ತೀರ್ಥಹಳ್ಳಿ: ಕಲ್ಲೋಣಿಯಲ್ಲಿ ಒಂದೇ ಕುಟುಂಬದ ಮೂವರು ಸಜೀವ ದಹನ

| Published : Oct 09 2023, 12:46 AM IST

ತೀರ್ಥಹಳ್ಳಿ: ಕಲ್ಲೋಣಿಯಲ್ಲಿ ಒಂದೇ ಕುಟುಂಬದ ಮೂವರು ಸಜೀವ ದಹನ
Share this Article
  • FB
  • TW
  • Linkdin
  • Email

ಸಾರಾಂಶ

ರಾಘವೇಂದ್ರ ಕೇಕುಡ, ನಾಗರತ್ನಮ್ಮ, ಶ್ರೀರಾಮ ಮೃತಪಟ್ಟ ನತದೃಷ್ಟರು
ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ ತಾಲೂಕಿನ ಅರಳಸುರುಳಿ ಸಮೀಪದ ಕಲ್ಲೋಣಿಯಲ್ಲಿ ಭಾನುವಾರ ನಸುಕಿನಲ್ಲಿ ಸಂಭವಿಸಿದ ಬೆಂಕಿ ದುರಂತದಲ್ಲಿ ತಂದೆ, ತಾಯಿ ಹಾಗೂ ಮಗ ಸಜೀವ ದಹನವಾದ ದಾರುಣ ಘಟನೆ ನಡೆದಿದೆ. ಇನ್ನೋರ್ವ ಮಗ ಅರೆಬರೆ ಸುಟ್ಟು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು, ಆತನನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮನೆಯ ಯಜಮಾನ ರಾಘವೇಂದ್ರ ಕೇಕುಡ (60), ಪತ್ನಿ ನಾಗರತ್ನಮ್ಮ (55) ಮತ್ತು ಹಿರಿಯ ಪುತ್ರ ಶ್ರೀರಾಮ (30) ಮೃತ ದುರ್ದೈವಿಗಳು. ರಾಘವೇಂದ್ರ ಕೇಕುಡರ ಕಿರಿಯ ಪುತ್ರ 28 ವರ್ಷದ ಭರತ್ ಎಂಬವರು ಅರೆಬರೆ ಸುಟ್ಟ ಸ್ಥಿತಿಯಲ್ಲಿ ಬದುಕುಳಿದಿದ್ದು, ತೀರ್ಥಹಳ್ಳಿ ಪಟ್ಟಣದ ಜೆಸಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಅವರನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ಸೇರಿಸಲಾಗಿದೆ. ಕರಕಲಾಗಿರುವ ದೇಹಗಳು: ಮನೆಯ ಕೋಣೆಯೊಂದರಲ್ಲಿ ಗುರುತು ಸಿಗಲಾರದಷ್ಟು ಮಟ್ಟಿಗೆ ಸುಟ್ಟು ಕರಕಲಾಗಿರುವ ಮೂವರ ದೇಹಗಳೂ ಒಂದರ ಮೇಲೊಂದು ಮಾಂಸದ ಮುದ್ದೆಯಂತೆ ಬಿದ್ದಿವೆ. ಸುಮಾರು 10 ಎಕರೆಯಷ್ಟು ಅಡಕೆ ತೋಟವನ್ನು ಈ ಕುಟುಂಬ ಹೊಂದಿದೆ. ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿಯೂ ಸಬಲವಾಗಿದೆ. ಗ್ರಾಮಸ್ಥರ ಅನಿಸಿಕೆಯಂತೆ ಕುಟುಂಬದಲ್ಲಿ ಮೇಲ್ನೋಟಕ್ಕೆ ಗಂಭೀರ ಸಮಸ್ಯೆಗಳೇನೂ ಇಲ್ಲ ಎನ್ನಲಾಗಿದೆ. ಅತ್ಯಂತ ನಿಗೂಢ ಪ್ರಕರಣ: ಬಟ್ಟೆ ಬರೆ, ಮರದ ತುಂಡುಗಳು ಹೀಗೆ ಸುಡಬಹುದಾದ ವಸ್ತುಗಳನ್ನು ರಾಶಿ ಹಾಕಿಕೊಂಡು ಬೆಂಕಿ ಹಚ್ಚಿಕೊಂಡಂತೆ ಮತ್ತು ಮೇಲ್ನೋಟಕ್ಕೆ ಆತ್ಮಹತ್ಯೆಯಂತೆಯೇ ಕಂಡುಬರುವ ಈ ಪ್ರಕರಣ ಅತ್ಯಂತ ನಿಗೂಢವೂ ಆಗಿದೆ. ಮನೆಯ ಮಾಡಿಗೂ ಬೆಂಕಿ ತಗುಲಿದ್ದು, ಅಗ್ನಿಶಾಮಕದಳ ಸಿಬ್ಬಂದಿ ಸಕಾಲಕ್ಕೆ ಆಗಮಿಸಿ ಕಾರ್ಯಾಚರಣೆ ಕೈಗೊಂಡ ಪರಿಣಾಮ ಮನೆಗೆ ಹೆಚ್ಚಿನ ಹಾನಿ ಸಂಭವಿಸಿಲ್ಲ. - - - ಬಾಕ್ಸ್‌ -1 ನನ್ನನ್ನೂ ಸಾಯಿಸಿ ಬಿಡಿ: ಭರತ್‌ ಗೋಳಾಟ ಸುಮಾರು 50 ಭಾಗ ಸುಟ್ಟು ಬದುಕುಳಿದಿರುವ ಭರತ್ ಮನೆಯ ಹೊರಗೆ ಬಿದ್ದಿದ್ದು ಆತನ ಕೂಗನ್ನು ಕೇಳಿದ ಮಹಿಳೆಯೊಬ್ಬರು ಆಸುಪಾಸಿನವರನ್ನು ಸೇರಿಸಿ ಆಸ್ಪತ್ರೆಗೆ ಕಳುಹಿಸಲು ನೆರವಾಗಿದ್ದರು. ಆ ಸಂಧರ್ಭದಲ್ಲಿ ನನ್ನನ್ನೂ ಸಾಯಿಸಿ ಬಿಡಿ ಎಂದೂ ಭರತ್ ಹೇಳಿದ್ದಲ್ಲದೇ, ಬಾವಿಗೆ ಹಾರ್ತೀನಿ ಅಂತ ಓಡುತ್ತಿದ್ದರು. ಆಗ ಆತನನ್ನು ಸ್ಥಳದಲ್ಲಿದ್ದವರು ನಿಯಂತ್ರಿಸಿದ್ದರು ಎಂದೂ ಹೇಳಲಾಗಿದೆ. - - - ಬಾಕ್ಸ್‌-2 ಸಂಘ ಪರಿವಾರ ನಂಟಿರುವ ಕುಟುಂಬ ರಾಘವೇಂದ್ರ ಕೇಕುಡರ ಸಹೋದರರಲ್ಲಿ ಒಬ್ಬರಾದ ಪ.ರಾ.ಕೃಷ್ಣಮೂರ್ತಿ ಸಂಘ ಪರಿವಾರದ ರಾಷ್ಟ್ರಮಟ್ಟದ ಕಾರ್ಯಕರ್ತರಾಗಿದ್ದಾರೆ. ಇನ್ನೋರ್ವ ಸಹೋದರ ಡಾ.ಸುಧೀಂದ್ರ ಶಿವಮೊಗ್ಗದಲ್ಲಿ ವೈದ್ಯರಾಗಿದ್ದು, ರಾಮಕೃಷ್ಣ ದೂರವಾಣಿ ಇಲಾಖೆ ನಿವೃತ್ತ ಅಧಿಕಾರಿ. ಸಂಘ ಪರಿವಾರದ ಸಂಪರ್ಕ ಇರುವ ಈ ಮನೆಗೆ ಆರ್‌ಎಸ್‌ಎಸ್‌ ಪ್ರಮುಖ ಸು.ರಾಮಣ್ಣ ಕೂಡ ಬರುತ್ತಿದ್ದರು. ಘಟನೆ ತಿಳಿಯುತ್ತಿದ್ದಂತೆ ಶಾಸಕ ಆರಗ ಜ್ಞಾನೇಂದ್ರ ಮತ್ತು ಮಾಜಿ ಶಾಸಕ ಕಿಮ್ಮನೆ ರತ್ನಾಕರ್ ಸ್ಥಳಕ್ಕೆ ಅಗಮಿಸಿದ್ದರು. - - - ಬಾಕ್ಸ್‌-3 ಭರತ್‌ ಹೇಳಿಕೆ ಆಧರಿಸಿ ತನಿಖೆ- ಎಸ್‌ಪಿ: ಜಿಲ್ಲಾ ಎಸ್‍ಪಿ ಮಿಥುನ್ ಕುಮಾರ್‌ ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಎಸ್‌ಪಿ ಅವರು, ಸದರಿ ಘಟನೆಯ ಕುರಿತಂತೆ ಸಮಗ್ರ ಮಾಹಿತಿಯನ್ನು ಕಲೆ ಹಾಕಿದ್ದು, 2-3 ಸುಳಿವುಗಳು ದೊರೆತಿವೆ. ಈ ದುರಂತದಲ್ಲಿ ಬದುಕಿ ಉಳಿದಿರುವ ಭರತ್ ಅವರ ಹೇಳಿಕೆಯನ್ನು ಆಧರಿಸಿ ಮುಂದಿನ ತನಿಖೆ ನಡೆಸಲಾಗುವುದು ಎಂದಿದ್ದಾರೆ. - - - -08ಟಿಟಿಎಚ್01: ಅರಳಸುರುಳಿ ಸಮೀಪದ ಕಲ್ಲೋಣಿ ಗ್ರಾಮದಲ್ಲಿ ಬೆಂಕಿ ದುರಂತ ನಡೆದ ಮನೆಯ ಮುಂದೆ ಜನರು ಸೇರಿರುವುದು. - 08ಟಿಟಿಎಚ್02: ರಾಘವೇಂದ್ರ ಕೇಕುಡ - 08ಟಿಟಿಎಚ್03: ಶ್ರೀರಾಮ್‌ -08ಟಿಟಿಎಚ್04: ನಾಗರತ್ನಮ್ಮ