ಹೊಸಕೋಟೆ: ತಿರುಮಲ ತಿರುಪತಿ ಶ್ರೀ ವೆಂಕಟೇಶ್ವರ ಸ್ವಾಮಿಯ ಮೇಲಿನ ಅಪಾರ ಭಕ್ತಿ, ಶ್ರದ್ಧೆ ಮತ್ತು ನಂಬಿಕೆಯಿಂದ ಕಳೆದ 50 ವರ್ಷಗಳಿಂದ ನಿರಂತರ ಪಾದಯಾತ್ರೆ ನಡೆಸಿಕೊಂಡು ಬರುತ್ತಿರುವ ಪದಾಯಾತ್ರಿ ಭಕ್ತರ ಸೇವೆ ಶ್ಲಾಘನೀಯ ಎಂದು ಬಿಎಂಆರ್‌ಡಿಎ ಮಾಜಿ ಅಧ್ಯಕ್ಷ ಜಯರಾಜ್ ತಿಳಿಸಿದರು

ಹೊಸಕೋಟೆ: ತಿರುಮಲ ತಿರುಪತಿ ಶ್ರೀ ವೆಂಕಟೇಶ್ವರ ಸ್ವಾಮಿಯ ಮೇಲಿನ ಅಪಾರ ಭಕ್ತಿ, ಶ್ರದ್ಧೆ ಮತ್ತು ನಂಬಿಕೆಯಿಂದ ಕಳೆದ 50 ವರ್ಷಗಳಿಂದ ನಿರಂತರ ಪಾದಯಾತ್ರೆ ನಡೆಸಿಕೊಂಡು ಬರುತ್ತಿರುವ ಪದಾಯಾತ್ರಿ ಭಕ್ತರ ಸೇವೆ ಶ್ಲಾಘನೀಯ ಎಂದು ಬಿಎಂಆರ್‌ಡಿಎ ಮಾಜಿ ಅಧ್ಯಕ್ಷ ಜಯರಾಜ್ ತಿಳಿಸಿದರು.

ನಗರದಲ್ಲಿ ತಿರುಪತಿ ಪಾದಯಾತ್ರಿಗಳಿಗೆ ಉಪಾಹಾರದ ವ್ಯವಸ್ಥೆ ಕಲ್ಪಿಸಿ ಬೀಳ್ಕೊಡುಗೆ ವೇಳೆ ಮಾತನಾಡಿದ ಅವರು, ಬೆಂಗಳೂರಿನ ಶ್ರೀ ತಿರುಮಲ ತಿರುಪತಿ ಪಾದಯಾತ್ರೆ ಸೇವಾ ಕೈಂಕರ್ಯ ಟ್ರಸ್ಟ್ 50ನೇ ವರ್ಷದ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ಮೈಸೂರು, ಮಂಡ್ಯ, ಚಾಮರಾಜನಗರ, ಶಿವಮೊಗ್ಗ, ತುಮಕೂರು ಸೇರಿದಂತೆ ಬೆಂಗಳೂರಿನಿಂದ ತೆರಳುತ್ತಿರುವ 400ಕ್ಕೂ ಹೆಚ್ಚಿನ ಪಾದಯಾತ್ರಿಗಳಿಗೆ ಉಪಹಾರ ಸೇವೆ ಏರ್ಪಡಿಸಿರುವುದು ತಮ್ಮ ಪುಣ್ಯವೆಂದು ಭಾವಿಸಿದ್ದೇನೆ ಎಂದರು.

ಪಾದಯಾತ್ರೆ ರೂವಾರಿ ನಟರಾಜ ಸ್ವಾಮಿ ಕಳೆದ ಐದು ದಶಕಗಳಿಂದ ನಿರಂತರವಾಗಿ ಭಕ್ತಿ ಮತ್ತು ಶ್ರದ್ಧೆಯಿಂದ ಈ ಧಾರ್ಮಿಕ ಪರಂಪರೆಯನ್ನು ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಅವರ ಭಕ್ತಿ, ಸರಳತೆ, ನಡೆ-ನುಡಿ ಹಾಗೂ ಸೇವಾ ಮನೋಭಾವದಿಂದ ಪ್ರೇರಿತರಾಗಿ ಅನೇಕರು ಪಾದಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ದೇವರ ಅನುಗ್ರಹವಿಲ್ಲದೆ ಯಾವುದೇ ಕಾರ್ಯವೂ ನಡೆಯುವುದಿಲ್ಲ. ದೇವರೇ ನಮ್ಮಿಂದ ಸೇವೆ ಮಾಡಿಸುತ್ತಾನೆ. ತಂದೆ-ತಾಯಿಯನ್ನು ಗೌರವಿಸುವುದು, ಹಿರಿಯರನ್ನು ಪ್ರೀತಿಯಿಂದ ಕಾಣುವುದು ಹಾಗೂ ಸ್ನೇಹ ಸಂಬಂಧಗಳನ್ನು ಉಳಿಸಿಕೊಳ್ಳುವುದು ಸೇರಿದಂತೆ ಜೀವನದ ಮೌಲ್ಯಗಳನ್ನು ಇಂತಹ ಧಾರ್ಮಿಕ ಸೇವೆಗಳು ಕಲಿಸಿಕೊಡುತ್ತವೆ ಎಂದರು.

ಪಾದಯಾತ್ರೆ ಸಮಿತಿಯ ಮುಖ್ಯಸ್ಥ ಚೇತನ್ ಮಾತನಾಡಿ, ಬೆಂಗಳೂರಿನಿಂದ ತಿರುಪತಿಗೆ ಪಾದಯಾತ್ರೆ ಏಳು ದಿನಗಳ ಕಾಲ ನಡೆಯುತ್ತೆ. ಪ್ರಥಮ ದಿನ ಹೊಸಕೋಟೆಗೆ ಬಂದಾಗ ಜಯರಾಜ್ ಅವರು ಪಾದಯಾತ್ರಿಗಳಿಗೆ ಉಪಾಹಾರ ವ್ಯವಸ್ಥೆ ಕಲ್ಪಿಸಿ ಹಣ್ಣು ಕೊಟ್ಟು ಬೀಳ್ಕೊಟ್ಟಿರುವುದು ಪ್ರಶಂಸನೀಯ ಎಂದರು.

50ನೇ ವರ್ಷದ ವಿಶೇಷ ಸಂದರ್ಭದಲ್ಲಿ ಪಾದಯಾತ್ರಿಗಳು ಅವಿಮುಕ್ತೇಶ್ವರ ಸ್ವಾಮಿ, ಆಂಜನೇಯಸ್ವಾಮಿ ಹಾಗೂ ಸರಸ್ವತಿ ದೇವಿ ಶಾರದಾಂಬ ದೇವಾಲಯಗಳಲ್ಲಿ ದರ್ಶನ ಪಡೆದು ತಿರುಪತಿಯತ್ತ ಪಾದಯಾತ್ರೆ ಕೈಗೊಂಡರು.

ಈ ಸಂಧರ್ಭದಲ್ಲಿ ಬಿಎಂಆರ್‌ಡಿಎ ಮಾಜಿ ಅಧ್ಯಕ್ಷ ವಿಜಯ್‌ಕುಮಾರ್ ಸೇರಿದಂತೆ ಜನನಿ ಚಾರಿಟಬಲ್ ಟ್ರಸ್ಟ್‌ ಎಲ್ಲಾ ಪಧಾಧಿಕಾರಿಗಳು ಹಾಜರಿದ್ದರು.

ಫೋಟೋ: 23 ಹೆಚ್‌ಎಸ್‌ಕೆ 1 ಮತ್ತು 2

ಹೊಸಕೋಟೆಯಲ್ಲಿ ತಿರುಮಲ ತಿರುಪತಿ ಪಾದಯಾತ್ರಿಗಳಿಗೆ ಬಿಎಂಆರ್‌ಡಿಎ ಮಾಜಿ ಅಧ್ಯಕ್ಷ ಡಾ.ಸಿ.ಜಯರಾಜ್ ಉಪಾಹಾರ ವ್ಯವಸ್ಥೆ ಮಾಡಿ ಅಭಿನಂದಿಸಿ ಬೀಳ್ಕೊಟ್ಟರು.