ಅರ್ಹ ಫಲಾನುಭವಿಗಳಿಗೆ ಮಾತ್ರ ನಿವೇಶನ ಹಕ್ಕು​ಪತ್ರಗಳನ್ನು ನೀಡಲಾಗುವುದು. ಹಣ ಪಡೆದು ಜನರನ್ನು ವಂಚಿಸುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ನಗರಸಭೆ ಆಯುಕ್ತ ಎರಗುಡಿ ಶಿವಕುಮಾರ್ ಎಚ್ಚರಿಸಿದ್ದಾರೆ.

ಹೊಸಪೇಟೆ: ಅರ್ಹ ಫಲಾನುಭವಿಗಳಿಗೆ ಮಾತ್ರ ನಿವೇಶನ ಹಕ್ಕು​ಪತ್ರಗಳನ್ನು ನೀಡಲಾಗುವುದು. ಹಣ ಪಡೆದು ಜನರನ್ನು ವಂಚಿಸುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ನಗರಸಭೆ ಆಯುಕ್ತ ಎರಗುಡಿ ಶಿವಕುಮಾರ್ ಎಚ್ಚರಿಸಿದ್ದಾರೆ.

ಮಂಗಳವಾರ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು. ಸ್ಲಂ ಪ್ರದೇಶಗಳಲ್ಲಿ ಹಕ್ಕುಪತ್ರ ಕೊಡಿಸುವುದಾಗಿ ಮಧ್ಯವರ್ತಿಗಳು ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಸದಸ್ಯರು ಪ್ರಶ್ನಿಸಿದಕ್ಕೆ ಆಯುಕ್ತರು ಸ್ಪಷ್ಟನೆ ನೀಡಿದರು. ಹಕ್ಕುಪತ್ರ ವಿಚಾರದಲ್ಲಿ ಯಾರಾದರೂ ಹಣ ಕೇಳಿದರೆ ಕೊಡಬ್ಯಾಡಿ. ಹಣ ಕೊಟ್ಟರೆ ಹಕ್ಕುಪತ್ರ ಸಿಗುವುದಿಲ್ಲ. ಅರ್ಹ ಫಲಾನುಭವಿಗಳಿಗೆ ಮಾತ್ರ ನಿವೇಶನ ಹಕ್ಕು​ಪತ್ರಗಳನ್ನು ನೀಡಲಾಗುವುದು ಎಂಬ ಪ್ರಜ್ಞೆ ಎಲ್ಲರಿಗೂ ಇರಲಿ ಎಂದು ಹೇಳಿದರು.

ನಗರಸಭಾ ಅಧ್ಯಕ್ಷ ಎನ್‌. ರೂಪೇಶ್ ಕುಮಾರ್ ಮಾತನಾಡಿ, ಹಕ್ಕುಪತ್ರ ವಿಚಾರದಲ್ಲಿ ಜನರಿಗೆ ತಿಳಿವಳಿಕೆ ನೀಡಲು ಕಸದ ವಾಹನದಲ್ಲಿ ಘೋಷಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ನಗರದ ಗುರುಭವನ ಹಿಂಭಾಗದಲ್ಲಿ ಅನೇಕ ವರ್ಷಗಳಿಂದ ವಾಸವಿರುವ ಅನೇಕ ಕುಟುಂಬಗಳಿಗೆ ಹಕ್ಕುಪತ್ರ ನೀಡಬೇಕು, ಈ ಪ್ರದೇಶವನ್ನು ಕೊಳೆಗೇರಿಯೆಂದು ಘೋಷಿಸಬೇಕು ಎಂಬ ಪ್ರಸ್ತಾವಕ್ಕೆ ಸಂಬಂಧಿಸಿದಂತೆ ಈ ಎಚ್ಚರಿಕೆಯನ್ನು ಸಭೆಯಲ್ಲಿ ನೀಡಲಾಯಿತು.

ಹೊಸಪೇಟೆ ನಗರಕ್ಕೆ ಮುಂದಿನ 50 ವರ್ಷಗಳ ನೀರಿನ ಪೂರೈಕೆಯನ್ನು ಗಮನದಲ್ಲಿಟ್ಟುಕೊಂಡು ₹476 ಕೋಟಿ ಮೊತ್ತದ ಯೋಜನೆಗೆ ಚಾಲನೆ ನೀಡುವುದಕ್ಕೆ ನಗರಸಭೆ ಸದಸ್ಯರು ಒಕ್ಕೊರಲ ಸಮ್ಮತಿ ನೀಡಿದ್ದು, ಮುಂದಿನ ದಿನಗಳಲ್ಲಿ ಇದು ಟೆಂಡರ್‌ ಮತ್ತು ಇತರ ಪ್ರಕ್ರಿಯೆಗಳಿಗೆ ಅನುವು ಮಾಡಿಕೊಡಲಿದೆ.

ನಗರಸಭಾ ಅಯುಕ್ತ ಎರಗುಡಿ ಶಿವಕುಮಾರ್ ಅವರು ಕರ್ನಾಟಕ ಗಣಿಬಾಧಿತ ಪ್ರದೇಶ ಪರಿಸರ ಪುನಶ್ಚೇತನ ನಿಗಮದ (ಕೆಎಂಇಆರ್‌ಸಿ) ಅನುದಾನದಡಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ 84 ಎಂಎಲ್‌ಡಿ ಸಾಮರ್ಥ್ಯದ (ಸದ್ಯ 39 ಎಂಎಲ್‌ಡಿ) ನೀರು ಸಬರರಾಜು ಯೋಜನೆಯ ಬಗ್ಗೆ ಮಾಹಿತಿ ನೀಡಿದರು.

ನಗರದ ಜೋಳದರಾಶಿ ಗುಡ್ಡ, ಜಂಬುನಾಥ ಗುಡ್ಡ, ಕೊಂಡನಾಯಕನಹಳ್ಳಿ ಹಾಗೂ ಕಮಲಾಪುರಗಳಲ್ಲಿ ಬೃಹತ್ ನೀರು ಸಂಗ್ರಹಾಗಾರ ನಿರ್ಮಿಸುವುದು, ಹೆಚ್ಚುವರಿ ನೀರಿನ ಟ್ಯಾಂಕ್‌ಗಳನ್ನು ನಿರ್ಮಿಸುವ ಯೋಜನೆಯ ವಿವರನ್ನು ಅವರು ನೀಡಿದರು.

ನಗರದಲ್ಲಿ ಎಲ್ಲೆಲ್ಲಿ ಜಲಸಂಗ್ರಹಾಗಾರ, ಟ್ಯಾಂಕ್‌ ನಿರ್ಮಿಸಲಾಗುತ್ತದೆಯೋ, ಆ ಭಾಗದ ನಗರಸಭಾ ಸದಸ್ಯರ ಗಮನಕ್ಕೆ ತಂದು ಕಾಮಗಾರಿ ನಡೆಸಬೇಕು ಎಂದು ರಮೇಶ್ ಗುಪ್ತ, ತಾರಿಹಳ್ಳಿ ಜಂಬುನಾಥ, ಜಿ.ಎಸ್. ಹನುಮಂತಪ್ಪ (ಬುಜ್ಜಿ) ಮೊದಲಾದ ಸದಸ್ಯರ ಸಲಹೆ ಒಪ್ಪಿಕೊಂಡು, ಠರಾವಿಗೆ ಒಪ್ಪಿಗೆ ಸೂಚಿಸಲಾಯಿತು.

ನಗರದಲ್ಲಿ ಒಳಚರಂಡಿ ಕಾಮಗಾರಿ ವಹಿಸಿಕೊಂಡ ಗುತ್ತಿಗೆದಾರರು ಹಾಗೂ ಬಿಪಿಸಿಎಲ್‌ ಕಂಪನಿಯವರು ರಸ್ತೆ ಅಗೆದು ಮುಚ್ಚದೆ ಹಾಗೆಯೇ ಬಿಟ್ಟುಬಿಡುತ್ತಿರುವುದಕ್ಕೆ ಸದಸ್ಯರು ಪಕ್ಷಾತೀತವಾಗಿ ಆಕ್ಷೇಪಿಸಿದರು. ತಕ್ಷಣ ಗುತ್ತಿಗೆದಾರರನ್ನು ಕರೆಸಿ ನೋಟಿಸ್ ನೀಡಬೇಕು ಎಂದು ಆಯುಕ್ತರು ಸೂಚಿಸಿದರು.

ತುಂಗಭದ್ರಾ ಮಂಡಳಿಗೆ ಒಳಪಟ್ಟ 31.37 ಎಕರೆ ಜಮೀನನ್ನು ನಗರಸಭೆಗೆ ಹಸ್ತಾಂತರಿಸಬೇಕು ಎಂಬ ಒತ್ತಾಯಕ್ಕೆ ಮಣಿದ ಆಯುಕ್ತರು, ಜಿಲ್ಲಾಧಿಕಾರಿ ಅವರಿಗೆ ಈ ಬಗ್ಗೆ ಪತ್ರ ಬರೆಯಲು ಸಮ್ಮತಿಸಿದರು.

ನಗರಸಭೆ ಉಪಾಧ್ಯಕ್ಷ ಜೀವರತ್ನಂ, ಸ್ಥಾಯಿ ಸಮಿತಿ ಅಧ್ಯಕ್ಷ ಸರವಣ, ಸದಸ್ಯರಾದ ಎಲ್‌.ಎಸ್. ಆನಂದ್, ರಮೇಶ್‌ ಗುಪ್ತ, ಮೊಹಮ್ಮದ್ ಗೌಸ್, ಮಂಜುನಾಥ, ರಾಘವೇಂದ್ರ, ಲತಾ ಸಂತೋಷ್‌, ರಾಧಾ ಮಲ್ಲಿಕಾರ್ಜುನ, ಅಬ್ದುಲ್ ಖದೀರ್‌, ಸಂತೋಷ್‌ ಉಪಸ್ಥಿತರಿದ್ದರು.