ಸಾರಾಂಶ
ಧ್ವಜ ಮೆರವಣಿಗೆ ಕುರಿತು ಪಕ್ಷದ ಮುಖಂಡರ ಜತೆ ಪೂರ್ವಭಾವಿ ಸಭೆ
ಕನ್ನಡ ಪ್ರಭ ವಾರ್ತೆ ಹೊನ್ನಾಳಿದೇಶದ ಹೆಮ್ಮೆಯ ಯೋಧರಲ್ಲಿ ಆತ್ಮಸ್ಥೈರ್ಯ ತುಂಬುವ ಸಲುವಾಗಿ ಬಿಜೆಪಿ ವತಿಯಿಂದ ಮೇ 20ರಂದು ತಿರಂಗಾ ಯಾತ್ರೆ ಹಮ್ಮಿಕೊಳ್ಳಲಾಗಿದೆ. ರಾಷ್ಟ್ರದ ಸರಕ್ಷೆತೆ ಏಕತೆ ವಿಚಾರದಲ್ಲಿ ಯಾರೂ ಕೂಡ ರಾಜಕೀಯ ಮಾಡಬಾರದು ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ನಗರದಲ್ಲಿ ಶನಿವಾರ ಬಿಜೆಪಿ ಪಕ್ಷದ ಮಾಜಿ ತಾಲೂಕು ಅಧ್ಯಕ್ಷ ಜೆ.ಕೆ.ಸುರೇಶ್ ಅವರ ನಿವಾಸದಲ್ಲಿ ತಿರಂಗಾ ಯಾತ್ರೆ ನಡೆಸುವ ಕುರಿತು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.ಪಾಕಿಸ್ತಾನಕ್ಕೆ ನಾಲ್ಕು ವಿಮಾನ ಕಳುಹಿಸಿ ಬೂಟಾಟಿಕೆ ಮಾಡಿದ್ದು ಬಿಟ್ಟರೆ, ಉಗ್ರರ ವಿರುದ್ದ ಕೇಂದ್ರ ಏನು ಕ್ರಮ ಕೈಗೊಂಡಿಲ್ಲ ಎಂದು ಹೇಳಿಕೆ ನೀಡಿರುವ ಕೋಲಾರ ಶಾಸಕ ಕೊತ್ತುರು ಮಂಜುನಾಥ್ ಒಬ್ಬ ಬೇಜವಾಬ್ದಾರಿ ವ್ಯಕ್ತಿಯಾಗಿದ್ದಾರೆ. ದೇಶದ ವಿರುದ್ದ ಹೇಳಿಕೆ ನೀಡುವ ಇಂತಹವರು ದೇಶದ ಹೆಮ್ಮೆಯ ಸೈನಿಕರನ್ನು, ಆವರ ಶ್ರಮವನ್ನು ಅವಮಾನಿಸುವ ಹಾಗೂ ಎಲ್ಲಾದಕ್ಕೂ ಸಾಕ್ಷಿ ಕೇಳಿ ದೇಶವನ್ನು ಅವಮಾನಿಸುವ ಕೆಲ ಮುಖಂಡರು ಕಾಂಗ್ರೆಸ್‌ನಲ್ಲಿದ್ದು ಅಂತಹ ಸಚಿವರು ಹಾಗೂ ಶಾಸಕರ ವಿರುದ್ಧ ಕ್ರಮ ಜರುಗಿಸಬೇಕು ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.
ಕಾಶ್ಮೀರದಲ್ಲಿ ಉಗ್ರರು ಧರ್ಮ ಕೇಳಿ 26 ಜನ ಹಿಂದೂಗಳನ್ನು ಹತ್ಯೆ ಮಾಡಿದ್ದು, ಪ್ರತಿಕಾರಕ್ಕಾಗಿ ನಮ್ಮ ಸೈನಿಕರು, ಸಿಂಧೂರ ಆಪರೇಷನ್ ಮೂಲಕ ಒಂದೇ ಬಾರಿಗೆ ಉಗ್ರರ ಅಡಗು ತಾಣಗಳ ಮೇಲೆ ದಾಳಿ ನಡೆಸಿ 110 ಉಗ್ರರನ್ನು ಹತ್ಯೆ ಮಾಡಿ ಪ್ರತಿಕಾರ ತೀರಿಸಿಕೊಂಡಿದ್ದು ಅಲ್ಲದೆ ಪಾಕಿಸ್ತಾನದ ಒಳಗೆ ನುಗ್ಗಿ ಪಾಕಿಸ್ತಾನದ ವಾಯುನೆಲೆಗಳನ್ನು ಧ್ವಂಸ ಮಾಡಿದೆ. ಆದರೂ ಕಾಂಗ್ರೆಸ್‌ನ ಕೆಲ ಸಚಿವರು ಹಾಗೂ ಶಾಸಕರು ತಮ್ಮ ಮನಸಿಗೆ ಬಂದ ಹಾಗೇ ಹೇಳಿಕೆ ಕೊಡುವ ಮೂಲಕ ನಮ್ಮ ಸೈನಿಕರನ್ನು ಅವಮಾನಿಸುತ್ತಿದ್ದಾರೆ ಎಂದರು.ಮಂಗಳವಾರ ಹೊನ್ನಾಳಿ ಪಟ್ಟಣದಲ್ಲಿ ನಡೆಯುವ ತಿರಂಗಾ ಯಾತ್ರೆ ಕಾರ್ಯಕ್ರಮದಲ್ಲಿ ಎಲ್ಲಾ ಕಾರ್ಯಕರ್ತರ ಕೈಯಲ್ಲಿ ರಾಷ್ಟ್ರಧ್ವಜ ಮಾತ್ರ ಇರಬೇಕು, ಎಲ್ಲರೂ ಬರುವಾರ ರಾಷ್ಟ್ರಧ್ವಜ ತರೋಣ, ನಮ್ಮ ವೀರ ಯೋಧರ ಪರವಾಗಿ ಘೋಷಣೆಗಳನ್ನು ಕೂಗೋಣ. ಈ ತಿರಂಗಾ ಯಾತ್ರೆ ಪಕ್ಷಾತೀತವಾಗಿದ್ದು ಎಲ್ಲರೂ ಭಾಗವಹಿಸಬೇಕು ಎಂದರು.
ಇದಕ್ಕೂ ಮುನ್ನ ಮಾಜಿ ಸೈನಿಕ ಬೆನಕನಹಳ್ಳಿ ಸಿದ್ದೇಶ್, ಬಿಜೆಪಿ ತಾಲೂಕು ಅಧ್ಯಕ್ಷ ನಾಗರಾಜ್, ಮಾತನಾಡಿದರು.ಮಾಜಿ ಅಧ್ಯಕ್ಷ ಜೆ.ಕೆ.ಸುರೇಶ್, ದೊಡ್ಡೇರಿ ರಾಜಣ್ಣ,ಕುಳಗಟ್ಟೆ ರಂಗನಾಥ್, ಸುರೇಂದ್ರನಾಯ್ಕ್, ಮಾರುತಿನಾಯ್ಕ್, ಎಸ್.ಎಸ್.ಬೀರಪ್ಪ, ಎಸ್.ಪಿ.ರವಿಕುಮಾರ, ತರಗನಹಳ್ಳಿ ರಮೇಶ್, ಪುರಸಭಾ ಮಾಜಿ ಅಧ್ಯಕ್ಷ ಬಾಬು ಹೋಬಳದಾರ್, ರಂಗನಾಥ್, ಕುಂದೂರು ಅನಿಲ್, ಇತರರು ಇದ್ದರು.