ಬೆಳಕು ಸಂಸ್ಥೆಯಿಂದ ವಿಕಲಾಂಗ ಬಡ ವಿದ್ಯಾರ್ಥಿನಿಗೆ ಆರ್ಥಿಕ ನೆರವು

| Published : Sep 26 2024, 11:29 AM IST

ಸಾರಾಂಶ

ಮೂಡುಬೆಳ್ಳೆ ಸಂತ ಲಾರೆನ್ಸ್‌ ಪ್ರೌಢಶಾಲೆಯ 9ನೇ ತರಗತಿಯ ಅಂಗವಿಕಲತೆ ಹೊಂದಿದ ಶಿರ್ವ ಮಟ್ಟಾರಿನ ಬಡ ವಿದ್ಯಾರ್ಥಿನಿ ಪ್ರತಿಜ್ಞಾಳಿಗೆ 90, 601 ರು. ಗಳ ಸಹಾಯ ಧನವನ್ನು ಹಸ್ತಾಂತರಿಸಲಾಯಿತು.

ಕನ್ನಡಪ್ರಭ ವಾರ್ತೆ ಕಾಪು

ಇಲ್ಲಿನ ಮೂಡುಬೆಳ್ಳೆ ಸಮೀಪದ ತಿರ್‍ಲಪಲ್ಕೆಯ ‘ಬೆಳಕು’ ಸಂಸ್ಥೆಯ ಅಧ್ಯಕ್ಷ ಹಾಗೂ ಸಮಾಜಸೇವಕ ನಟೇಶ್ ಸೇರಿಗಾರ್ ಹಾಗೂ ಅವರ ತಂಡದವರು ಸಾರ್ವಜನಿಕ ಗಣೇಶೋತ್ಸವದಂದು ವೇಷ ಹಾಕಿ ಸಂಗ್ರಹಿಸಿದ ಹಣದಲ್ಲಿ, ಮೂಡುಬೆಳ್ಳೆ ಸಂತ ಲಾರೆನ್ಸ್ ಪ್ರೌಢ ಶಾಲೆಯ 9 ನೇ ತರಗತಿಯ ಅಂಗವಿಕಲತೆ ಹೊಂದಿದ ಶಿರ್ವ ಮಟ್ಟಾರಿನ ಬಡ ವಿದ್ಯಾರ್ಥಿನಿ ಪ್ರತಿಜ್ಞಾಳಿಗೆ 90, 601 ರು.ಗಳ ಸಹಾಯ ಧನವನ್ನು ಶಾಲೆಯಲ್ಲಿ ಏರ್ಪಡಿಸಿದ ಸರಳ ಕಾರ್ಯಕ್ರಮದಲ್ಲಿ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಕಳೆದ 8 ವರ್ಷಗಳಿಂದ ವೇಷ ಹಾಕಿ ಸಂಗ್ರಹಿಸಿದ ಹಣದಲ್ಲಿ ಹಲವಾರು ಬಡ ಕುಟುಂಬಗಳಿಗೆ ನೆರವನ್ನು ನೀಡಿ ಅವರ ಬಾಳಿಗೆ ಬೆಳಕಾದ ‘ಬೆಳಕು’ ತಂಡಕ್ಕೆ ಗೌರವವಾಗಿ ನಟೇಶ್ ಶೇರಿಗಾರ್ ಅವರನ್ನು ಸನ್ಮಾನಿಸಲಾಯಿತು.

ಪ್ರೌಢ ಶಾಲಾ ಹಿರಿಯ ಶಿಕ್ಷಕಿ ಸುನೀತಾ ಕಾಮತ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಜೋನ್ ಕಸ್ತಲಿನೊ ನಿರೂಪಿಸಿ ಧನ್ಯವಾದವಿತ್ತರು. ವೇದಿಕೆಯಲ್ಲಿ ಮೂಡುಬೆಳ್ಳೆ ಶಾಲೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಐರಿನ್ ವೇಗಸ್ ಹಾಗೂ ಶಾಲಾ ವಿದ್ಯಾರ್ಥಿ ನಾಯಕ ಅರಾನ್ ಸೊರೋನ್ಹಾ ಮತ್ತು ಬೆಳಕು ಸಂಸ್ಥೆಯ ಸದಸ್ಯರು ಉಪಸ್ಥಿತರಿದ್ದರು.