ಸಾರಾಂಶ
ನಗರದ ಶ್ರೀ ಸತ್ಯಗಣಪತಿ ಆಸ್ಥಾನ ಮಂಟಪದಲ್ಲಿ ಪ್ರತಿಷ್ಠಾಪಿಸಿರುವ ಶ್ರೀ ಸತ್ಯಗಣಪತಿ ಸ್ವಾಮಿಯವರ 96ನೇ ವರ್ಷದ ವಿಸರ್ಜನಾ ಮಹೋತ್ಸವ
ಕನ್ನಡಪ್ರಭವಾರ್ತೆ ತಿಪಟೂರು
ನಗರದ ಶ್ರೀ ಸತ್ಯಗಣಪತಿ ಆಸ್ಥಾನ ಮಂಟಪದಲ್ಲಿ ಪ್ರತಿಷ್ಠಾಪಿಸಿರುವ ಶ್ರೀ ಸತ್ಯಗಣಪತಿ ಸ್ವಾಮಿಯವರ 96ನೇ ವರ್ಷದ ವಿಸರ್ಜನಾ ಮಹೋತ್ಸವ ಹಾಗೂ ಕಲ್ಪತರು ನಾಡಹಬ್ಬದ ಪ್ರಯುಕ್ತ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದು ಇದೇ ನ.20ರಂದು ಅನ್ನದಾನ, ನ.21ರಂದು ಮಹಾಮಂಗಳಾರತಿ, ನ.22ರ ಶನಿವಾರ ರಾತ್ರಿ 10 ಗಂಟೆಯಿಂದ ನ.23ರ ಭಾನುವಾರ ರಾತ್ರಿ 12 ಗಂಟೆಯವರೆಗೆ ನಗರದ ರಾಜಬೀದಿಗಳಲ್ಲಿ ಸತತ 24ಗಂಟೆ ಅತ್ಯಂತ ಅರ್ಥ ಪೂರ್ಣ ಉತ್ಸವ ನಡೆಯಲಿದೆ. ಬೆಂಗಳೂರಿನ ಕರಗ, ಮೈಸೂರಿನ ದಸರಾ ರೀತಿಯಲ್ಲಿಯೇ ನಗರದ ಪ್ರಮುಖ ರಸ್ತೆಗಳಲ್ಲಿ ಅತ್ಯಂತ ವೈಭವದಿಂದ ಜರುಗುವ ಗಣೇಶನ ಉತ್ಸವ ನೋಡಲು ಕಿಕ್ಕಿರಿದು ಸೇರುವ ತಿಪಟೂರು, ತುರುವೇಕೆರೆ, ಚಿ.ನಾ.ಹಳ್ಳಿ, ಅರಸೀಕೆರೆ ಸೇರಿದಂತೆ ಸುತ್ತ-ಮುತ್ತಲಿನ ಜನರಲ್ಲದೆ, ಬೆಂಗಳೂರು, ತುಮಕೂರು, ಚಿತ್ರದುರ್ಗ, ಹಾಸನ ಜಿಲ್ಲೆಗಳಿಂದ ಭಕ್ತರು ಆಗಮಿಸುತ್ತಿದ್ದು, ವರ್ಷದಿಂದ ವರ್ಷಕ್ಕೆ ಉತ್ಸವದಲ್ಲಿ ಪಾಲ್ಗೊಳ್ಳುವ ಜನರ ಸಂಖ್ಯೆ ಹೆಚ್ಚುತ್ತಿದೆ. ವಿಸರ್ಜನೆ ಸಂದರ್ಭದಲ್ಲಿ ಸತತ ೨೪ ಗಂಟೆಗಳ ಕಾಲ ನಡೆಯುವ ಉತ್ಸವವನ್ನು ನೋಡಲು ಲಕ್ಷಾಂತರ ಸಂಖ್ಯೆಯಲ್ಲಿ ಜನರು ಸೇರುತ್ತಾರೆ. ನಗರದ ಹಲವು ಸರ್ಕಲ್‌ಗಳಲ್ಲಿ ಗಣೇಶನಿಗೆ ನೂರಾರು ಸಂಘ ಸಂಸ್ಥೆಗಳವರು ವಿಶೇಷ ಹಾರತುರಾಯಿ ಅರ್ಪಿಸಿ ಪೂಜೆ ಸಲ್ಲಿಸಿ ಪಾನಕ, ಸಿಹಿ, ಪುಳಿಯೊಗರೆ, ಚಿತ್ರಾನ್ನ ಹಂಚುವುದು ವಿಶೇಷ. ಹಾಗೆಯೇ ಪ್ರತಿ ವರ್ಷದಂತೆ ಈ ಬಾರಿಯೂ ಫ್ರೆಂಡ್ಸ್ ಸರ್ಕಲ್ ವತಿಯಿಂದ ಶ್ರೀ ಕನ್ನಿಕಾಪರಮೇಶ್ವರಿ ದೇವಸ್ಥಾನದ ರಸ್ತೆಗೆ ಉತ್ಸವದಲ್ಲಿ ಬರುವ ಶ್ರೀ ಸತ್ಯಗಣಪತಿ ಸ್ವಾಮಿಯವರಿಗೆ ವೈಭವದ 40ಕ್ಕೂ ಹೆಚ್ಚು ವಿವಿಧ ಹಣ್ಣು, ಹೂ, ನಾಣ್ಯ, ಕಾಳುಗಳಿಂದ ತಯಾರಿಸಿದ ಪುಷ್ಪಹಾರಗಳನ್ನು ಅರ್ಪಿಸಲಾಗುತ್ತಿದೆ. ಸಾಂಸ್ಕೃತಿಕವಾಗಿ ಅತ್ಯಂತ ವಿಜೃಂಭಣೆಯಿಂದ ನಡೆಯುವ ಈ ಉತ್ಸವದಲ್ಲಿ ಪ್ರಮುಖವಾಗಿ ಕೇರಳದ ಚಂಡೆವಾದ್ಯ, ನಾದಸ್ವರ, ಕೀಲು ಕುದುರೆ ಸೇರಿದಂತೆ ಹೆಸರಾಂತ ಕಲಾ ತಂಡಗಳು ಪ್ರತಿವರ್ಷ ಪ್ರದರ್ಶನ ನೀಡುತ್ತಿವೆ. ಭಾನುವಾರ ಮಧ್ಯರಾತ್ರಿ 12ಗಂಟೆ ನಂತರ ಗಣೇಶ ವಿಸರ್ಜನೆಯು ತಿಪಟೂರಿನ ಅಮಾನಿಕೆರೆ ಕಲ್ಯಾಣಿಯಲ್ಲಿ ನಡೆಯಲಿದೆ. ಪ್ರತಿವರ್ಷದಂತೆ ಈ ವರ್ಷವೂ ಯಾವುದೇ ಗೊಂದಲವಿಲ್ಲದೆ ಅತ್ಯಂತ ವಿಜೃಂಭಣೆಯಿಂದ ಉತ್ಸವ ನಡೆಯಲಿ ಎಂಬುದು ನಾಗರೀಕರ, ಜನಪ್ರತಿನಿಧಿಗಳ ಮತ್ತು ಸಂಘ ಸಂಸ್ಥೆಗಳ ಆಶಯವಾಗಿದೆ. ಎರಡು ದಿನಗಳ ಉತ್ಸವಕ್ಕೆ ಈಗಾಗಲೆ ಬಿಗಿ ಪೊಲೀಸ್ ವ್ಯವಸ್ಥೆ ಏರ್ಪಡಿಸಿದ್ದು, ಯಾವುದೇ ಅಹಿತಕರ ಘಟನೆಗಳಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.1930ರಲ್ಲಿ ಸ್ಥಾಪನೆಯಾಗಿರುವ ಉತ್ಸವ ಸಮಿತಿ
ಸ್ವಾತಂತ್ರ್ಯ ಸೇನಾನಿ ಬಾಲಗಂಗಾಧರ ತಿಲಕ್‌ರವರ ಕರೆಯಿಂದ ಪ್ರೇರಣೆ ಪಡೆದ ತಿಪಟೂರಿನ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ದಿ. ತಿಮ್ಮಪ್ಪಯ್ಯ ಅವರ ಉತ್ಸಾಹದಿಂದ 1930ರಲ್ಲಿ ತಿಪಟೂರು ನಗರದಲ್ಲಿ ಗಣೇಶ ಉತ್ಸವ ಹಮ್ಮಿಕೊಳ್ಳಲು ತೀರ್ಮಾನಿಸಲಾಯಿತು. ಆಗಿನ ಮೈಸೂರಿನ ಶಿವನಂಜಪ್ಪನವರ ಅಧ್ಯಕ್ಷತೆಯಲ್ಲಿ ರಚಿತವಾದ ಗಣೇಶ ಉತ್ಸವ ಸಮಿತಿಯ ಮುಖಂಡರಾಗಿ ಅನೇಕರು ಯಶಸ್ವಿಯಾಗಿ ಕಾರ್ಯನಿರ್ವಹಿಸಿ ಸುಸೂತ್ರವಾಗಿ ಪ್ರತಿ ವರ್ಷ ಅತ್ಯಂತ ವೈಭವದಿಂದ ನಡೆದುಕೊಂಡು ಬರುತ್ತಿದೆ.;Resize=(128,128))
;Resize=(128,128))
;Resize=(128,128))