ಸಾರಾಂಶ
ಚಿಂತಾಮಣಿ: ಜಲ್ಲಿಕಲ್ಲು ತುಂಬಿಕೊಂಡು ಹೋಗುತ್ತಿದ್ದ ಟಿಪ್ಪರ್ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ, ರಸ್ತೆ ಬದಿಯಲ್ಲಿದ್ದ ಹೋಟೆಲ್‌ಗೆ ನುಗ್ಗಿದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿ, ಇಬ್ಬರಿಗೆ ಗಂಭೀರ ಸ್ಚರೂಪದ ಗಾಯಗಳಾಗಿರುವ ಘಟನೆ ನಗರದ ಕೋಲಾರ ಸರ್ಕಲ್ ನಲ್ಲಿ ನಡೆದಿದೆ. ಅಪಘಾತದಲ್ಲಿ ಸಾವನ್ನಪ್ಪಿರುವ ವ್ಯಕ್ತಿಗಳನ್ನು ಕೋಲಾರ ವೃತ್ತದ ದರ್ಶನ್ ಹೋಟೆಲ್‌ನ ಮಾಲೀಕ ಶಿವಾನಂದ (೬೨) ಹಾಗೂ ಕೋಲಾರ ತಾಲೂಕಿನ ವೆಲಗಲಬರ‍್ರೆ ಗ್ರಾಮದ ಅಡಿಗೆ ಕೆಲಸ ಮಾಡುವ ಶಾಂತಕುಮಾರ್ ಎಂದು ಗುರುತಿಸಲಾಗಿದ್ದು, ಶ್ರೀನಿವಾಸಬಾಬು ಹಾಗೂ ಮುರಳಿ ಎಂಬುವವರಿಗೆ ಗಂಭೀರ ಸ್ವರೂಪದ ಗಾಯಗಳಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಗುರುವಾರ ಬೆಳಗ್ಗೆ ೯ ಗಂಟೆಯ ಸುಮಾರಿಗೆ ಚಿಂತಾಮಣಿ ನಗರದಿಂದ ಕೋಲಾರ ವೃತ್ತದ ಕಡೆ ಜಲ್ಲಿಕಲ್ಲು ತುಂಬಿಕೊಂಡು ತೆರಳುತ್ತಿದ್ದ ಟಿಪ್ಪರ್ ಲಾರಿಯು ಚಾಲಕನ ನಿಯಂತ್ರಣ ತಪ್ಪಿ ಕೋಲಾರ ವೃತ್ತದಲ್ಲಿನ ದರ್ಶನ್ ಹೋಟೆಲ್‌ಗೆ ನುಗ್ಗಿ ಪಲ್ಟಿಯಾಗಿ ಬಿದ್ದಿದ್ದು, ಹೋಟೆಲ್‌ನಲ್ಲಿದ್ದ ಶಿವಾನಂದ ಹಾಗೂ ಶಾಂತಕುಮಾರ್ ಎಂಬುವರು ಟಿಪ್ಪರ್ ಲಾರಿ ನುಗ್ಗಿರುವ ರಭಸಕ್ಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಗೆ ಟಿಪ್ಪರ್ ಚಾಲಕನ ಅತೀವೇಗ ಹಾಗೂ ಅಜಾಗರೂಕತೆ ಕಾರಣವಾಗಿದ್ದು, ಟಿಪ್ಪರ್ ಚಾಲಕ ಅಪಘಾತವಾದ ಕೂಡಲೇ ಸ್ಥಳದಿಂದ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಚಿಂತಾಮಣಿ ನಗರಠಾಣೆಯ ಪೊಲೀಸರು ಹಾಗೂ ಅಗ್ನಿಶಾಮಕದಳದ ಸಿಬ್ಬಂದಿ ಭೇಟಿ ನೀಡಿ, ಜೆಸಿಬಿ ಯಂತ್ರಗಳ ಮೂಲಕ ಟಿಪ್ಪರ್ ಲಾರಿಯನ್ನು ತೆರವುಗೊಳಿಸಿದ್ದಾರೆ.