ಬೆಂಗಳೂರಲ್ಲಿ ಇಂದು ಪತ್ರಕರ್ತ ಟಿಜೆಎಸ್‌ ಜಾರ್ಜ್‌ ಅಂತ್ಯಕ್ರಿಯೆ

| Published : Oct 05 2025, 01:00 AM IST

ಬೆಂಗಳೂರಲ್ಲಿ ಇಂದು ಪತ್ರಕರ್ತ ಟಿಜೆಎಸ್‌ ಜಾರ್ಜ್‌ ಅಂತ್ಯಕ್ರಿಯೆ
Share this Article
  • FB
  • TW
  • Linkdin
  • Email

ಸಾರಾಂಶ

ಶುಕ್ರವಾರ ನಿಧನರಾದ ಪದ್ಮಭೂಷಣ ಪುರಸ್ಕೃತ ಹಿರಿಯ ಪತ್ರಕರ್ತ ಟಿ.ಜೆ.ಎಸ್. ಜಾರ್ಜ್ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಭಾನುವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಹೆಬ್ಬಾಳದ ಚಿತಾಗಾರದಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

- ಸಕಲ ಸರ್ಕಾರಿ ಗೌರವದೊಂದಿಗೆ ವಿಧಿವಿಧಾನ

- ಹಿರಿಯ ಪತ್ರಕರ್ತಗೆ ಸರ್ಕಾರದಿಂದ ಸಂತಾಪ

---

ಕನ್ನಡಪ್ರಭ ವಾರ್ತೆ ಬೆಂಗಳೂರು

ಶುಕ್ರವಾರ ನಿಧನರಾದ ಪದ್ಮಭೂಷಣ ಪುರಸ್ಕೃತ ಹಿರಿಯ ಪತ್ರಕರ್ತ ಟಿ.ಜೆ.ಎಸ್. ಜಾರ್ಜ್ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಭಾನುವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಹೆಬ್ಬಾಳದ ಚಿತಾಗಾರದಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ಟಿ.ಜೆ.ಎಸ್‌.ಜಾರ್ಜ್‌ ಅವರ ನಿಧನಕ್ಕೆ ರಾಜ್ಯ ಸರ್ಕಾರ ತೀವ್ರ ಸಂತಾಪವನ್ನು ವ್ಯಕ್ತಪಡಿಸಿದ್ದು, ಮೃತರ ಗೌರವಾರ್ಥ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲು ಆದೇಶಿಸಿದೆ. ಈ ಸಂಬಂಧ ಸರ್ಕಾರದ ಅಧೀನ ಕಾರ್ಯದರ್ಶಿ ಬಾಣದರಂಗಯ್ಯ ಎನ್‌.ಆರ್‌. ಶನಿವಾರ ಅಧಿಕೃತ ಆದೇಶ ಹೊರಡಿಸಿದ್ದಾರೆ.

ವಯೋಸಹಜ ಅನಾರೋಗ್ಯದಿಂದಾಗಿ ಹಿರಿಯ ಪತ್ರಕರ್ತ, ಬರಹಗಾರ ಟಿ.ಜೆ.ಎಸ್‌. ಜಾರ್ಜ್‌ ಶುಕ್ರವಾರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 97 ವರ್ಷ ವಯಸ್ಸಾಗಿತ್ತು. ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸೇರಿ ಹಲವು ರಾಜಕೀಯ ಗಣ್ಯರು, ಹಿರಿಯ ಪತ್ರಕರ್ತರು, ಸಾಹಿತಿಗಳು ಸಂತಾಪ ಸೂಚಿಸಿದ್ದಾರೆ. ಮಾಧ್ಯಮ ಕ್ಷೇತ್ರದ ಪ್ರಮುಖರು, ಅವರ ಬರಹಗಳ ಓದುಗರು, ಶಿಷ್ಯವೃಂದ, ಸ್ನೇಹಿತರು, ಸಂಬಂಧಿಕರು ಶನಿವಾರ ಆಸ್ಪತ್ರೆಗೆ ತೆರಳಿ ಮೃತರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿ ಕಂಬನಿ ಮಿಡಿದರು.

3 ಗಂಟೆಗೆ ಅಂತ್ಯಕ್ರಿಯೆ:

ಮೃತರ ಪಾರ್ಥಿವ ಶರೀರವನ್ನು ಭಾನುವಾರ ಮಧ್ಯಾಹ್ನ 1.30ರಿಂದ 2.30ರ ವರೆಗೆ ಹೆಬ್ಬಾಳದ ಚಿತಾಗಾರದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಗುವುದು. ನಂತರ 3 ಗಂಟೆ ವೇಳೆಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಅವರ ಕುಟುಂಬ ಸದಸ್ಯರು ಮಾಹಿತಿ ನೀಡಿದ್ದಾರೆ.