ಜಿಲ್ಲಾಧಿಕಾರಿ, ಶಾಸಕರ ಸೂಚನೆಗೂ ಕ್ಯಾರೆ ಇಲ್ಲ

---

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಜಿಲ್ಲಾಧಿಕಾರಿ, ಶಾಸಕರ ಸೂಚನೆ ನಡುವೆಯೂ ಟಿಪ್ಪರ್‌ಗಳ ಅತಿ ವೇಗ, ಓವರ್‌ ಲೋಡ್‌ ಪ್ರಯಾಣ ನಿಲ್ಲದ ಕಾರಣ ಮಂಗಳವಾರ ಬೆಳಗ್ಗೆ ಮತ್ತೆ ಟಿಪ್ಪರ್‌ ಹಾಗೂ ಕಾರಿನ ಮಧ್ಯೆ ಡಿಕ್ಕಿಯಾಗಿ ಟಿಪ್ಪರ್‌ ಪಲ್ಟಿಯಾದ ಘಟನೆ ಮಂಗಳವಾರ ಮೈಸೂರು- ಊಟಿ ಹೆದ್ದಾರಿಯ ಬಸವಾಪುರ ಗೇಟ್‌ ಬಳಿ ನಡೆದಿದೆ. ಅದೃಷ್ಟವಶಾತ್‌ ಎಲ್ಲರೂ ಸುರಕ್ಷಿತರಾಗಿದ್ದಾರೆ.

ಟಿಪ್ಪರ್‌ ಹೊಡೆದ ರಭಸಕ್ಕೆ ಕೇರಳ ಮೂಲದ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ.


ಗುಂಡ್ಲುಪೇಟೆ ಕಡೆಯಿಂದ ಎಂ. ಸ್ಯಾಂಡ್‌ ಓವರ್‌ಲೋಡ್‌ ಮಾಡಿದ್ದ ಟಿಪ್ಪರ್‌ ಎದುರಿನಿಂದ ಬರುತ್ತಿದ್ದ ಡಿಕ್ಕಿಯಾಗಿದೆ. ರಭಸಕ್ಕೆ ಟಿಪ್ಪರ್‌ ಪಲ್ಟಿಯಾಗಿ ಅದರಲ್ಲಿದ್ದ ಎಂ.ಸ್ಯಾಂಡ್‌ ರಸ್ತೆ ತುಂಬ ಚೆಲ್ಲಿದೆ.

ಒಂದು ವೇಳೆ ಎರಡೂ ವಾಹನಗಳು ಹೆಚ್ಚಿನ ವೇಗದಲ್ಲಿದ್ದರೆ, ಅನಾಹುತ ಭೀಕರವಾಗಿರುತ್ತಿತ್ತು ಎಂದು ಬಸವಪುರ ಗ್ರಾಮದ ಪ್ರತ್ಯಕ್ಷದರ್ಶಿಯೋರ್ವರು ತಿಳಿಸಿದ್ದಾರೆ.

ಶಾಸಕರ ಮಾತಿಗೆ ಬೆಲೆಯಿಲ್ಲ:

ಇತ್ತೀಚೆಗೆ ಶಾಲಾ ವಾಹನ ಮತ್ತು ಟಿಪ್ಪರ್‌ ಡಿಕ್ಕಿಯಾಗಿ ಅಪಘಾತ ಸಂಭವಿಸಿದ್ದ ಬಳಿಕ ಶಾಸಕ ಎಚ್‌.ಎಂ. ಗಣೇಶ್‌ ಪ್ರಸಾದ್‌ ಮತ್ತು ಜಿಲ್ಲಾಧಿಕಾರಿ ಶ್ರೀರೂಪಾ ಅವರು ಟಿಪ್ಪರ್‌ಗಳ ನಿಯಂತ್ರಣಕ್ಕೆ ಹಲವು ಸೂಚನೆಗಳನ್ನು ಹೊರಡಿಸಿದ್ದರು. ಇಷ್ಟಾದರೂ ಮಾಲೀಕರು ಯಾವುದೇ ನಿಯಮ ಪಾಲಿಸದಿರುವುದೇ ಅಪಘಾತಕ್ಕೆ ಕಾರಣವೆಂದು ಜನರು ದೂರಿದ್ದಾರೆ.