ತಾಲೂಕು ಮಾರ್ಕೆಟಿಂಗ್ ಸೊಸೈಟಿಯ ಆಡಳಿತಾಧಿಕಾರಿ ವಿರುದ್ಧ ಟಿಎಂಎಸ್ ಉಳಿಸಿ ಹೊರಾಟ ಸಮಿತಿಯಿಂದ ಟಿಎಂಎಸ್ ಆವಾರದಲ್ಲಿ ಮಾಜಿ ಅಧ್ಯಕ್ಷ ಎನ್.ಕೆ. ಭಟ್ಟ ಅಗ್ಗಾಶಿಕುಂಬ್ರಿ ನೇತೃತ್ವದಲ್ಲಿ ಧರಣಿ ನಡೆಯಿತು.

ಕನ್ನಡಪ್ರಭ ವಾರ್ತೆ ಯಲ್ಲಾಪುರ

ತಾಲೂಕು ಮಾರ್ಕೆಟಿಂಗ್ ಸೊಸೈಟಿಯ ಆಡಳಿತಾಧಿಕಾರಿ ವಿರುದ್ಧ ಟಿಎಂಎಸ್ ಉಳಿಸಿ ಹೊರಾಟ ಸಮಿತಿಯಿಂದ ಟಿಎಂಎಸ್ ಆವಾರದಲ್ಲಿ ಮಾಜಿ ಅಧ್ಯಕ್ಷ ಎನ್.ಕೆ. ಭಟ್ಟ ಅಗ್ಗಾಶಿಕುಂಬ್ರಿ ನೇತೃತ್ವದಲ್ಲಿ ಧರಣಿ ನಡೆಯಿತು.

ಈ ಸಂದರ್ಭ ಮಾತನಾಡಿದ ಎನ್.ಕೆ. ಭಟ್ಟ, ಸಂಸ್ಥೆಯ ಸಹಸ್ರಾರು ಸದಸ್ಯರ ಅಧಿಕಾರ ಮೊಟಕುಗೊಳಿಸಿ ಹಿಂಬಾಗಿಲಿನಿಂದ ಅಧಿಕಾರ ಪಡೆಯಲು ಪಟ್ಟಭದ್ರ ಹಿತಾಸಕ್ತಿಗಳು ಷಡ್ಯಂತ್ರ ನಡೆಸುತ್ತಿದ್ದಾರೆ. ಸಂಸ್ಥೆಯ ಉಳಿವಿಗಾಗಿ ನಾವು ನ್ಯಾಯಾಲಯದ ಮೊರೆ ಹೋಗುವುದು ಅನಿವಾರ್ಯವಾಯಿತು. ಇನ್ನೇನು ನ್ಯಾಯಾಲಯದ ತೀರ್ಪು ಬರುವ ಹೊತ್ತಿಗೆ ಸಂಸ್ಥೆಗೆ ಮಾರಕವಾಗುವ ನಿರ್ಧಾರವನ್ನು ಆಡಳಿತಾಧಿಕಾರಿ ಕೈಗೊಳ್ಳಲು ಮುಂದಾಗಿರುವುದು ವಿಪರ್ಯಾಸ ಎಂದರು.

ಸಂಸ್ಥೆಯ, ಸದಸ್ಯರ ಹಿತಕ್ಕಾಗಿ ಹೋರಾಟ ನಿರಂತರವಾಗಿ ಮುಂದುವರಿಯಲಿದೆ. ಸ್ಪಂದನೆ ದೊರೆಯದೇ ಹೋದರೆ ರಸ್ತೆ ತಡೆ ನಡೆಸಲಿದ್ದೇವೆ. ಏಕಾಂಗಿಯಾಗಿ ಉಪವಾಸ ಸತ್ಯಾಗ್ರಹ ನಡೆಸುತ್ತೇನೆ. ಉಪವಾಸದಿಂದ ನಾನು ಸತ್ತರೆ ತಾಲೂಕಿನ ರೈತರ ಹಿತಕ್ಕಾಗಿ ಬಲಿಯಾದ ನೆಮ್ಮದಿ ನನಗೆ ದೊರೆಯುತ್ತದೆ ಎಂದರು.

ಬಿಜೆಪಿ ರಾಜ್ಯವಕ್ತಾರ ಹರಿಪ್ರಕಾಶ ಕೋಣೆಮನೆ, ಬಿಜೆಪಿ ಮಂಡಲಾಧ್ಯಕ್ಷ ಪ್ರಸಾದ ಹೆಗಡೆ, ಸಂಕಲ್ಪ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿದರು.

ಸಂಸ್ಥೆಯ ಮಾಜಿ ನಿರ್ದೇಶಕರಾದ ವೆಂಕಟರಮಣ ಬೆಳ್ಳಿ, ಸುಬ್ಬಣ್ಣ ಬೋಳ್ಮನೆ, ಜ್ಯೋತಿಷಿ ಗೋಪಾಲಕೃಷ್ಣ ಭಟ್ಟ ಹಂಡ್ರಮನೆ, ಎಲ್.ಎಸ್.ಎಂ.ಪಿ ಸೊಸೈಟಿ ಅಧ್ಯಕ್ಷ ನಾಗರಾಜ ಕವಡಿಕೆರೆ, ಪ್ರಮುಖರಾದ ಗಣಪತಿ ಮಾನಿಗದ್ದೆ, ಮಹೇಶ ದೇಸಾಯಿ, ಕೆ.ಟಿ.ಹೆಗಡೆ, ಸುಬ್ಬಣ್ಣ ಉದ್ದಾಬೈಲ, ರವಿ ಬಿಡಾರ, ಅಪ್ಪು ಆಚಾರಿ, ಜಿ.ಆರ್ ಭಾಗ್ವತ, ರಾಮಕೃಷ್ಣ ಗಾಂವ್ಕರ, ದತ್ತಾತ್ರೇಯ ಭಟ್ಟ ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.

ಸಹಕಾರಿ ಇಲಾಖೆಯ ಸಹಾಯಕ ನಿಬಂಧಕ ಅಜಿತ್ ಶಿರಹಟ್ಟಿ ಅಹವಾಲು ಸ್ವೀಕರಿಸಲು ಬಂದಾಗ ಅವರಿಗೆ ಮಾತನಾಡಲು ಪ್ರತಿಭಟನಾಕಾರರು ಬಿಡಲಿಲ್ಲ. ಜಿಲ್ಲಾ ಉಪನಿಬಂಧಕರು ಸ್ಥಳಕ್ಕೆ ಬರಬೇಕು. ಇಲ್ಲವಾದರೆ ಅವರ ಪರ ಆಡಳಿತಾಧಿಕಾರಿ ವಜಾ ಹಾಗೂ ಠರಾವು ವಾಪಸ್ ಪಡೆಯುವ ಘೋಷಣೆ ಮಾಡುವುದಾದಲ್ಲಿ ಮಾತ್ರ ಮಾತನಾಡಿ, ಇಲ್ಲವಾದರೆ ಬೇಡ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಸಮಜಾಯಿಷಿ ನೀಡುವ ಪ್ರಯತ್ನವನ್ನು ಅಧಿಕಾರಿ ಮಾಡಿದರೂ ಪ್ರಯೋಜನವಾಗಲಿಲ್ಲ.