ವಿಜಯನಗರ ಕಾಲುವೆಗಳಿಗೆ ನೀರು ಹರಿಸಲು ಒತ್ತಾಯಿಸಿ ನಾಳೆ ಹೊಸಪೇಟೆ ಬಂದ್ ಕರೆ

| Published : Nov 28 2023, 12:30 AM IST

ವಿಜಯನಗರ ಕಾಲುವೆಗಳಿಗೆ ನೀರು ಹರಿಸಲು ಒತ್ತಾಯಿಸಿ ನಾಳೆ ಹೊಸಪೇಟೆ ಬಂದ್ ಕರೆ
Share this Article
  • FB
  • TW
  • Linkdin
  • Email

ಸಾರಾಂಶ

ಹಳ್ಳಿಗಳಿಂದ ನಗರಕ್ಕೆ ವಾಹನಗಳು ಪ್ರವೇಶಿಸದಂತೆ ಅಲ್ಲಲ್ಲಿ ರೈತರು ಪ್ರತಿಭಟನೆ ನಡೆಸಲಿದ್ದಾರೆ. ಶಾಲಾ-ಕಾಲೇಜುಗಳು, ಸರ್ಕಾರಿ, ಖಾಸಗಿ ಕಚೇರಿಗಳು ಬಂದ್ ಆಗಲಿವೆ. ವರ್ತಕರು ಕೂಡ ಅಂಗಡಿ- ಮುಂಗಟ್ಟುಗಳನ್ನು ಬಂದ್ ಮಾಡುವ ವಿಶ್ವಾಸ ಇದೆ ಎಂದರು.

ಕನ್ನಡಪ್ರಭ ವಾರ್ತೆ ಹೊಸಪೇಟೆ

ವಿಜಯನಗರ ಕಾಲದ ಕಾಲುವೆಗಳಿಗೆ ತುಂಗಭದ್ರಾ ಜಲಾಶಯದಿಂದ ಜನವರಿ 16ರಿಂದ ಮೇ 31ರ ವರೆಗೆ ನಿರಂತರ ನೀರು ಹರಿಸಬೇಕು ಎಂದು ಒತ್ತಾಯಿಸಿ ಹೊಸಪೇಟೆ ರೈತರ ಸಂಘ ನ. 29ರಂದು ಹೊಸಪೇಟೆ ಬಂದ್ ಕರೆ ನೀಡಿದೆ.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಹಿರಿಯ ನಿರ್ದೇಶಕ ಗೋಸಲ ಭರಮಪ್ಪ, ಈಗಾಗಲೇ ನ. 23ರಿಂದ ಮೂರು ದಿನಗಳವರೆಗೆ ಹೊಸಪೇಟೆ ತಹಸೀಲ್ದಾರ್‌ ಕಚೇರಿ ಎದುರು ಪ್ರತಿಭಟನಾ ಧರಣಿ ನಡೆಸಿದ್ದೇವೆ. ಆದರೆ, ಸರ್ಕಾರ ಈ ಬಗ್ಗೆ ಸ್ಪಂದಿಸಿಲ್ಲ. ನೀರಾವರಿ ಸಲಹಾ ಸಮಿತಿ(ಐಸಿಸಿ) ಸಭೆ ನಡೆಸಿ ತುರ್ತು ನಿರ್ಣಯ ಕೈಗೊಳ್ಳಬೇಕಿದೆ. ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ ಅನಿವಾರ್ಯವಾಗಿ ನ. 29ರಂದು ಹೊಸಪೇಟೆ ಬಂದ್ ಕರೆ ಕೊಟ್ಟಿದ್ದೇವೆ.

ನ. 26ರಂದು ನಡೆದ ರೈತ ಸಂಘದ ಮಹಾಜನ ಸಭೆಯಲ್ಲಿ ತೆಗೆದುಕೊಂಡ ನಿರ್ಣಯದಂತೆ ಬಂದ್ ಕರೆ ನೀಡಲಾಗಿದೆ. ಈ ಭಾಗದ 33 ಹಳ್ಳಿಗಳಿಗೆ ಕುಡಿಯುವ ನೀರು, ಜನ, ಜಾನುವಾರುಗಳಿಗೆ ನೀರು ಒದಗಿಸಲು, ರೈತರ ಬೆಳೆಗಳ ಸಂರಕ್ಷಣೆಗಾಗಿ ವಿಜಯನಗರ ಕಾಲದ ಕಾಲುವೆಗಳಾದ ರಾಯ, ಬಸವ, ಬೆಲ್ಲ, ತುರ್ತಾ, ಕಾಳಗಟ್ಟ ಕಾಲುವೆಗಳಿಗೆ ನೀರು ಹರಿಸಬೇಕು. ಇದರಿಂದ ರೈತರ ಬೆಳೆಗಳು ಉಳಿಯಲಿವೆ. ಇಲ್ಲದಿದ್ದರೆ, ಬೆಳೆಗಳು ಒಣಗಲಿದ್ದು, ರೈತರು ಬೀದಿಗೆ ಬೀಳಲಿದ್ದಾರೆ. ಸರ್ಕಾರ ರೈತರ ಸಮಸ್ಯೆಗೆ ಸ್ಪಂದಿಸಿ ನೀರು ಒದಗಿಸಬೇಕು ಎಂದು ಒತ್ತಾಯಿಸಿದರು.

ರೈತರ ಸಮಸ್ಯೆ ಬಗ್ಗೆ ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್‌, ತುಂಗಭದ್ರಾ ಮಂಡಳಿ ಅಧಿಕಾರಿಗಳ ಗಮನಕ್ಕೂ ತರಲಾಗಿದೆ. ಆದರೂ ಸ್ಪಂದನೆ ದೊರೆತಿಲ್ಲ. ಕರ್ನಾಟಕದ ಕೋಟಾದಡಿ ನೀರು ಹರಿಸಬೇಕಾಗಿದೆ. ಹಾಗಾಗಿ ಕೂಡಲೇ ನಮಗೆ ನೀರು ಬಿಡಬೇಕು ಎಂದು ಒತ್ತಾಯಿಸಿದರು.

ತುಂಗಭದ್ರಾ ಮಂಡಳಿ ನಿರ್ಮಾಣ ಮಾಡುವ ಮೋದಲೇ ಈ ಕಾಲುವೆಗಳಿದ್ದವು. ವಿಜಯನಗರದ ಅರಸರು ನಿರ್ಮಾಣ ಮಾಡಿರುವ ಕಾಲುವೆಗಳಾಗಿವೆ. ನಮ್ಮ ಪೂರ್ವಜರು ಮೊದಲಿನಿಂದಲೂ ನೀರಾವರಿ ಮಾಡುತ್ತಿದ್ದರು. ಈ ಕಾಲುವೆಗಳಿಗೆ ವರ್ಷದ 11 ತಿಂಗಳು ನಿರಂತರ ನೀರು ಹರಿಸಬೇಕು ಎಂದು ಈಗಾಗಲೇ ಬಚಾವತ್‌ ಆಯೋಗದ ತೀರ್ಪಿನಲ್ಲೂ ಸೂಚಿಸಲಾಗಿದೆ. ಆದರೂ ಸಮರ್ಪಕವಾಗಿ ನೀರು ಹರಿಸಲಾಗುತ್ತಿಲ್ಲ. ನೀರು ಹರಿಸದಿದ್ದರೆ 12 ಸಾವಿರ ಎಕರೆ ಕಬ್ಬು, 4000 ಎಕರೆ ಬಾಳೆ, 2000 ಎಕರೆ ಭತ್ತ ಸೇರಿದಂತೆ ವಿವಿಧ ಬೆಳೆಗಳು ಹಾಳಾಗಲಿವೆ. ರೈತರ ಸಮಸ್ಯೆಗೆ ಸರ್ಕಾರ ಸ್ಪಂದಿಸಬೇಕು ಎಂದು ಆಗ್ರಹಿಸಿದರು.

ನ. 29ರಂದು ರೈತ ಭವನದಿಂದ ರೈತರ ಬೃಹತ್‌ ಮೆರವಣಿಗೆ ಹೊರಡಲಿದೆ. ನಗರದ ರಾಮಾ ಟಾಕೀಸ್‌, ವಾಲ್ಮೀಕಿ ವೃತ್ತ, ಮೇನ್‌ ಬಜಾರ್, ಬಸ್‌ ನಿಲ್ದಾಣದ ಮೂಲಕ ಸಾಗಿ ಪುನೀತ್‌ ರಾಜ್‌ಕುಮಾರ ವೃತ್ತದಲ್ಲಿ ಬೃಹತ್‌ ಪ್ರತಿಭಟನೆ ನಡೆಯಲಿದೆ. ಹಳ್ಳಿಗಳಿಂದ ನಗರಕ್ಕೆ ವಾಹನಗಳು ಪ್ರವೇಶಿಸದಂತೆ ಅಲ್ಲಲ್ಲಿ ರೈತರು ಪ್ರತಿಭಟನೆ ನಡೆಸಲಿದ್ದಾರೆ. ಶಾಲಾ-ಕಾಲೇಜುಗಳು, ಸರ್ಕಾರಿ, ಖಾಸಗಿ ಕಚೇರಿಗಳು ಬಂದ್ ಆಗಲಿವೆ. ವರ್ತಕರು ಕೂಡ ಅಂಗಡಿ- ಮುಂಗಟ್ಟುಗಳನ್ನು ಬಂದ್ ಮಾಡುವ ವಿಶ್ವಾಸ ಇದೆ ಎಂದರು.

ಮುಖಂಡರಾದ ಉತ್ತಂಗಿ ಕೊಟ್ರೇಶ್‌, ಆರ್. ಕೊಟ್ರೇಶ್‌, ಜಂಬಾನಹಳ್ಳಿ ವಸಂತ್‌, ಕಿಚಿಡಿ ಶ್ರೀನಿವಾಸ್‌, ಬಿ. ನಾಗರಾಜ, ಗಾದಿಲಿಂಗಪ್ಪ, ಸತ್ಯನಾರಾಯಣ ಮತ್ತಿತರರಿದ್ದರು.