ಸಾರಾಂಶ
ತಾಲೂಕಿನಲ್ಲಿ ಮಳೆ ಬೀಳದೆ ಬರಗಾಲ ಎದುರಾಗಿದೆ. ಆದ್ದರಿಂದ ರೈತರಿಗೆ ಗುಣಮಟ್ಟದ ಮೇವು ವಿತರಿಸುವ ಮೂಲಕ ಜಾನುವಾರುಗಳ ರಕ್ಷಣೆಗೆ ಮುಂದಾಗುವಂತೆ ಮೇವು ಬ್ಯಾಂಕ್ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಹೇಳಿದರು.
ಕನ್ನಡಪ್ರಭ ವಾರ್ತೆ ಮಧುಗಿರಿ
ತಾಲೂಕಿನಲ್ಲಿ ಮಳೆ ಬೀಳದೆ ಬರಗಾಲ ಎದುರಾಗಿದೆ. ಆದ್ದರಿಂದ ರೈತರಿಗೆ ಗುಣಮಟ್ಟದ ಮೇವು ವಿತರಿಸುವ ಮೂಲಕ ಜಾನುವಾರುಗಳ ರಕ್ಷಣೆಗೆ ಮುಂದಾಗುವಂತೆ ಮೇವು ಬ್ಯಾಂಕ್ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಹೇಳಿದರು.ತಾಲೂಕಿನ ಮಿಡಿಗೇಶಿಯಲ್ಲಿ ತೆರೆದಿರುವ ಮೇವು ಬ್ಯಾಂಕ್ ಕೇಂದ್ರಕ್ಕೆ ಭೇಟಿ ನೀಡಿ ಮಾತನಾಡಿದರು. ದನಕರುಗಳಿಗೆ ಮೇವಿಗೆ ಯಾವುದೇ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲಾಗಿದೆ. ಆ ನಿಟ್ಟಿನಲ್ಲಿ ಅಧಿಕಾರಿಗಳು ಮುತುವರ್ಜಿವಹಿಸಿ ಕೆಲಸ ಮಾಡುತ್ತಿದ್ದಾರೆ. ಜಾನುವಾರುಗಳಿಗೆ ಸಕಾಲಕ್ಕೆ ಸರಿಯಾಗಿ ಅಧಿಕಾರಿಗಳು ಮೇವು ವಿತರಿಸುತ್ತಿದ್ದು, ಗೋವುಗಳ ರಕ್ಷಣೆಗೆ ಮುಂದಾಗಿದ್ದಾರೆ. ಆದ್ದರಿಂದ ರೈತರು ಆತಂಕಪಡುವ ಅಗತ್ಯವಿಲ್ಲ ಎಂದರು.
ಪಶು ಸಂಗೋಪನ ಇಲಾಖೆ ಸಹಾಯಕ ನಿರ್ದೇಶಕ ಸಿದ್ದನಗೌಡ ಮಾತನಾಡಿ, ಇದುವರೆಗೂ ಸಂಗ್ರಹವಾದ 229.444 ಟನ್ ಮೇವಿನ ಪೈಕಿ 224.196 ಟನ್ ಮೇವು ವಿತರಿಸಲಾಗಿದೆ. 3.312 ಟನ್ ಮೇವು ದಾಸ್ತಾನು ಇದೆ. ಮೇವು ಮಾರಾಟದಿಂದ ಬಂದ 4,48,392 ರು. ಕಂದಾಯ ಇಲಾಖೆಯಿಂದ ಸರ್ಕಾರಕ್ಕೆ ಸಂದಾಯ ಮಾಡಲಾಗಿದೆ. 1512 ಫಲಾನುಭವಿ ರೈತರು ಮೇವು ಪಡೆದುಕೊಂಡಿದ್ದಾರೆ. 4265 ಹಸು ಮತ್ತು ಎಮ್ಮೆಗಳಿಗೆ ಸಮರ್ಪಕವಾಗಿ ಮೇವು ವಿತರಿಸಲಾಗಿದೆ. ಮಿಡಿಗೇಶಿ ಹೋಬಳಿ ಬಳಿಕ ಐ.ಡಿ.ಹಳ್ಳಿ ,ದೊಡ್ಡೇರಿ ಹೋಬಳಿಯ ಕೆಲವು ಭಾಗದ ರೈತರಿಗೆ 1450 ಮೇವಿನ ಕಾರ್ಡ್ ವಿತರಿಸಲಾಗಿದೆ. ಗುಣಮಟ್ಟವಿಲ್ಲದ 6 ಲೋಡ್ ಮೇವನ್ನು ವಾಪಸ್ ಕಳಿಸಲಾಗಿದೆ ಎಂದು ಮಾಹಿತಿ ನೀಡಿದರು.ಜಿಪಂ ಸಿಇಒ ಜಿ.ಪ್ರಭು, ಎಸಿ ಗೋಟೂರು ಶಿವಪ್ಪ, ತಹಸೀಲ್ದಾರ್ ಸಿಬ್ಗತ್ ವುಲ್ಲಾ, ಗ್ರಾಮೀಣ ಕುಡಿವ ನೀರು ಸರಬರಾಜು ಸಹಾಯಕ ನಿರ್ದೇಶಕ ಲೋಕೇಶ್ವರ್ , ತಾಪಂ ಇಒ ಶಶಿಧರ್, ಮಧುಸೂದನ್, ಆರ್.ಐ.ವೇಣುಗೋಪಾಲ್, ರೈತರಿದ್ದರು.