ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳ ಪ್ರಮುಖ ದೇವಾಲಯಗಳನ್ನು ಟೆಂಪಲ್ ಟೂರಿಸಂ ಪರಿಕಲ್ಪನೆಯಡಿ ಅಭಿವೃದ್ಧಿಗೊಳಿಸಲು ಯೋಜನೆ ರೂಪಿಸಲಾಗಿದೆ ಎಂದು ಪ್ರವಾಸೋದ್ಯಮ ಮತ್ತು ಇಂಧನ ಇಲಾಖೆ ಸಚಿವ ಕೆ. ಜೆ. ಜಾರ್ಜ್ ಹೇಳಿದ್ದಾರೆ.

ಉಡುಪಿ: ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳ ಪ್ರಮುಖ ದೇವಾಲಯಗಳನ್ನು ಟೆಂಪಲ್ ಟೂರಿಸಂ ಪರಿಕಲ್ಪನೆಯಡಿ ಅಭಿವೃದ್ಧಿಗೊಳಿಸಲು ಯೋಜನೆ ರೂಪಿಸಲಾಗಿದೆ ಎಂದು ಪ್ರವಾಸೋದ್ಯಮ ಮತ್ತು ಇಂಧನ ಇಲಾಖೆ ಸಚಿವ ಕೆ. ಜೆ. ಜಾರ್ಜ್ ಹೇಳಿದ್ದಾರೆ.ಅವರು ಸೋಮವಾರ ಜಿಲ್ಲೆಯ ಕಾಪು ತಾಲೂಕಿನ ಪಡುಬಿದ್ರಿಯ ಬ್ಲೂಫ್ಲಾಗ್ ಬೀಚ್ ಮತ್ತು ಕುಂದಾಪುರ ತಾಲೂಕಿನ ಮರವಂತೆ ಬೀಚ್‌ಗಳಿಗೆ ಭೇಟಿ, ಅಲ್ಲಿನ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿ, ಸುದ್ದಿಗಾರರೊಂದಿಗೆ ಮಾತನಾಡಿದರು.ರಾಜ್ಯದಲ್ಲಿ ಇದುವರೆಗೆ ಪ್ರವಾಸೋದ್ಯಮದ ಹೆಸರಿನಲ್ಲಿ ದೇವಾಲಯಗಳಲ್ಲಿ ಸಣ್ಣಪುಟ್ಟ ಅತಿಥಿಗೃಹಗಳನ್ನು ನಿರ್ಮಿಸಲಾಗಿದೆ. ಆದರೆ ಇದೀಗ ಅಲ್ಲಿಗೆ ಪ್ರವಾಸಿಗಳನ್ನು ಸೆಳೆಯುವುದಕ್ಕೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ದೊಡ್ಡ ಮಟ್ಟದಲ್ಲಿ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುತ್ತಿದೆ. ಇಲ್ಲಿನ ಕೃಷ್ಣಮಠ, ಕೊಲ್ಲೂರು ಮೂಕಾಂಬಿಕಾ ದೇವಾಲಯ ಇತ್ಯಾದಿ ಕರಾವಳಿಯ ದೊಡ್ಡ ದೇವಾಲಯಗಳನ್ನು ತಿರುಪತಿಯ ರೀತಿಯಲ್ಲಿ ಅಭಿವೃದ್ಧಿಗೊಳಿಸಲಾಗುತ್ತದೆ ಎಂದರು.ಕರಾವಳಿ ಜಿಲ್ಲೆಗಳಲ್ಲಿ ಕಡಲು ಕೊರೆತ ಬೀಚ್‌ ಟೂರಿಸಂಗೆ ಹೊಡೆತ ನೀಡುತ್ತಿದೆ. ಆದರೆ ಕಡಲು ಕೊರೆತ ಪ್ರವಾಸೋದ್ಯಮ ಇಲಾಖೆಯಡಿ ಬರುವುದಿಲ್ಲ, ಅದು ಬಂದರು ಮತ್ತು ಮೀನುಗಾರಿಕಾ ಇಲಾಖೆಗೆ ಸಂಬಂಧಪಟ್ಟ ಸಮಸ್ಯೆಯಾದ್ದರಿಂದ, ಆ ಇಲಾಖೆಯ ಅಧಿಕಾರಿಗಳ‍ು ಕಡಲುಕೊರೆತಕ್ಕೆ ಶಾಶ್ವತ ಪರಿಹಾರಕ್ಕೆ ಮಂಗಳೂರಿನಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯ ಮುಂದೆ ಪ್ರಸ್ತಾಪ ಸಲ್ಲಿಸಿದರೆ ಬೆಂಬಲ ನೀಡುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಪ್ರವಾಸೋದ್ಯಮ ಅಭಿವೃದ್ಧಿಗೆ ಖಾಸಗಿ ಸಹಭಾಗಿತ್ವದಲ್ಲಿ ರೆಸಾರ್ಟ್‌, ಹೋಮ್ ಸ್ಟೇಗಳಿಗೆ ಪರವಾನಿಗೆ ನೀಡಲಾಗುತ್ತದೆ, ಆದರೆ ರೆಸಾರ್ಟ್‌ಗಳ ನೆಪದಲ್ಲಿ ಸರ್ಕಾರಿ ಭೂಮಿ ಅತಿಕ್ರಮಣ ಮಾಡಿದರ ನಿರ್ದಾಕ್ಷಿಣ್ಯವಾಗಿ ತೆರವು ಮಾಡಲಾಗುತ್ತದೆ, ಹೋಮ್‌ಸ್ಟೇಗಳ ಹೆಸರಿನಲ್ಲಿ ಲಾಡ್ಜ್‌ಗಳನ್ನು ನಡೆಸಿದರೆ ಪರವಾನಗಿ ರದ್ದು ಮಾಡಲಾಗುತ್ತದೆ ಎಂದವರು ಎಚ್ಚರಿಕೆ ನೀಡಿದರು. ಒಂದು ಮನೆಯಲ್ಲಿ 6 ರೂಮ್‌ಗಳಿದ್ದರೇ ಅಲ್ಲಿ ಹೋಮ್‌ ಸ್ಟೇ ಆರಂಭಿಸುವುದಕ್ಕೆ ಅನುಮತಿ ನೀಡುತ್ತೇವೆ, ಅಲ್ಲಿಗೆ ಬರುವವರನ್ನು ಅತಿಥಿಗಳಂತೆ ನೋಡಿಕೊಳ್ಳಬೇಕು, ಅಲ್ಲಿಯೇ ಆಹಾರ ತಯಾರಿಸಿ ನೀಡಬೇಕು, ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದರು.ವಿದ್ಯುತ್ ಖರೀದಿಸಿ ಹೊಂದಾಣಿಕೆ:

ಈ ಬಾರಿ ಮಳೆ ಕೊರತೆಯಾಗಿ ಜಲ ವಿದ್ಯುತ್ ಉತ್ಪಾದನೆ ಕಡಿಮೆಯಾಗಿದೆ, ಆದ್ದರಿಂದ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ, ಅದಕ್ಕೆ ಬೇರೆ ಕಡೆಯಿಂದ ವಿದ್ಯುತ್ ಖರೀದಿಸಿ ಕೊರತೆ ಸಮದೂಗಿಸಲಾಗುತ್ತಿದೆ ಎಂದರು.ವಾರಾಹಿ ಪಂಪಿಂಗ್ ಸ್ಟೇಷನ್ ಗೆ ಜನರ ವಿರೋಧದ ಬಗ್ಗೆ ಮಾತನಾಡಿದ ಸಚಿವರು, ಎಲ್ಲಾ ಯೋಜನೆಗಳಿಗೂ ಜನರ ವಿರೋಧ ಇರುತ್ತದೆ, ಶರಾವತಿ ಯೋಜನೆಗೂ ವಿರೋಧ ಇಲಾಖೆ, ವಾರಾಹಿ ಯೋಜನೆಗೂ ಇದೆ. ಆದರೇ ತಜ್ಞರ ವರದಿ ಪಡೆದು ಯೋಜನೆ ಆರಂಭಿಸಲಾಗುತ್ತದೆ, ಜನರಿಗೆ ವಿದ್ಯುತ್ ನೀಡಬೇಕಲ್ಲ ಎಂದವರು ಪ್ರಶ್ನಿಸಿದರು.ಕರಾವಳಿ ಅಭಿವೃದ್ಧಿ ಮಂದಳಿ ಅಧ್ಯಕ್ಷ ಎಂ. ಎ. ಗಫೂರ್, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಅಶೋಕ್ ಕೊಡವೂರು, ಮಾಜಿ ಶಾಸಕ ಗೋಪಾಲ ಪೂಜಾರಿ, ಅಪರ ಜಿಲ್ಲಾಧಿಕಾರಿ ಅಬಿದ್ ಗದ್ಯಾಳ, ಇಲಾಖೆಯ ಅಧಿಕಾರಿಗಳು ಮುಂತಾವದರಿದ್ದರು.

ಲೈನ್‌ಮೆನ್‌ಗಳಿಗೆ 9 ವರ್ಷ ವರ್ಗ ಇಲ್ಲ

ರಾಜ್ಯದ ಇಂಧನ ಇಲಾಖೆಗೆ ಸೇರುವ ಹೊಸ ಲೈನ್‌ಮೆನ್‌ಗಳಿಗೆ 9 ವರ್ಷ ನೇಮಕವಾದ ಜಿಲ್ಲೆಯಲ್ಲಿಯೇ ಕೆಲಸ ಮಾಡಬೇಕು, ಈ ಹಿಂದೆ ಬೇರೆ ಜಿಲ್ಲೆಗಳಿಗೆ ನೇಮಕವಾದವರು ತಮ್ಮೂರಿಗೆ ವರ್ಗಾವಣೆ ಮಾಡಿಸಿಕೊಳ್ಳುತಿದ್ದರು, ಇದರಿಂದ ಉಡುಪಿಯಂತಹ ಜಿಲ್ಲೆಗಳಲ್ಲಿ ಲೈನ್‌ಮೆನ್‌ಗಳ ಕೊರತೆಯಾಗುತ್ತಿತ್ತು, ಆದ್ದರಿಂದ ಇನ್ನು ಮುಂದೆ ಹೊಸ ಲೈನ್‌ಮೆನ್‌ಗಳಿಗೆ 9 ವರ್ಷ ವರ್ಗಾವಣೆ ಇಲ್ಲ ಎಂದರು. ಉಡುಪಿ, ದಕ ಜಿಲ್ಲೆಗಳಿಂದ ಯುವಕರು ಲೈನ್‌ಮೆನ್‌ಗಳಾಗುವುದಕ್ಕೆ ಮುಂದೆ ಬರುವುದಿಲ್ಲ, ಇಲ್ಲಿ ಲೈನ್‌ಮೆನ್ ನೇಮಕಾತಿ ಪರೀಕ್ಷೆಗಳನ್ನು ಕಟ್ಟುನಿಟ್ಟಾಗಿ ಮಾಡುತ್ತಾರೆ, ಆದ್ದರಿಂದ ಆಯ್ಕೆಯಾಗುವವರ ಸಂಖ್ಯೆ ಕಡಿಮೆ, ಆದ್ದರಿಂದ ಇಲ್ಲಿ ಬೇರೆ ಜಿಲ್ಲೆಯ ಲೈನ್‌ಮೆನ್‌ಗಳೇ ಹೆಚ್ಚಿದ್ದಾರೆ ಎಂದರು.ಬಿಜೆಪಿ ಪಾದಯಾತ್ರೆ ಯಾಕೆ?

ಬಿಜೆಪಿಯವರು ಯಾಕೆ ಪಾದಯಾತ್ರೆ ಮಾಡ್ತಿದ್ದಾರೆ ಮೊದಲು ಹೇಳಲಿ ಎಂದು ಸಚಿವ ಕೆ ಜೆ. ಜಾರ್ಜ್‌ ಹೇಳಿದರು. ನಾವು ಕೂಡ ಪಾದಯಾತ್ರೆ ಮಾಡಿದ್ದೆವು, ಬಳ್ಳಾರಿ ಭಾಗದಲ್ಲಿ ಅಭಿವೃದ್ಧಿಗಾಗಿ ಪಾದಯಾತ್ರೆ ಮಾಡಿದ್ದೆವು, ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತವನ್ನು ಜೋಡಿಸುವ ಪಾದಯಾತ್ರೆ ಮಾಡಿದೆವು, ಆದರೇ ಬಿಜೆಪಿಯವರು ಪಾದಯಾತ್ರೆ ಯಾಕೆ ಮಾಡ್ತಿದ್ದಾರೆ ಅಂತ ಜನರಿಗೆ ಹೇಳಲಿ ಎಂದವರು ಸವಾಲು ಹಾಕಿದರು.