ಎಸ್ಪಿ ಸೂಚನೆಗೂ ಕವಡೆ ಕಾಸಿನ ಕಿಮ್ಮತ್ತು ನೀಡದ ಟಿಪ್ಪರ್‌ ಗಳು!

| Published : Apr 21 2025, 12:55 AM IST

ಸಾರಾಂಶ

ಸಂಚಾರ ನಿಯಮಗಳು ಹಾಗೂ ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು ಎಂಬ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಸೂಚನೆಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂಬುದು ಸಾಬೀತಾಗುತ್ತಿದೆ!

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಸಂಚಾರ ನಿಯಮಗಳು ಹಾಗೂ ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು ಎಂಬ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಸೂಚನೆಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂಬುದು ಸಾಬೀತಾಗುತ್ತಿದೆ!

ಮೈಸೂರು- ಊಟಿ ಹೆದ್ದಾರಿಯ ಗುಂಡ್ಲುಪೇಟೆ, ಬೇಗೂರು ಪೊಲೀಸ್‌ ಠಾಣಾ ಸರಹದ್ದು ಹಾಗೂ ಚಾಮರಾಜನಗರ- ಗುಂಡ್ಲುಪೇಟೆ ರಸ್ತೆಯ ತೆರಕಣಾಂಬಿ ಸರಹದ್ದಿನಲ್ಲಿ ಸಂಚರಿಸುವ ಟಿಪ್ಪರ್‌ ಗಳನ್ನು ಗಮನಿಸಿದರೆ ಜಿಲ್ಲಾ ಪೊಲೀಸ್‌ ಅಧಿಕಾರಿಗಳ ಸೂಚನೆಯನ್ನು ಟಿಪ್ಪರ್‌ ಚಾಲಕರು ಗಾಳಿಗೆ ತೂರುತ್ತಿರುವುದು ಗೊತ್ತಾಗುತ್ತದೆ.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಇತ್ತೀಚೆಗೆ ಕ್ವಾರಿ ಲೀಸ್‌ ದಾರರು, ಕ್ರಷರ್‌ ಮಾಲೀಕರು ಹಾಗೂ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಸೂಚನೆ ನೀಡಿ, ಸಂಚಾರ ನಿಯಮ ಹಾಗೂ ಸುರಕ್ಷತಾ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದ್ದರು.

ನಿಯಮ ಪಾಲಿಸುತ್ತಿಲ್ಲ:

ಯಾವುದೇ ರೀತಿಯ ಕ್ವಾರಿ ಹಾಗೂ ಕ್ರಷರ್‌ ಉತ್ಪನ್ನಗಳನ್ನು ಸಾಗಾಣಿಕೆ ಮಾಡುವಾಗ ಮುಚ್ಚಿದ ಸ್ಥಿತಿಯಲ್ಲಿ ಸಾಗಾಣಿಕೆ ಮಾಡಬೇಕು ಎಂಬ ಸೂಚನೆಯನ್ನು ಸ್ಪಷ್ಟವಾಗಿ ಟಿಪ್ಪರ್‌ ಗಳು ಉಲ್ಲಂಘಿಸುತ್ತಿವೆ.

ಅಧಿಕ ಭಾರದ ಪ್ರಕರಣಗಳಲ್ಲಿ ನ್ಯಾಯಾಲಯದ ದೋಷಾರೋಪಣಾ ಪಟ್ಟಿ ಸಲ್ಲಿಸಿಕೊಂಡು ದಂಡ ವಿಧಿಸಲಾಗುತ್ತದೆ ಎಂಬ ಸೂಚನೆಯನ್ನೂ ಕಡೆಗಣಿಸಿ ಟಿಪ್ಪರ್‌ ಗಳು ಮಿತಿ ಮೀರಿದ ಅಧಿಕ ಭಾರದೊಂದಿಗೆ ಸಂಚರಿಸುತ್ತಿವೆ.

ವಾಹನಗಳ ಸವಾರರು ಕಡ್ಡಾಯವಾಗಿ ಸ್ಪೀಡ್‌ ಲಿಮಿಟ್‌ ಪಾಲಿಸಬೇಕು ಎಂಬ ಸೂಚನೆಯಿದೆ. ಆದರೆ ಟಿಪ್ಪರ್‌ ಗಳು ಮಿತಿ ಮೀರಿದ ವೇಗದಲ್ಲಿ ಚಲಿಸುತ್ತಿವೆ. ಅಲ್ಲದೆ ಬಹುತೇಕ ಚಾಲಕರು ಟಿಪ್ಪರ್‌ ಓಡಿಸುವ ಸಮಯದಲ್ಲಿ ಸದಾ ಮೊಬೈಲ್‌ ನಲ್ಲೇ ಮುಳುಗಿರುತ್ತಾರೆ. ಪೊಲೀಸ್‌ ಠಾಣೆಗಳ ಮುಂದೆಯೇ ಓವರ್‌ ಲೋಡ್‌ ತುಂಬಿದ ಹಾಗೂ ಹೊದಿಕೆ ಇಲ್ಲದೆ ಟಿಪ್ಪರ್‌ ಗಳು ಸಂಚರಿಸಿದರೂ ಸ್ಥಳೀಯ ಪೊಲೀಸರು ನಿಗಾ ವಹಿಸುತ್ತಿಲ್ಲ. ಕಾರಣ ಬಿಚ್ಚಿ ಹೇಳಬೇಕಿಲ್ಲ.

ಖಡಕ್‌ ಸೂಚನೆ ನೀಡಲಿ:

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಸಂಚಾರ ನಿಯಮಗಳು ಹಾಗೂ ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು ಎಂದು ಕ್ವಾರಿ, ಕ್ರಷರ್‌ ಹಾಗೂ ಪೊಲೀಸ್‌ ಅಧಿಕಾರಿಗಳ ಸಭೆ ನಡೆಸಿದ ಬಳಿಕವೂ ಹಳೆ ಚಾಳಿ ಬದಲಿಸದ ಟಿಪ್ಪರ್‌ ಗಳು ಎಂದಿನಂತೆ ಸಂಚರಿಸುತ್ತಿವೆ.

ಸ್ಥಳೀಯ ಪೊಲೀಸ್‌ ಠಾಣೆಗಳ ಮುಂದೆಯೇ ಓವರ್‌ ಲೋಡ್‌ ಹಾಗೂ ಮೇಲೊದಿಕೆ ಇಲ್ಲದೆ ಸಂಚರಿಸುವುದನ್ನು ತಡೆದು ತಪಾಸಣೆ ಮಾಡಿಸಲು ಮತ್ತೊಮ್ಮೆ ಖಡಕ್‌ ಸೂಚನೆಯನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ನೀಡುವರೋ ಕಾದು ನೋಡಬೇಕಿದೆ.