ಸಾರಾಂಶ
ಶ್ರೀರಂಗಪಟ್ಟಣ: ಟಿಪ್ಪು ವಕ್ಫ್ ಎಸ್ಟೇಟ್ ವತಿಯಿಂದ ನ.10ರಂದು ಖಾಸಗಿಯಾಗಿ ಟಿಪ್ಪು ಜಯಂತಿ ಆಚರಣೆ ಸಾಧ್ಯತೆಗಳಿರುವುದರಿಂದ ಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ತಹಸೀಲ್ದಾರ್ ಪರಶುರಾಮ ಸತ್ತಿಗೇರಿ ಆದೇಶ ಹೊರಡಿಸಿದ್ದಾರೆ.
ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣಾ ಆರಕ್ಷಕ ನಿರೀಕ್ಷಕರ ವರದಿ ಅನ್ವಯ ಆದೇಶ ಹೊರಡಿಸಿರುವ ತಹಸೀಲ್ದಾರ್ ಅವರು, ನ.10 ರಂದು ಗಂಜಾಂನ ಗುಂಬಜ್‌ನಲ್ಲಿ ಟಿಪ್ಪುವಕ್ಪ್ ಎಸ್ಟೇಟ್ ವತಿಯಿಂದ ಟಿಪ್ಪುಜಯಂತಿ ಕಾರ್ಯಕ್ರಮ ನಡೆಸುತ್ತಾರೆಂದು ತಿಳಿದುಬಂದಿದ್ದು, ಖಾಸಗಿಯಾಗಿ ಆಚರಿಸುವ ಟಿಪ್ಪು ಜಯಂತಿ ಕಾರ್ಯಕ್ರಮಕ್ಕೆ ಮೈಸೂರು ಮತ್ತು ಅಕ್ಕಪಕ್ಕದ ತಾಲ್ಲೂಕು, ಜಿಲ್ಲೆಗಳಿಂದ ಮುಸ್ಲಿಂ ಯುವಕರು ಟಿಪ್ಪು ಅಭಿಮಾನಿಗಳು ಬರುವ ಮುನ್ಸೂಚನೆಗಳಿವೆ ಎಂದು ತಿಳಿಸಲಾಗಿದೆ.ಶ್ರೀರಂಗಪಟ್ಟಣ ಮತೀಯ ಸೂಕ್ಷ್ಮ ಪ್ರದೇಶವಾಗಿದೆ. ಈ ಸಂಬಂಧ ಬೆಳಗ್ಗೆ 6 ರಿಂದ ರಾತ್ರಿ 9 ರವರೆಗೆ ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಪ್ರತಿಭಟನೆ, ಮೆರವಣಿಗೆ, ರ್ಯಾಲಿ, ಬ್ಯಾನರ್, ಬಂಟಿಂಗ್ಸ್, ಬಾವುಟಗಳು ದ್ವನಿವರ್ಧಕಗಳು, ಪಟಾಕಿ ಸುಡುವುದು, ಡಿ.ಜೆ ಅಳವಡಿಸಿಕೊಂಡು ಘೋಷಣೆ ಕೂಗದಂತೆ ಹಾಗೂ ಟಾಬ್ಲೋ, ಪ್ರಚೋದನಾತ್ಮಕ ಚಿತ್ರವಿರುವ ಟೀ ಶರ್ಟ್ ಧರಿಸದಂತೆ ಸೂಚಿಸಿ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ. ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶಾಂತಿ ಕಾನೂನು ಸುವ್ಯವಸ್ಥೆ ಹಾಗೂ ಸುರಕ್ಷತೆ ದೃಷ್ಟಿ, ಸಾರ್ವಜನಿಕ ವ್ಯಕ್ತಿಗಳ ಪ್ರಾಣರಕ್ಷಣೆ, ಖಾಸಗಿ ಆಸ್ತಿ ರಕ್ಷಿಸುವ ದೃಷ್ಟಿಯಿಂದ ನಿಷೇಧಾಜ್ಞೆ ಜಾರಿಗೊಳಿಸಿರುವುದಾಗಿ ತಹಸೀಲ್ದಾರ್ ಪರಶುರಾಮ ಸತಿಗೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.