೆ. ರಕ್ಷಣೆಗೆ ಮುಂದಾದವರಲ್ಲಿ ಮೂವರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿಡಿಯೋ ವೈರಲ್: ಈ ಫ್ಲೆಕ್ಸ್ ಅಳವಡಿಸುವ ವೇಳೆಯಲ್ಲಿ ಆ ಎಲ್ಲಾ ಯುವಕರು ಅತ್ಯಂತ ಸಂಭ್ರಮದಲ್ಲಿಯೇ ಇದ್ದು, ಮಧ್ಯರಾತ್ರಿ 12 ಗಂಟೆ ಪೂರ್ವದಲ್ಲಿಯೇ ಇದನ್ನು ಅಳವಡಿಸುವ ತವಕ, ಉತ್ಸಾಹದಲ್ಲಿದ್ದರು. ಫ್ಲೆಕ್ಸ್ ಅಳವಡಿಕೆಯನ್ನು ಇನ್ನೊರ್ವ ಅಭಿಮಾನಿ ತನ್ನ ಮೊಬೈಲ್‌ನಲ್ಲಿ ವಿಡಿಯೋ ಮಾಡುತ್ತಿದ್ದ ಇದೇ ವೇಳೆಯಲ್ಲಿಯೇ ಘಟನೆ ನಡೆದಿದ್ದು, ಸದ್ಯ ಆ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿದ್ದು, ಕ್ಷಣಾರ್ಥದಲ್ಲಿ ಉತ್ಸಾಹದ ವಾತಾವರಣ ಹೇಗೆ ಸೂತಕದ ಛಾಯೆಯಾಗಿ ಮಾರ್ಪಟ್ಟಿತು ಎನ್ನುವುದಕ್ಕೆ ಸಾಕ್ಷಿಯಾಗಿದೆ.
ಗ್ರಾಮದಲ್ಲಿ ಸ್ಮಶಾನಮೌನ: ನಟ ಯಶ್ ಹುಟ್ಟುಹಬ್ಬದ ಆಚರಣೆಯಿಂದ ಸಂತೋಷ, ಸಂಭ್ರಮದಲ್ಲಿರಬೇಕಾಗಿದ್ದ ಗ್ರಾಮದಲ್ಲೀಗ ಮೌನ ಆವರಿಸಿದೆ. ಗೆಳೆಯರ ಆಕ್ರಂದನ ಮುಗಿಲು ಮುಟ್ಟಿದೆ. ಇಡೀ ಗ್ರಾಮದಲ್ಲಿ ಸ್ಮಶಾನ ಮೌನ ಆವರಿಸಿದೆ.
ಬಡವರ ಮಕ್ಕಳಿಗೆ ಚಿತ್ರ ನಟರ ಬಗ್ಗೆ ಹುಚ್ಚು ಅಭಿಮಾನ ಹೆಚ್ಚು. ಈ ಹುಚ್ಚು ಅಭಿಮಾನವೇ ಮೂವರು ಅಮಾಯಕ ಯುವಕರ ಜೀವವನ್ನೇ ಬಲಿ ಪಡೆದಿದೆ. ಆದರೆ, ಇದ್ಯಾವುದರ ಪರಿವೆಯೇ ಇಲ್ಲದೆ ತಮ್ಮ ಪಾಡಿಗೆ ತಾವು ಕೂಲಿ ಕೆಲಸ ಮಾಡಿ ಬದುಕುತ್ತಿದ್ದ ಆ ಮುಗ್ಧ ತಂದೆ- ತಾಯಿಗಳು ವಯಸ್ಸಿಗೆ ಬಂದ ಮಕ್ಕಳನ್ನು ಕಳೆದುಕೊಂಡು ಪಡುತ್ತಿರುವ ಸಂಕಟ ಕರುಳು ಕಿತ್ತು ಬರುವಂತಿತ್ತು.
ಗ್ರಾಮದ ತುಂಬೆಲ್ಲಾ ದುಃಖ, ನೋವು, ಗಾಬರಿಯ ವಾತಾವರಣ ಮಡುಗಟ್ಟಿದ್ದು, ಮೂವರು ಯುವಕರನ್ನು ಕಳೆದುಕೊಂಡ ಗ್ರಾಮದಲ್ಲಿ ಎಲ್ಲಿ ನೋಡಿದರೂ ಕರುಳು ಕಿವುಚುವಂತಹ ದೃಷ್ಯಗಳೇ ಕಂಡು ಬರುತ್ತಿದ್ದವು. ಯುವಕರ ಸಾವಿಗೆ ಸೂರಣಗಿ ಗ್ರಾಮ ಮಾತ್ರವಲ್ಲ ರಾಜ್ಯವೇ ಮಮ್ಮಲ ಮರುಗುತ್ತಿದೆ.
₹2ಲಕ್ಷ ಪರಿಹಾರ: ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಆಗಮಿಸಿ ಮೃತ ಯುವಕರ ಕುಟುಂಬಗಳಿಗೆ ಸಾಂತ್ವನ ಹೇಳಿದ ಶಾಸಕ ಡಾ.ಚಂದ್ರು ಲಮಾಣಿ, ಇದೊಂದು ಅತ್ಯಂತ ನೋವಿನ ಘಟನೆ.
ಮಕ್ಕಳನ್ನು ಕಳೆದುಕೊಂಡಿರುವ ಕುಟುಂಬಸ್ಥರಿಗೆ ಆಗಿರುವ ನಷ್ಟವನ್ನು ಯಾರಿಂದಲೂ ಭರಿಸಲು ಸಾಧ್ಯವಿಲ್ಲ, ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲರು ಕರೆ ಮಾಡಿ ಸರ್ಕಾರದಿಂದ ಮೃತರ ಕುಟುಂಬಗಳಿಗೆ ತಲಾ ₹2 ಲಕ್ಷ ಹಾಗೂ ಗಾಯಗೊಂಡವರಿಗೆ ₹50 ಸಾವಿರ ಪರಿಹಾರ ಘೋಷಣೆ ಮಾಡಿದ್ದಾರೆ ಎಂದು ಮಾಧ್ಯಮಗಳಿಗೆ ವಿವರಣೆ ನೀಡಿದರು.