ಸಾರಾಂಶ
ರಬಕವಿ-ಬನಹಟ್ಟಿ:
ಶಿಕ್ಷಣ ನಂತರ ಏನು? ಎಂಬ ಬೃಹದಾಕಾರದ ಭವಿಷ್ಯದ ಪ್ರಶ್ನೆಗೆ ಉತ್ತರವಾಗಿ ಇಲ್ಲಿನ ಮಕ್ಕಳ ಸಂತೆ ಹಾಗೂ ವಿವಿಧ ವಸ್ತು ಪ್ರದರ್ಶನ ಕಾರ್ಯಕ್ರಮವು ಮಕ್ಕಳ ಭವಿಷ್ಯದ ನೈಜ ಬದುಕಿನ ಅನಾವರಣ ಮಾಡಿದೆ ಎಂದು ಮುಖಂಡ ಭೀಮಶಿ ಮಗದುಮ್ ಹೇಳಿದರು.ತಾಲೂಕಿನ ಹಳಿಂಗಳಿ ಗ್ರಾಮದ ಶರಣಬಸವೇಶ್ವರ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಮಠದ ದೀಪೋತ್ಸವ ಅಂಗವಾಗಿ ಹಮ್ಮಿಕೊಂಡ ಶರಣಬಸವೇಶ್ವರ ಸಿಬಿಎಸ್‌ಸಿ ಶಾಲೆಯ ಮಕ್ಕಳ ಸಂತೆ, ವಿಜ್ಞಾನ, ವಸ್ತು ಪ್ರದರ್ಶನ ವೀಕ್ಷಣೆ ಮಾಡಿ ಮಾತನಾಡಿದ ಅವರು, ಶಿಕ್ಷಣ ಹೊಂದಿದ ಬಳಿಕ ಸರ್ಕಾರಿ ಇಲ್ಲವೇ ಖಾಸಗಿ ನೌಕರಿಗಾಗಿ ಹಂಬಲಿಸುವವರ ಸಂಖ್ಯೆ ಇಂದು ಹೆಚ್ಚಿದೆ. ಆದರೆ ಕೆಲವೇ ಕೆಲವು ಕೃಷಿಕ ಮನೆತನಗಳಲ್ಲಿ ಕೃಷಿ ಕಾಯಕದೊಡನೆ ಉದ್ಯಮದತ್ತ ಚಿತ್ತ ಬೆಳೆಸುವ ಮನೋಭಾವನೆ ಬೆಳೆದಲ್ಲಿ ಭವಿಷ್ಯದ ನಾಗರಿಕರು ಆರ್ಥಿಕವಾಗಿ ಬಲಾಢ್ಯರಾಗಲು ಸಾಧ್ಯ ಎಂಬುವುದಕ್ಕೆ ಕೃಷಿಕ ಮನೆತನದಲ್ಲಿ ಹುಟ್ಟಿ ಬಿಇ. ಪದವಿ ಪಡೆದ ಬಳಿಕ ಕೃಷಿ ಕೆಲಸದ ಜೊತೆಗೆ ಸಕ್ಕರೆ ಉದ್ಯಮವನ್ನು ಸ್ಥಾಪಿಸುವ ಮೂಲಕ ವಿವಿಧ ಕ್ಷೇತ್ರಗಳಲ್ಲಿ ಕಾರ್ಖಾನೆಗಳನ್ನು ಆರಂಭಿಸಿ ಖ್ಯಾತರಾಗಿರುವ ಡಾ.ಮುರುಗೇಶ ನಿರಾಣಿ ಇಂದಿನ ಪೀಳಿಗೆಗೆ ಆದರ್ಶವಾಗಬೇಕು. ಕೃಷಿಯೊಡನೆ ಉದ್ಯಮವಲಯದಲ್ಲೂ ತೊಡಗುವ ಮೂಲಕ ಸಾವಿರಾರು ಕುಟುಂಬಗಳನ್ನು ಸಲಹುವ ತೃಪ್ತಿ ಹೊಂದುವ ಗುಣ ಮತ್ತು ಈ ನಿಟ್ಟಿನತ್ತ ಸಾಕಷ್ಟು ಪದವೀಧರರು ಕೆಲಸ ಮಾಡುತ್ತಿದ್ದು, ಅಂಥವರು ಮಕ್ಕಳಿಗೆ ಆದರ್ಶಪ್ರಾಯರಾಗಬೇಕು. ಮಕ್ಕಳಲ್ಲಿ ಲಾಭದಾಯಕ ಕೃಷಿ ಪದ್ಧತಿ ಪರಿಚಯ ಬೆಳೆಯಬೇಕು. ಇದು ಭವಿಷ್ಯದ ಬದುಕಿನಲ್ಲಿ ಸ್ವಾಭಿಮಾನದಿಂದ ಆರ್ಥಿಕವಾಗಿ ಸ್ವಾವಲಂಬಿಯಾಗುವತ್ತ ಮಕ್ಕಳನ್ನು ಬೆಳೆಸುವಲ್ಲಿ ಪೋಷಕರೂ ಮುಂದಾಗಬೇಕೆಂದರು.
ಕಾರ್ಯಕ್ರಮಕ್ಕೆ ಕಮರಿಮಠದ ಶಿವಾನಂದ ಸ್ವಾಮೀಜಿ ಚಾಲನೆ ನೀಡಿದರು. ಮುಖಂಡರಾದ ದೇವಲ ದೇಸಾಯಿ, ಮಗೆಪ್ಪ ದೇಸಾಯಿ, ಸುರೇಶ ಅಕ್ಕಿವಾಟ, ಪ್ರವೀಣ ನಾಡಗೌಡ, ಬುಜಬಲಿ ವೆಂಕಟಾಪೂರ, ಪ್ರದೀಪ ನಂದೆಪ್ಪನವರ, ಪ್ರಾಚಾರ್ಯ ವಾಯ್.ಎಚ್.ಅಲಾಸ್ ಸೇರಿದಂತೆ ಜನಪ್ರತಿನಿಧಿಗಳು, ಮುಖಂಡರು, ಪಾಲಕರು ಇದ್ದರು.