ತಮ್ಮ ಕ್ಷೇತ್ರ ವ್ಯಾಪ್ತಿಯ ಬಾಗೇಪಲ್ಲಿ, ಗುಡಿಬಂಡೆ ಹಾಗೂ ಚೇಳೂರು ತಾಲೂಕುಗಳಲ್ಲಿ ಸುಮಾರು 40 ಸಾವಿರ ಮನೆಗಳನ್ನು ಅನಧಿಕೃತವಾಗಿ ನಿರ್ಮಿಸಲಾಗಿದೆ.

ಗುಡಿಬಂಡೆ: ನನ್ನ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ನಿವೇಶನ ರಹಿತರಿಗೆ ಆದಷ್ಟು ಶೀಘ್ರವಾಗಿ ನಿವೇಶನಗಳ ಹಕ್ಕುಪತ್ರಗಳನ್ನು ಹಂಚಿಕೆ ಮಾಡಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಭರವಸೆ ನೀಡಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ತಾಲೂಕಿನ ಎಂಟು ಗ್ರಾಪಂ ವ್ಯಾಪ್ತಿಯಲ್ಲಿನ ಅಭಿವೃದ್ಧಿ ಕಾಮಗಾರಿಗಳ ಕುರಿತು ಮುಖಂಡರೊಂದಿಗೆ ನಡೆದ ಚರ್ಚಾ ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕರು, ತಮ್ಮ ಕ್ಷೇತ್ರ ವ್ಯಾಪ್ತಿಯ ಬಾಗೇಪಲ್ಲಿ, ಗುಡಿಬಂಡೆ ಹಾಗೂ ಚೇಳೂರು ತಾಲೂಕುಗಳಲ್ಲಿ ಸುಮಾರು 40 ಸಾವಿರ ಮನೆಗಳನ್ನು ಅನಧಿಕೃತವಾಗಿ ನಿರ್ಮಿಸಲಾಗಿದೆ. ಎಲ್ಲಾ ಮನೆಗಳಿಗೆ ಹಕ್ಕುಪತ್ರ ಹಾಗೂ ಖಾತೆ ಮಾಡಿಕೊಡುವ ಕೆಲಸ ಮಾಡುತ್ತೇನೆ. ಈಗಾಗಲೇ ನಿವೇಶನ ರಹಿತರ ಪಟ್ಟಿಯನ್ನೂ ಸಿದ್ಧಪಡಿಸಲಾಗಿದ್ದು, ಆದಷ್ಟು ಶೀಘ್ರವಾಗಿ ನಿವೇಶನಗಳ ಹಕ್ಕುಪತ್ರಗಳನ್ನು ವಿತರಿಸಲಾಗುವುದು ಎಂದರು.

ರಾಮಪಟ್ಟಣ ರಸ್ತೆ ಅಗಲೀಕರಣ ಸಂಬಂಧ ಅಂದು ಮಧ್ಯ ರಸ್ತೆಯಿಂದ 20 ಅಡಿ ಅಗಲೀಕರಣಕ್ಕೆ ಶಿಫಾರಸು ಮಾಡಲಾಗಿತ್ತು. ಆದರೆ ಕೆಲವರು ಅದರ ವಿರುದ್ಧ ಕೋರ್ಟ್ನಲ್ಲಿ ದಾವೆ ಹೂಡಿದ್ದಾರೆ. ಮತ್ತೊಮ್ಮೆ ಮಾಲೀಕರೊಂದಿಗೆ ಚರ್ಚೆ ನಡೆಸುತ್ತೇನೆ. ಒಂದು ವೇಳೆ ಅವರು ಒಪ್ಪದೇ ಇದ್ದರೆ, ಸರ್ಕಾರದ ನಿಯಮಾವಳಿಯಂತೆ ರಸ್ತೆ ಅಗಲೀಕರಣಕ್ಕೆ ಮುಂದಾಗುವಂತೆ ಸೂಚನೆ ನೀಡುತ್ತೇನೆ ಎಂದರು.

ಈ ವೇಳೆ ತಹಸೀಲ್ದಾರ್ ಸಿಗ್ಬತ್ತುಲ್ಲಾ, ತಾಪಂ ಇಒ ನಾಗಮಣಿ, ವಿವಿಧ ಗ್ರಾಪಂಗಳ ಮುಖಂಡರು, ಸಾರ್ವಜನಿಕರು ಸೇರಿದಂತೆ ಹಲವರು ಹಾಜರಿದ್ದರು.

19ಜಿಯುಡಿ1: ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕಿನ ಎಂಟು ಗ್ರಾಪಂ ವ್ಯಾಪ್ತಿಯಲ್ಲಿನ ಅಭಿವೃದ್ಧಿ ಕಾಮಗಾರಿಗಳ ಕುರಿತು ಮುಖಂಡರೊಂದಿಗೆ ಶಾಸಕ ಸುಬ್ಬಾರೆಡ್ಡಿ ಅವರು ಚರ್ಚೆ ನಡೆಸಿದರು.