ಮಕ್ಕಳಲ್ಲಿ ಮಾನವೀಯ ಗುಣ ಬೆಳೆಸಿ

| Published : Nov 16 2025, 01:30 AM IST

ಸಾರಾಂಶ

ಮಕ್ಕಳಲ್ಲಿ ಮನುಷ್ಯತ್ವ, ಮಾನವೀಯ ಗುಣಗಳನ್ನು ಬೆಳೆಸುವ ನಿಟ್ಟಿನಲ್ಲಿ ಮಕ್ಕಳನ್ನು ಮಾನವರಾಗಿ ಬೆಳೆಸುವ ಅಗತ್ಯವಿದೆ ಎಂದು ವಿದ್ಯಾವಾಹಿನಿ ಸಮೂಹ ಸಂಸ್ಥೆಗಳ ಕಾರ್ಯದರ್ಶಿ ಎನ್.ಬಿ.ಪ್ರದೀಪಕುಮಾರ್‌ ಅಭಿಪ್ರಾಯಪಟ್ಟಿದ್ದಾರೆ.

ಕನ್ನಡಪ್ರಭ ವಾರ್ತೆ, ತುಮಕೂರುಮಕ್ಕಳಲ್ಲಿ ಮನುಷ್ಯತ್ವ, ಮಾನವೀಯ ಗುಣಗಳನ್ನು ಬೆಳೆಸುವ ನಿಟ್ಟಿನಲ್ಲಿ ಮಕ್ಕಳನ್ನು ಮಾನವರಾಗಿ ಬೆಳೆಸುವ ಅಗತ್ಯವಿದೆ ಎಂದು ವಿದ್ಯಾವಾಹಿನಿ ಸಮೂಹ ಸಂಸ್ಥೆಗಳ ಕಾರ್ಯದರ್ಶಿ ಎನ್.ಬಿ.ಪ್ರದೀಪಕುಮಾರ್‌ ಅಭಿಪ್ರಾಯಪಟ್ಟಿದ್ದಾರೆ.ನಗರದ ಡಾ. ಗುಬ್ಬಿ ವೀರಣ್ಣ ಕಲಾ ಕ್ಷೇತ್ರದಲ್ಲಿ ಬೆಂಗಳೂರಿನ ರಂಗಕಹಳೆ ಸಂಸ್ಥೆ ಭಾರತ ಸರಕಾರದ ಸಂಸ್ಕೃತಿ ಸಚಿವಾಲಯದ ಸಹಯೋಗದಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ನೃತ್ಯ, ಜಾನಪದ, ಯಕ್ಷಗಾನ, ಕಿರುಚಿತ್ರ, ಡಾಕ್ಯುಮೆಂಟರಿ, ನಾಟಕಗಳನ್ನು ಒಳಗೊಂಡ ಮಕ್ಕಳ ರಂಗಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು. ವಿಜ್ಞಾನ ತಂತ್ರಜ್ಞಾನದಿಂದ ಮಕ್ಕಳು ಶೈಕ್ಷಣಿಕವಾಗಿ ಬಹಳ ಮುಂದಿದ್ದಾರೆ. ಆದರೆ ಭಾವನಾತ್ಮಕವಾಗಿ ಸಾಕಷ್ಟು ಹಿಂದೆ ಉಳಿದಿದ್ದಾರೆ. ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಾಗಬೇಕೆಂದರೆ ಇಂತಹ ಸಾಂಸ್ಕೃತಿಕ ವೇದಿಕೆಗಳು ಸಹಕಾರಿಯಾಗಲಿವೆ ಎಂದರು.ಸಂಗೀತ,ಸಾಹಿತ್ಯ, ಕಲೆ, ನಾಟಕಗಳು ಮಕ್ಕಳಲ್ಲಿ ಸೃಜನಾತ್ಮಕ ಪ್ರಕ್ರಿಯೆಗಳನ್ನು ಉಂಟು ಮಾಡುತ್ತವೆ. ಈ ಹಿನ್ನೆಲೆಯಲ್ಲಿಯೇ ನಮ್ಮಕಾಲೇಜಿನ ಮಕ್ಕಳ ಅಭಿವ್ಯಕ್ತಿಗೆ ವೇದಿಕೆಯಾಗಲಿ ಎಂಬ ಕಾರಣ, ಒಂದು ಆಡಿಟೋರಿಯಂ ನಿರ್ಮಿಸಿದ್ದೇನೆ. ಶೀಘ್ರದಲ್ಲಿಯೇ ಅದರ ಉದ್ಘಾಟನೆ ಸಹ ನೆರವೇರಲಿದೆ ಎಂದ ಅವರು, ಜ್ಞಾನವನ್ನು ಪಡೆದುಕೊಳ್ಳಲು ಅನೇಕ ಮಾರ್ಗಗಳಿವೆ. ಆದರೆ ಸಂವೇದನಾ ಶೀಲ ಮನಸ್ಸುಗಳ ಸೃಷ್ಟಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳೇ ಸರಿಯಾದ ದಾರಿ ಎಂದರು.ಕಸಾಪ ನಿಕಟಪೂರ್ವ ಅಧ್ಯಕ್ಷೆ ಬಾ.ಹ.ರಮಾಕುಮಾರಿ ಮಾತನಾಡಿ, ಇಂದಿನ ಯುವಜನತೆ ರೀಲ್ಸ್ಗಳಿಗೆ ಮಾರು ಹೋಗುತ್ತಿರುವ ಸಂದರ್ಭದಲ್ಲಿ ರಂಗಕಹಳೆ ತಂಡ ಮಕ್ಕಳಲ್ಲಿ ಸೃಜನಾತ್ಮಕ ಕಲೆಗಳನ್ನು ರೂಢಿಸಲು ಶ್ರಮಿಸುತ್ತಿರುವುದು ಸಂತೋಷದ ವಿಚಾರವಾಗಿದೆ. ಮಕ್ಕಳನ್ನು ಮಾರ್ಕ್ಸ್ ಗಳಿಸುವ ಮಿಷನ್‌ಗಳೆಂದು ಭಾವಿಸಿರುವ ಪೋಷಕರು,ಕೊನೆಗಾಲದಲ್ಲಿ ವೃದ್ಧಾ ಶ್ರಮದಲ್ಲಿ ಕೊರಗುವ ಬದಲು,ಇಂತಹ ಕಲೆ,ಸಾಹಿತ್ಯದ ಮೂಲಕ ಮಕ್ಕಳಲ್ಲಿ ಮಾನವೀಯ ಗುಣಗಳನ್ನು ಬೆಳೆಸಬೇಕೆಂದರು. ಪತ್ರಕರ್ತ ಹಾಗೂ ಝೆನ್‌ಟೀಮ್‌ನ ಉಗಮ ಶ್ರೀನಿವಾಸ್ ಮಾತನಾಡಿ, ತುಮಕೂರು ನಗರದಲ್ಲಿ ರಂಗಾಸಕ್ತರಿಗೆ ಕೊರತೆಯಿಲ್ಲ. ಆದರೆ ಸುಸಜ್ಜಿತ ರಂಗಮಂದಿರದ ಕೊರತೆಯಿದೆ. ಡಾ.ಗುಬ್ಬಿ ವೀರಣ್ಣಕಲಾಕ್ಷೇತ್ರ, ಬಾಲಭವನ ಸೇರಿದಂತೆ ಹಲವು ಅಡಿಟೋರಿಯಂಗಳು ಶಿಥಿಲಾವಸ್ಥೆಯಲ್ಲಿವೆ. ಅಲ್ಲದೆ ಅನೇಕ ತಾಂತ್ರಿಕ ತೊಂದರೆಗಳಿಂದ ಕೂಡಿವೆ .ಜಿಲ್ಲಾಡಳಿತ ಮತ್ತು ನಗರಪಾಲಿಕೆ ಪ್ರತಿ ವಾರ್ಡಿಗೊಂದು ರಂಗ ಮಂದಿರ ನಿರ್ಮಿಸುವ ಮೂಲಕ ಆ ಭಾಗದ ಪ್ರತಿಭೆಗಳಿಗೆ ವೇದಿಕೆ ಒದಗಿಸಬೇಕೆಂದರು.ಪ್ರಾಸ್ತಾವಿಕ ನುಡಿಗಳನ್ನಾಡಿದ ರಂಗಕಹಳೆ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಮಕ್ಕಳ ಸಂಸ್ಥೆಯ ಓಹಿಲೇಶ್ ಲಕ್ಷ್ಮಣ,ತೋಟಗಾರಿಕಾ ಟೀಚರ್‌ ಆಗಿದ್ದ ನಮ್ಮತಂದೆ ರಂಗದ ಮುಖೇನ ಶಿಕ್ಷಣ ಎಂಬ ಪರಿಕಲ್ಪನೆಯಡಿರಂಗ ಕಹಳೆ ಸಂಸ್ಥೆಯನ್ನುಕಟ್ಟಿ ಅದನ್ನು ಮುನ್ನೆಡೆಸುತ್ತಾ ಬಂದಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಏಕ ಪೋಷಕ ಮಕ್ಕಳು, ನಿಗರ್ತಿಕ, ಬಡವರು, ಟೆಂಟ್‌ನಲ್ಲಿ ವಾಸ ಮಾಡುವ ಮಕ್ಕಳನ್ನು ಗುರುತಿಸಿ, ಅವರಿಗೆ ಉಚಿತವಾಗಿ ರಂಗ ಶಿಕ್ಷಣ ನೀಡಿ, ನಾಟಕಗಳನ್ನು ಪ್ರದರ್ಶಿಸುವ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಪ್ರಯತ್ನ ಮಾಡಲಾಗಿದೆ.ಕುವೆಂಪುಅವರ ಕೃತಿಗಳನ್ನು ರಂಗ ಅಳವಡಿಸುವುದರ ಜೊತೆಗೆ,ಕರಾವಳಿ ಮತ್ತು ಉತ್ತರ ಕರ್ನಾಟಕ ಕಲೆಗಳಿಗೆ ವೇದಿಕೆ ಕಲ್ಪಿಸಿ, ಕಲೆಗಳ ಸಾಂಸ್ಕೃತಿಕ ವಿನಿಮಯಕ್ಕೆ ನಿರಂತರ ಪ್ರಯತ್ನಿಸಲಾಗುತ್ತಿದೆ. ಕಲೆಯ ಮೂಲಕ ಮಕ್ಕಳಿಗೆ ಸಂಸ್ಕಾರ ನೀಡುವ ಕೆಲಸವನ್ನು ರಂಗಕಹಳೆ ನಿರಂತರವಾಗಿ ಮಾಡುತ್ತಾ ಬಂದಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಲಾಶ್ರೀ ಡಾ.ಲಕ್ಷ್ಮಣದಾಸ್ ಮಾತನಾಡಿ, ರಂಗಕಹಳೆಯ ಲಕ್ಷ್ಮಣ್ ,ಶ್ರೀರಂಗ ರಂಗದ ಎಚ್.ಎಂ.ರಂಗಯ್ಯ ಹಾಗೂ ನಾನು ಒಟ್ಟಿಗೆ ನಾಟಕ ಅಕಾಡೆಮಿಯ ಸದಸ್ಯರಾಗಿ ಕೆಲಸ ಮಾಡಿದ್ದೇವೆ. ಮಕ್ಕಳಲ್ಲಿ ವೈವಿದ್ಯತೆಯನ್ನು ರೂಢಿಸಿಕೊಳ್ಳಲು ಕಲೆಗಳು ಸಹಕಾರಿಯಾಗಿವೆ ಎಂದರು. ಭಾರತ ಸರಕಾರದ ಸಂಸ್ಕೃತಿ ಸಚಿವಾಲಯದ ಸಹಕಾಯದಲ್ಲಿ ನಡೆಯುತ್ತಿರುವ ಮಕ್ಕಳ ರಂಗಉತ್ಸವದಲ್ಲಿ ಮಕ್ಕಳಿಂದ ಭರತನಾಟ್ಯ, ಯಕ್ಷಗಾನ, ಸಾಕ್ಷಚಿತ್ರ, ಕಿರುಚಿತ್ರ, ಕುವೆಂಪು ಅವರಕಿಂದರಜೋಗಿ,ಜಗಜ್ಯೋತಿ ಬಸವಣ್ಣನವರ ಬಾಲ್ಯ ಕುರಿತಕಾರಣಿಕ ಶಿಶು ನಾಟಕಗಳ ಪ್ರದರ್ಶನವನ್ನುರಂಗ ಕಹಳೆ ತಂಡದ ಮಕ್ಕಳು ನಡೆಸಿಕೊಟ್ಟರು.ಪೌರಾಣಿಕ ನಾಟಕಗಳ ಹೊರತು ಪಡಿಸಿ, ಸದಾ ಬಿಕೋ ಎನ್ನುತ್ತಿದ್ದ ಡಾ.ಗುಬ್ಬಿ ವೀರಣ್ಣ ಕಲಾ ಕ್ಷೇತ್ರ ಇಂದು ಬಣ್ಣ ಬಣ್ಣದ ಕಲಾಕೃತಿಗಳು, ಮುಖವಾಡ, ಕಲಾಕೃತಿಗಳ ಮೂಲಕ ಹೊಸ ಕಳೆಯೊಂದಿಗೆ ಮುದ ನೀಡಿತ್ತು.ಪ್ರೇಕ್ಷಕರ ಸಾಲಿನಲ್ಲಿ ಮಕ್ಕಳು ಹೆಚ್ಚಾಗಿ ಕಂಡು ಬಂದಿದ್ದು ವಿಶೇಷವೆನಿಸಿತ್ತು.