ದೇಶವನ್ನು ಜನಪರವಾಗಿ ಗಮನಾರ್ಹ ಬದಲಾವಣೆ ಮಾಡಬೇಕಾದರೆ ಮೊದಲು ಶಿಕ್ಷಣದ ವ್ಯವಸ್ಥೆ ಬದಲಾಯಿಸಬೇಕಾಗಿದೆ. ಡಾಕ್ಟರ್, ಎಂಜಿನಿಯರ್ ಸೇರಿದಂತೆ ಇತರೆ ಉನ್ನತ ಹುದ್ದೆಗಳಲ್ಲಿ ಇರುವವರನ್ನು ತಯಾರು ಮಾಡುವವರು ಶಿಕ್ಷಕರು ಎಂದು ಶಾಸಕ ಬಸವರಾಜು ವಿ. ಶಿವಗಂಗಾ ಹೇಳಿದ್ದಾರೆ.

- ಶಾಸಕ ಶಿವಗಂಗಾ ಅಭಿಮತ । ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಜಯಂತಿ, ಶಿಕ್ಷಕರ ದಿನ ಕಾರ್ಯಕ್ರಮ

- - -

ಕನ್ನಡಪ್ರಭ ವಾರ್ತೆ ಚನ್ನಗಿರಿ

ದೇಶವನ್ನು ಜನಪರವಾಗಿ ಗಮನಾರ್ಹ ಬದಲಾವಣೆ ಮಾಡಬೇಕಾದರೆ ಮೊದಲು ಶಿಕ್ಷಣದ ವ್ಯವಸ್ಥೆ ಬದಲಾಯಿಸಬೇಕಾಗಿದೆ. ಡಾಕ್ಟರ್, ಎಂಜಿನಿಯರ್ ಸೇರಿದಂತೆ ಇತರೆ ಉನ್ನತ ಹುದ್ದೆಗಳಲ್ಲಿ ಇರುವವರನ್ನು ತಯಾರು ಮಾಡುವವರು ಶಿಕ್ಷಕರು ಎಂದು ಶಾಸಕ ಬಸವರಾಜು ವಿ. ಶಿವಗಂಗಾ ಹೇಳಿದರು.

ಶನಿವಾರ ಪಟ್ಟಣದ ಜವಳಿ ಸಮುದಾಯ ಭವನದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಕ್ಷೇತ್ರ ಸಮನ್ವಯ ಅಧಿಕಾರಿಗಳ ಕಚೇರಿಗಳ ವತಿಯಿಂದ ಹಮ್ಮಿಕೊಂಡಿದ್ದ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮ ದಿನಾಚರಣೆ ಮತ್ತು ಶಿಕ್ಷಕರ ದಿನ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ₹5 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದ ಗುರುಭವನದ ಕಾಮಗಾರಿ ಕೆಲ ತಾಂತ್ರಿಕ ದೋಷಗಳಿಂದ ನಿಂತಿದ್ದು, ಈ ಕಾಮಗಾರಿಯನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಗುರು ಭವನವನ್ನು ಮಕ್ಕಳ ಸಾಂಸ್ಕೃತಿಕ ಭವನವನ್ನಾಗಿ ಪರಿವರ್ತಿಸಿ ಭವನ ನಿರ್ಮಾಣ ಮಾಡಲಾಗುವುದು ಎಂದರು.

ಎಸ್.ಎಸ್.ಎಲ್.ಸಿ. ಪರೀಕ್ಷೆಯ ಫಲಿತಾಂಶದಲ್ಲಿ ಅತಿ ಹೆಚ್ಚು ಫಲಿತಾಂಶ ಪಡೆದ ಕ್ಷೇತ್ರದ ಮೂರು ಶಾಲೆಗಳಿಗೆ ಈಗಾಗಲೇ ನಗದು ಬಹುಮಾನ ಘೋಷಣೆ ಮಾಡಿದಂತೆ ಪ್ರಥಮ ಸ್ಥಾನ ಪಡೆದ ಶಾಲೆಗೆ ₹55.555, ದ್ವಿತೀಯ ಸ್ಥಾನ ಪಡೆದ ಶಾಲೆಗೆ ₹33.333, ತೃತೀಯ ಸ್ಥಾನ ಪಡೆದ ಶಾಲೆಗೆ ₹11,111 ನಗದು ಬಹುಮಾನವನ್ನು ನೀಡಲಾಗುವುದು ಎಂದರು.

2024-25ನೇ ಸಾಲಿನಲ್ಲಿ ಕ್ಷೇತ್ರದಲ್ಲಿ 57 ಶಾಲಾ ಕೊಠಡಿಗಳನ್ನು ನಿರ್ಮಾಣ ಮಾಡಿದ್ದು, ಪ್ರಸ್ತುತ 2025-26ನೇ ಸಾಲಿನಲ್ಲಿ ₹6 ಕೋಟಿ ವೆಚ್ಚದಲ್ಲಿ 43 ಶಾಲಾ ಕೊಠಡಿಗಳನ್ನು ನಿರ್ಮಾಣ ಮಾಡಲಾಗಿದೆ. ಕ್ಷೇತ್ರದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವ ಉದ್ದೇಶದಿಂದ 7 ಕೆಪಿಎಸ್ ಶಾಲೆಗಳನ್ನು ಮಂಜೂರು ಮಾಡಿಸಲಾಗಿದೆ ಎಂದರು.

79 ಶಾಲೆಗಳಲ್ಲಿ ದ್ವಿಭಾಷಾ ಮಾಧ್ಯಮ ಶಾಲೆಗಳು, 65 ಪೂರ್ವ ಪ್ರಾಥಮಿಕ ಶಾಲೆಗಳನ್ನು ಪ್ರಾರಂಭಿಸಲಾಗಿದ್ದು, ತಾಲೂಕಿನ ಆಯ್ದ ಶಾಲೆಗಳಲ್ಲಿ ಎ.ಐ. ತರಗತಿಗಳನ್ನು ಪ್ರಾರಂಭಿಸಲಾಗಿದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೂ ಉನ್ನತ ಶಿಕ್ಷಣ ದೊರೆಯಲಿ ಎಂಬ ಉದ್ದೇಶದಿಂದ ಇಷ್ಟೊಂದು ಶಿಕ್ಷಣ ಕ್ಷೇತ್ರಕ್ಕೆ ಸೌಲಭ್ಯಗಳನ್ನು ಕೊಡಿಸಿದ್ದು, ಶಿಕ್ಷಕರಾದ ನೀವು ವಿದ್ಯಾರ್ಥಿಗಳಿಗೆ ಸರಿಯಾದ ಮಾರ್ಗದರ್ಶನ ಮಾಡಬೇಕು. ಶಿಕ್ಷಕ ಎಂದರೆ ಶಿಕ್ಷಿಸಿ, ಕ್ಷಮಿಸಿ, ಕರುಣೆಯಿಂದ ಜ್ಞಾನಧಾರೆ ಮಾಡುವವರಾಗಿದ್ದಾರೆ ಎಂದು ಬಣ್ಣಿಸಿದರು.

ಇದೇ ಸಂದರ್ಭದಲ್ಲಿ ವಯೋಸಹಜ ನಿವೃತ್ತಿ ಹೊಂದಿದ 60 ಜನ ಶಿಕ್ಷಕ- ಶಿಕ್ಷಕಿಯರನ್ನು ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಸೇವೆಯಲ್ಲಿದ್ದಾಗಲೇ ಮೃತನಾದ ಶಿಕ್ಷಕ ಎ.ಕೆ.ಮಂಜಪ್ಪ ಅವರ ಧರ್ಮಪತ್ನಿಯನ್ನು ಸನ್ಮಾನಿಸಲಾಯಿತು.

ಸಮಾರಂಭಕ್ಕೂ ಮುನ್ನ ಸರ್ವಪಲ್ಲಿ ರಾಧಾಕೃಷ್ಣನ್ ಭಾವಚಿತ್ರವನ್ನು ಅಲಂಕೃತಗೊಂಡ ಸಾರೋಟಿನಲ್ಲಿಟ್ಟು ವಿವಿಧ ಜನಪದ ಕಲಾವೇಳಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.

ಮುಖ್ಯ ಅತಿಥಿಗಳಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಎಲ್.ಜಯಪ್ಪ, ಪುರಸಭೆಯ ಮುಖ್ಯಾಧಿಕಾರಿ ಜೆ.ವಿ. ಮಂಜುನಾಥ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವಕುಮಾರ್, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಉಮೇಶ್, ವಿವಿಧ ಶಿಕ್ಷಕರ ಸಂಘದ ಪ್ರಮುಖರಾದ ಪಿ.ವಿ.ಸ್ವಾಮಿ, ಜಯಪ್ರಕಾಶ್, ಗಂಗಾಧರ್, ನಾಗರತ್ನ, ನೇತ್ರಾವತಿ, ಲೋಕೇಶಪ್ಪ ಸೇರಿದಂತೆ ಶಿಕ್ಷಕರು ಭಾಗವಹಿಸಿದ್ದರು.

- - -

-5ಕೆಸಿಎನ್ಜಿ1: ಸಮಾರಂಭವನ್ನು ಶಾಸಕ ಬಸವರಾಜು ವಿ.ಶಿವಗಂಗಾ ಉದ್ಘಾಟಿಸಿದರು.