ಸಾರಾಂಶ
ರಮೇಶ್ ಬಿದರಕೆರೆ
ಹಿರಿಯೂರು : ದೇವರ ನಾಡು ಕೇರಳದ ವಯನಾಡಿನಲ್ಲಿ ಭೀಕರ ಭೂ ಕುಸಿತ ಸಂಭವಿಸಿದ್ದು, ಈ ದುರಂತದ ಪರಿಹಾರ ಕಾರ್ಯದಲ್ಲಿ ತೊಡಗಿದವರಲ್ಲಿ ವಯನಾಡಿನ ಜಿಲ್ಲಾಧಿಕಾರಿ ಮೇಘಶ್ರೀಯವರೂ ಒಬ್ಬರು.
ಹಗಲು ಇರುಳೆನ್ನದೆ ಪರಿಹಾರ ಕಾರ್ಯದಲ್ಲಿ ತೊಡಗಿರುವ ಮೇಘಶ್ರೀ ಮೂಲತಃ ಕನ್ನಡಿಗರಾಗಿದ್ದು, ಚಿತ್ರದುರ್ಗ ಜಿಲ್ಲೆಯವರು ಎಂಬುದು ಇನ್ನೂ ಹೆಮ್ಮೆಯ ಸಂಗತಿ. ವಯನಾಡು ಸರಣಿ ಭೂಕುಸಿತ ಇಡೀ ದೇಶವನ್ನೇ ತಲ್ಲಣಗೊಳಿಸಿದ್ದು ನೂರಾರು ಜನ ಮಣ್ಣಿನಡಿ ಸಿಲುಕಿ ಪ್ರಾಣ ಬಿಟ್ಟಿರುವ ದುರ್ಘಟನೆ ನಡೆದಿದೆ. ಮಣ್ಣಿನಲ್ಲಿ ಸಿಲುಕಿದ ಹಲವು ಜನರ ರಕ್ಷಣಾ ಕಾರ್ಯಾಚರಣೆಗೆ ಘಟನೆ ನಡೆದ ರಾತ್ರಿ ಜಿಲ್ಲಾಧಿಕಾರಿ ಮೇಘಶ್ರೀ ಧಾವಿಸಿ ಪರಿಹಾರ ಕಾರ್ಯದಲ್ಲಿ ತೊಡಗಿದ್ದಾರೆ.
ಮೇಘಶ್ರೀ ಮೂಲತಃ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ದೊಡ್ಡೇರಿ ಗ್ರಾಮದ ಎಸ್‌ಬಿಐ ಬ್ಯಾoಕಿನ ನಿವೃತ್ತ ವ್ಯವಸ್ಥಾಪಕ ರುದ್ರಮುನಿ ಮತ್ತು ದಿ.ರುಕ್ಮಿಣಿದೇವಿಯವರ ಪುತ್ರಿ. ಎಂಜಿನಿಯರಿಂಗ್ ಪಧವೀಧರೆ. ಆರಂಭದ ವಿದ್ಯಾಭ್ಯಾಸವನ್ನು ದೊಡ್ಡೇರಿ, ಚಳ್ಳಕೆರೆ, ಚಿತ್ರದುರ್ಗದಲ್ಲಿ ಮುಗಿಸಿದ ಅವರು ಉನ್ನತ ವ್ಯಾಸಂಗ ಬೆಂಗಳೂರಿನಲ್ಲಿ ಪಡೆದಿದ್ದಾರೆ. ನಂತರ ಎರಡು ವರ್ಷಗಳ ಕಾಲ ಖಾಸಗಿ ಕಂಪನಿಯಲ್ಲಿ ಉದ್ಯೋಗ ಮಾಡಿದ್ದಾರೆ.
ನಂತರ ದಿನಗಳಲ್ಲಿ ಕೆಲಸ ತೊರೆದ ಮೇಘಾಶ್ರೀ ಅಧ್ಯಯನದ ಕಡೆ ಗಮನ ಹರಿಸಿ 2016 ರಲ್ಲಿ ಐಎಎಸ್ ಪರೀಕ್ಷೆ ಪಾಸ್ ಮಾಡಿದ್ದಾರೆ. ಪ್ರಾರಂಭದಲ್ಲಿ ತಿರುವನಂತಪುರ ಮುಂತಾದ ಕಡೆ ಕಲೆಕ್ಟರ್ ಆಗಿ ಸೇವೆ ಸಲ್ಲಿಸಿದ ಅವರು, ಜುಲೈ10 ರಂದು ವಯನಾಡಿಗೆ ಜಿಲ್ಲಾಧಿಕಾರಿಯಾಗಿ ನಿಯುಕ್ತಿಗೊಂಡಿದ್ದಾರೆ. ಸೇವೆಗೆ ಹಾಜರಾದ ಆರಂಭದಲ್ಲೇ ದೊಡ್ಡ ದುರ್ಘಟನೆಯ ಪರಿಹಾರ ಕಾರ್ಯದ ಜವಾಬ್ದಾರಿ ಹೊತ್ತಿರುವ ಮೇಘಶ್ರೀಯವರು ಪ್ರತಿ ನಿಮಿಷವನ್ನು ಭೂ ಕುಸಿತದಡಿ ಸಿಲುಕಿರುವವ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದು, ಬಲಿಯಾದ ದುರ್ದೈವಿಗಳ ಸಾಮೂಹಿಕ ಅಂತ್ಯ ಸಂಸ್ಕಾರದಲ್ಲೂ ನಿಂತು ಮಾನವೀಯತೆ ಮೆರೆದಿದ್ದಾರೆ.
ಜಿಲ್ಲಾಧಿಕಾರಿ ಮೇಘಶ್ರೀಯವರು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಸೊಸೆ ಎಂಬುದು ಇನ್ನೊಂದು ವಿಶೇಷ. ಪರಪ್ಪನ ಅಗ್ರಹಾರ ಕಾರಾಗೃಹದ ಮುಖ್ಯ ಸೂಪರಿಂಟೆಡೆಂಟ್ ಆಗಿ ನಿವೃತ್ತರಾಗಿರುವ ತಾಲೂಕಿನ ಹರ್ತಿಕೋಟೆ ಗ್ರಾಮದ ವೀರೇಂದ್ರ ಸಿಂಹರ ಮಗ ಡಾ.ವಿಕ್ರಮಸಿಂಹರ ಪತ್ನಿ. ಇವರಿಗೆ ಧೃತಿ ಮತ್ತು ವಿಸ್ಮಯ ಎಂಬ ಇಬ್ಬರು ಮಕ್ಕಳಿದ್ದಾರೆ. ಘಟನೆಯ ಸ್ಥಳದಲ್ಲೇ ತಂಡ ಹೂಡಿರುವ ಮೇಘಶ್ರೀಯವರು ನೂತನವಾಗಿ ವಯನಾಡು ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ಮೇಘಶ್ರೀ ಕಾರ್ಯವೈಖರಿ ನಮ್ಮೆಲ್ಲರಿಗೂ ಹೆಮ್ಮೆ
ಜಿಲ್ಲಾಧಿಕಾರಿ ಮೇಘಶ್ರೀಯವರ ಮಾವ ಪರಪ್ಪನ ಅಗ್ರಹಾರ ಕಾರಾಗೃಹದ ನಿವೃತ್ತ ಚೀಫ್ ಸೂಪರಿಂಟೆಡೆoಟ್ ಹರ್ತಿಕೋಟೆ ವೀರೇಂದ್ರ ಸಿಂಹ ಮಾತನಾಡಿ, ಜಿಲ್ಲಾಧಿಕಾರಿ ಮೇಘಶ್ರೀ ಕಾರ್ಯವೈಖರಿ ನಮ್ಮೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ. ಅಲ್ಲಿನ ಟಿವಿಗಳು ದೇವರ ನಾಡಿನ ದೇವತೆಗಳು ಮಿಲಿಟರಿ ಕಮಾಂಡರ್, ಮಹಿಳಾ ಸಚಿವೆ ಮತ್ತು ಮೇಘಶ್ರೀಯವರನ್ನು ದೇವರ ನಾಡಿನ ದೇವತೆಗಳು ಎಂದು ತೋರಿಸುತ್ತಿವೆ. ಕೇರಳದ ಜನರೂ ಸಹ ಅವರ ಕಾರ್ಯವನ್ನು ಮೆಚ್ಚಿದ್ದಾರೆ. ಆರಂಭದಲ್ಲಿ ಆತಂಕದಲ್ಲಿದ್ದೆವು. ಇದೀಗ ಸೊಸೆಯ ಮೇಲೆ ಅಭಿಮಾನ ಮೂಡುತ್ತಿದೆ. ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸುತ್ತಿರುವ ಮೇಘಶ್ರೀಯವರ ಸೇವೆ ಕನ್ನಡಿಗರಾದ ನಮ್ಮೆಲ್ಲರಿಗೂ ಹೆಮ್ಮೆಯ ವಿಚಾರ ಎಂದರು.