ಇನ್ನುಳಿದ ಮನೆಗಳಿಗೂ ಶೀಘ್ರ ಹಕ್ಕುಪತ್ರ

| Published : Jul 01 2025, 12:47 AM IST

ಸಾರಾಂಶ

ಜನರ ಆಶೀರ್ವಾದದಿಂದ ಈ ಕ್ಷೇತ್ರದ ಶಾಸಕನಾಗಿದ್ದೇನೆ. ನೀವುಗಳು ನನ್ನ ಮೇಲೆ ವಿಶ್ವಾಸ ಇಟ್ಟು ನೀಡಿದ ಮತಗಳಿಗೆ ಚ್ಯುತಿ ಬಾರದ ರೀತಿಯಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಶಾಸಕ ಬಸವರಾಜು ವಿ. ಶಿವಗಂಗಾ ಹೇಳಿದ್ದಾರೆ.

- 41 ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಿ ಚನ್ನಗಿರಿ ಕ್ಷೇತ್ರ ಶಾಸಕ ಶಿವಗಂಗಾ

- - -

ಕನ್ನಡಪ್ರಭ ವಾರ್ತೆ ಚನ್ನಗಿರಿ

ಜನರ ಆಶೀರ್ವಾದದಿಂದ ಈ ಕ್ಷೇತ್ರದ ಶಾಸಕನಾಗಿದ್ದೇನೆ. ನೀವುಗಳು ನನ್ನ ಮೇಲೆ ವಿಶ್ವಾಸ ಇಟ್ಟು ನೀಡಿದ ಮತಗಳಿಗೆ ಚ್ಯುತಿ ಬಾರದ ರೀತಿಯಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಶಾಸಕ ಬಸವರಾಜು ವಿ. ಶಿವಗಂಗಾ ಹೇಳಿದರು.

ಸೋಮವಾರ ಪಟ್ಟಣದ ಬಾಬು ಜಗಜೀವನರಾಂ ಸಮುದಾಯ ಭವನದಲ್ಲಿ ವಸತಿ ಇಲಾಖೆ, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಪಟ್ಟಣದ ವಿವಿಧ ಕೊಳಚೆ ಪ್ರದೇಶಗಳ ನಿವಾಸಿಗಳಿಗೆ ಹಕ್ಕುಪತ್ರಗಳ ವಿತರಣಾ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಚನ್ನಗಿರಿ ಪಟ್ಟಣದಲ್ಲಿ ಸರ್ಕಾರಿ ಹಾಗೂ ಸ್ಥಳೀಯ ಸಂಸ್ಥೆಗಳ ಮಾಲೀಕತ್ವದಲ್ಲಿನ ಖಾಲಿ ನಿವೇಶನಗಳಲ್ಲಿ 11 ಕೊಳಚೆ ಪ್ರದೇಶಗಳಲ್ಲಿ 1308 ಕುಟುಂಬಗಳು ಮನೆಗಳನ್ನು ನಿರ್ಮಿಸಿಕೊಂಡಿವೆ. ಈಗಾಗಲೇ ಈ ಎಲ್ಲ ಮನೆಗಳ ಸರ್ವೇ ಕಾರ್ಯ ಮುಗಿದಿದೆ. ಈ ದಿನ ಹರಿಜನ ಕಾಲೋನಿಯ 41 ಕುಟುಂಬಗಳಿಗೆ ಹಕ್ಕುಪತ್ರಗಳನ್ನು ವಿತರಣೆ ಮಾಡಲಾಗುತ್ತಿದೆ. ಇನ್ನುಳಿದಂತೆ ಹಂತ ಹಂತವಾಗಿ ಹಕ್ಕುಪತ್ರಗಳನ್ನು ವಿತರಿಸಲಾಗುವುದು ಎಂದರು.

ಪ್ರಧಾನಮಂತ್ರಿ ಆವಾಸ್ ಯೋಜನೆಯಲ್ಲಿ ಮನೆಗಳನ್ನು ನಿರ್ಮಿಸಿಕೊಳ್ಳಲು ₹70.91 ಕೋಟಿ ಅನುದಾನದಲ್ಲಿ 1002 ಮನೆಗಳು ಮಂಜೂರಾಗಿವೆ. ಇದರಲ್ಲಿ 800 ಮನೆಗಳನ್ನು ಪ್ರಾರಂಭಿಸಿದ್ದು, 610 ಮನೆಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. 190 ಮನೆಗಳು ನಿರ್ಮಾಣ ಹಂತದಲ್ಲಿವೆ. ಇನ್ನುಳಿದ 202 ಮನೆಗಳು ಬಾಕಿ ಉಳಿದಿವೆ. ಅರ್ಹ ಫಲಾನುಭವಿಗಳು ಮನೆ ಬೇಕು ಎಂದು ಅರ್ಜಿ ಸಲ್ಲಿಸಿದರೆ ಅವರಿಗೆ ಮನೆಗಳನ್ನು ಮಂಜೂರು ಮಾಡಿರಿ ಎಂದು ಸ್ಥಳದಲ್ಲಿದ್ದ ಪುರಸಭೆ ಮುಖ್ಯಾಧಿಕಾರಿಗೆ ಸೂಚನೆ ನೀಡಿದರು.

ಶಾಸಕನಾದ ಮೇಲೆ ಚನ್ನಗಿರಿ ಕ್ಷೇತ್ರ ಅಭಿವೃದ್ಧಿಗೆ ಸಾಕಷ್ಟು ಅನುದಾನವನ್ನು ತಂದು ಕಾಮಗಾರಿಗಳನ್ನು ಮಾಡಿಸಲಾಗುತ್ತಿದೆ. ಇನ್ನುಳಿದ ಮನೆಗಳಿಗೆ ಹಕ್ಕುಪತ್ರಗಳನ್ನು ಶೀಘ್ರದಲ್ಲಿಯೇ ವಿತರಣೆ ಮಾಡಬೇಕು. ಅದಕ್ಕೆ ಬೇಕಾದ ಎಲ್ಲ ರೀತಿಯ ದಾಖಲೆಗಳನ್ನು ಅಧಿಕಾರಿಗಳು ಮುಂದಿನ ಒಂದು ತಿಂಗಳ ಒಳಗಾಗಿ ಸಿದ್ಧಪಡಿಸಿಕೊಳ್ಳಬೇಕು ಎಂದು ಸೂಚನೆ ನೀಡಿದರು.

ಪುರಸಭೆ ಸದಸ್ಯರಾದ ಜಿ.ನಿಂಗಪ್ಪ, ಹಾಲೇಶ್, ಶ್ರೀಕಾಂತ್, ಗೌಸ್ ಪೀರ್, ತನ್ವೀರ್, ಸ್ಥಾಯಿ ಸಮಿತಿ ಅಧ್ಯಕ್ಷ ಇಮ್ರಾನ್, ಮಾಜಿ ಅಧ್ಯಕ್ಷ ಪಿ.ಆರ್.ಮಂಜುನಾಥ್, ಕಾಂಗ್ರೇಸ್ ಪಕ್ಷದ ಮುಖಂಡರಾದ ನೌಷಾದ್, ಭಾಷಾ, ಸೈಯ್ಯಾದ್ ಅಪ್ರೋಜ್, ಪುರಸಭೆಯ ಮುಖ್ಯಾಧಿಕಾರಿ ಕೃಷ್ಣ ಡಿ.ಕಟ್ಟಿಮನಿ, ಹಿರಿಯ ಆರೋಗ್ಯ ನಿರೀಕ್ಷಕ ಶಿವರುದ್ರಪ್ಪ ಸೇರಿದಂತೆ ಫಲಾನುಭವಿಗಳು ಹಾಜರಿದ್ದರು.

- - -

-30ಕೆಸಿಎನ್‌ಜಿ3.ಜೆಪಿಜಿ: ಹರಿಜನ ಕಾಲೋನಿಯ 41 ಕುಟುಂಬಗಳಿಗೆ ಹಕ್ಕುಪತ್ರಗಳ ವಿತರಣೆ ಸಮಾರಂಭವನ್ನು ಶಾಸಕ ಬಸವರಾಜ ವಿ. ಶಿವಗಂಗಾ ಉದ್ಘಾಟಿಸಿದರು.

-30ಕೆಸಿಎನ್‌ಜಿ4.ಜೆಪಿಜಿ: ಶಾಸಕ ಬಸವರಾಜ ವಿ.ಶಿವಗಂಗಾ ಹರಿಜನ ಕಾಲೋನಿಯ 41 ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಿದರು.