ತೀರ್ಥ ಗ್ರಾಮ: ಮೂಲಭೂತ ಸಮಸ್ಯೆಗಳ ಸಂಗಮ

| Published : Mar 28 2024, 12:47 AM IST

ಸಾರಾಂಶ

ಹುಣಸಗಿ ತಾಲೂಕಿನ ತೀರ್ಥ ಗ್ರಾಮದಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ರಸ್ತೆಯ ಮೇಲೆ ಕೊಳಚೆ ನೀರು ಹರಿಯುತ್ತಿರುವುದು. ಜೆಜೆಎಂ ಯೋಜನೆಯಲ್ಲಿ ನಿರ್ಮಿಸಿರುವ ಬೋರವೆಲ್ ಸ್ಥಗಿತಗೊಂಡಿರುವುದು.

ಬಸವರಾಜ ಎಂ. ಕಟ್ಟಿಮನಿ

ಕನ್ನಡಪ್ರಭ ವಾರ್ತೆ ಹುಣಸಗಿ

ಚರಂಡಿಗಳು ತುಂಬಿ ಎಲ್ಲೆಂದರಲ್ಲಿ ಹರಿಯುತ್ತಿವೆ. ಕುಡಿಯುವ ನೀರಿನ ಸಮಸ್ಯೆ ಹೀಳತೀರದಾಗಿದೆ. ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ....

ಇದು ಹುಣಸಗಿ ಪಟ್ಟಣದಿಂದ 20ಕಿ.ಮೀ. ಅಂತರದಲ್ಲಿರುವ ತೀರ್ಥ ಗ್ರಾಮದ ಚಿತ್ರಣ. ಗ್ರಾಮವು ರಾಜನಕೋಳೂರ ಗ್ರಾಮ ಪಂಚಾಯ್ತಿಗೆ ಒಳಪಡುತ್ತದೆ. ಈ ಗ್ರಾಮದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಜನರು ವಾಸವಾಗಿದ್ದು, ಮೂವರು ಗ್ರಾಮ ಪಂಚಾಯ್ತಿ ಸದಸ್ಯರನ್ನು ಹೊಂದಿದೆ. ಆದರೆ ಈ ಗ್ರಾಮದಲ್ಲಿ ಮೂಲಭೂತ ಮಾತ್ರ ಮರೀಚಿಕೆ. ಹೀಗಾಗಿ ಗ್ರಾಮ ಪಂಚಾಯ್ತಿ ಸೇರಿದಂತೆ ಸ್ಥಳೀಯ ಆಡಳಿತದ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗ್ರಾಮೀಣ ಪ್ರದೇಶದ ಜನರ ಮನೆಮನೆಗೆ ನಲ್ಲಿ ನೀರು ಒದಗಿಸುವ ಜೆಜೆಎಂ ಯೋಜನೆಯಡಿ ನಿರ್ಮಿಸಿರುವ ನಾಲ್ಕು ಬೋರವೆಲ್ ಪೈಕಿ ಎರಡು ಬೋರವೆಲ್ ಸ್ಥಗಿತಗೊಂಡಿದೆ. ಗ್ರಾಮದಲ್ಲಿರುವ ನಾಲ್ಕು ಕೈ ಪಂಪ್ ಗಳ ಪೈಕಿ ಎರಡು ಕೆಟ್ಟು ಹೋಗಿವೆ. ಇನ್ನುಳಿದ ಬೋರವೆಲ್ ನಲ್ಲಿ ಸಮರ್ಪಕ ನೀರು ಬರುತ್ತಿಲ್ಲ. ಇದರಿಂದ ಗ್ರಾಮಸ್ಥರು ತೊಂದರೆ ಅನುಭವಿಸುವಂತಾಗಿದೆ. ಬೋರವೆಲ್ ದುರಸ್ತಿ ಮಾಡಿಸಿ ಕುಡಿಯಲು ನೀರು ಒದಗಿಸಿ ಎಂದು ಗ್ರಾಮ ಪಂಚಾಯ್ತಿ ಅಧಿಕಾರಿಗಳಿಗೆ ಸಾಕಷ್ಟು ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ ಎಂದು ಕಾಂಗ್ರೆಸ್ ಮುಖಂಡ ಶರಣಗೌಡ ಮೇಲಿನಮನಿ ಮತ್ತು ದೇವರಾಜ ಮೇಲಿನಮನಿ ತಿಳಿಸಿದ್ದಾರೆ.

ತೀರ್ಥ ಗ್ರಾಮದಿಂದ ಕೊಡೇಕಲ್, ಬೂದಿಹಾಳ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಎಲ್ಲೆಂದರಲ್ಲಿ ಕೊಳಚೆ ನೀರು ಹರಿದು ಇಡೀ ಗ್ರಾಮವು ಕಸದ ತೊಟ್ಟಿಯಂತಾಗಿದೆ. ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ರಸ್ತೆಯ ಮೇಲೆ ಎಲ್ಲೆಂದರಲ್ಲಿ ಕೊಳಚೆ ನೀರು ಹರಿಯುತ್ತಿದೆ. ಇದರಿಂದ ಗ್ರಾಮದಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಇಡೀ ಗ್ರಾಮವೇ ಕಸದ ತೊಟ್ಟಿಯಂತೆ ಭಾಸವಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಈ ಗ್ರಾಮದ ಸಮಸ್ಯೆಯನ್ನು ಕಂಡರೂ ಕಾಣದಂತೆ ವರ್ತಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ತೀರ್ಥ ಗ್ರಾಮದಲ್ಲಿರುವ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಅಧಿಕಾರಿಗಳ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳಲಾಗುತ್ತದೆ.

ಗರಿಮಾ ಪನ್ವಾರ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಯಾದಗಿರಿ.