ಸುಭಾಷ್ ಚಂದ್ರ ಬೋಸ್ ಆದರ್ಶ ಪಾಲಿಸಲು ಸಿಎಂ ಸಿದ್ದರಾಮಯ್ಯ ಕರೆ

| Published : Jan 24 2024, 02:01 AM IST

ಸುಭಾಷ್ ಚಂದ್ರ ಬೋಸ್ ಆದರ್ಶ ಪಾಲಿಸಲು ಸಿಎಂ ಸಿದ್ದರಾಮಯ್ಯ ಕರೆ
Share this Article
  • FB
  • TW
  • Linkdin
  • Email

ಸಾರಾಂಶ

ಅಪ್ರತಿಮ ಸ್ವಾತಂತ್ರ್ಯ ಪ್ರೇಮಿ, ದೇಶಪ್ರೇಮಿಯಾಗಿದ್ದ ಸುಭಾಷ್ ಚಂದ್ರ ಬೋಸ್ ಅವರ ತತ್ವಾದರ್ಶಗಳು ನಮಗೆ ದಾರಿದೀಪವಾಗಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಅಪ್ರತಿಮ ದೇಶಭಕ್ತ, ಸ್ವಾತಂತ್ರ್ಯ ಹೋರಾಟಗಾರ ಸುಭಾಷ್‌ಚಂದ್ರ ಬೋಸ್‌ ಅವರ ತತ್ವಾದರ್ಶ ಪಾಲನೆ ಮಾಡುವುದೇ ಅವರಿಗೆ ನಿಜವಾಗಿ ಸಲ್ಲಿಸುವ ಗೌರವವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಮಂಗಳವಾರ ಸುಭಾಸಚಂದ್ರ ಬೋಸ್‌ ಅವರ 127ನೇ ಜಯಂತಿ ಅಂಗವಾಗಿ ವಿಧಾನಸೌಧ ಆವರಣದಲ್ಲಿರುವ ಬೋಸ್‌ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಮಾತನಾಡಿದ ಅವರು, ಬೋಸ್‌ ಅವರು ಕಾಂಗ್ರೆಸ್‌ ಅಧ್ಯಕ್ಷರಾಗಿ ಸ್ವಾತಂತ್ರ್ಯ ಚಳವಳಿಯಲ್ಲಿ ಸಂಪೂರ್ಣವಾಗಿ ಭಾಗಿಯಾಗಿದ್ದರು. ಸ್ವಾತಂತ್ರ್ಯ ಹೋರಾಟದ ಹಾದಿಯ ಕುರಿತು ಮಹಾತ್ಮಾಗಾಂಧಿ ಅವರ ಜೊತೆ ಭಿನ್ನಾಭಿಪ್ರಾಯವಿತ್ತು. ಗಾಂಧೀಜಿ ಅವರು, ಶಾಂತಿ, ಅಹಿಂಸೆ ಮೂಲಕ ಸ್ವಾತಂತ್ರ್ಯ ಪಡೆಯಬೇಕು ಎಂಬುದಾಗಿತ್ತು. ಆದರೆ ಇದಕ್ಕೆ ತದ್ವಿರುದ್ಧ ಅಭಿಪ್ರಾಯ ಹೊಂದಿದ್ದರು. ಈ ವಿಷಯ ಹೊರತು ಪಡಿಸಿ ಗಾಂಧೀಜಿ ಬಗ್ಗೆ ಅಪಾರ ಗೌರವ ಹೊಂದಿದ್ದರು ಎಂದರು.

ಭಾರತೀಯ ರಾಷ್ಟ್ರೀಯ ಸೇನೆಯನ್ನು ಸ್ಥಾಪಿಸಿ ಅದರ ಮುಖ್ಯಸ್ಥರಾಗಿದ್ದರು. ಜಪಾನ್ ದೇಶದಲ್ಲಿ ಅವರು ವಿಮಾನ ದುರಂತದಲ್ಲಿ ಅವರು ಸಾವಿಗೀಡಾದರು. ಅಪ್ರತಿಮ ಸ್ವಾತಂತ್ರ್ಯ ಪ್ರೇಮಿ, ದೇಶಪ್ರೇಮಿಯಾಗಿದ್ದ ಸುಭಾಷ್ ಚಂದ್ರ ಬೋಸ್ ಅವರು ನಮಗೆಲ್ಲ ಆದರ್ಶ. ಅವರ ಆದರ್ಶಗಳನ್ನು ನಾವೆಲ್ಲರೂ ಅನುಸರಿಸುವುದೇ ಅವರಿಗೆ ಸಲ್ಲಿಸುವ ಗೌರವ. ಅವರ ತತ್ವಾದರ್ಶಗಳು ನಮಗೆ ದಾರಿದೀಪವಾಗಲಿ ಎಂದು ಹೇಳಿದರು.

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಮುಂತಾದವರು ಉಪಸ್ಥಿತರಿದ್ದರು.