ಕುಷ್ಟಗಿ: ಪ್ರೋತ್ಸಾಹದ ಕೊರತೆಯಿಂದ ಮಕ್ಕಳಲ್ಲಿನ ಆಸಕ್ತಿ ಕಮರುತ್ತಿದ್ದು, ಪಾಲಕರು ಮಕ್ಕಳಲ್ಲಿರುವ ಪ್ರತಿಭೆ ಗುರುತಿಸುವ ಮೂಲಕ ಪ್ರೋತ್ಸಾಹಿಸಿ ಮಕ್ಕಳನ್ನು ದೊಡ್ಡ ಶಕ್ತಿಯನ್ನಾಗಿ ಮಾಡಬೇಕು ಎಂದು ಬಳ್ಳಾರಿ ವಿಭಾಗದ ಹಿರಿಯ ಕಾನೂನೂ ಅಧಿಕಾರಿ ಬಿ.ಎಸ್.ಪಾಟೀಲ್ ಹೇಳಿದರು.

ತಾಲೂಕಿನ ಚಳಗೇರಾ ಗ್ರಾಮದಲ್ಲಿ ಶ್ರೀರುದ್ರಮುನಿ ಶಿವಾಚಾರ್ಯ ಹಿರಿಯ ಪ್ರಾಥಮಿಕ, ಪ್ರೌಢ ಶಾಲಾ ವಾರ್ಷಿಕೋತ್ಸವ, ಸ್ನೇಹ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ಪಾಲಕರು ಮಕ್ಕಳ ಬಗ್ಗೆ ನಕಾರಾತ್ಮಕ ಯೋಚಿಸದೆ ಸಕಾರಾತ್ಮಕವಾಗಿ ಚಿಂತನೆ ಕೈಗೊಂಡು ಮಕ್ಕಳಲ್ಲಿ ಹೊಸತನದ ಕಲ್ಪನೆ, ಹೊಸತನದ ಭಾವನೆ ಬೆಳೆಸಬೇಕು ಎಂದರು.

ಮಕ್ಕಳ ಕಾರ್ಯಚಟುವಟಿಕೆ ಕುರಿತು ಪಾಲಕರು ಗಮನಿಸುವ ಮೂಲಕ ಉತ್ತಮ ಚಾರಿತ್ರ್ಯ ರೂಪಿಸಬೇಕು. ಶೈಕ್ಷಣಿಕವಾಗಿ ಅಭಿವೃದ್ಧಿಯಾಗಲು ಅನೇಕ ಅವಕಾಶಗಳಿದ್ದು ಮಕ್ಕಳಿಗೆ ಸ್ಪರ್ಧಾತ್ಮಕ ಮನೋಭಾವನೆ ಬೆಳೆಸಬೇಕು ಎಂದ ಅವರು, ಮಕ್ಕಳನ್ನು ಸರಿದಾರಿಗೆ ಕೊಂಡೊಯ್ಯುವಲ್ಲಿ ಶಿಕ್ಷಕರು, ಪಾಲಕರ ಪಾತ್ರ ಪ್ರಮುಖವಾಗಿದ್ದು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಬೇಕು ಆಸಕ್ತಿಗೆ ತಕ್ಕಂತೆ ಪ್ರೋತ್ಸಾಹ ನೀಡಬೇಕು ಎಂದರು.

ವೀರಸಂಗಮೇಶ್ವರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಮಾತನಾಡಿ, ಹಿರಿಯ ಶ್ರೀಗಳ ಆಶೀರ್ವಾದದಿಂದ ಸುಮಾರು 24 ವರ್ಷಗಳಿಂದ ಶಿಕ್ಷಣ ಸಂಸ್ಥೆಯ ಶಿಕ್ಷಣ ಕ್ಷೇತ್ರದಲ್ಲಿ ಸಾಧಿಸುತ್ತ ಬಂದಿದ್ದು, ನೂರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ಕೊಡುವ ಕೆಲಸ ಮಾಡುತ್ತಿದ್ದು ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಓದಿ ಮುಂದೆ ಬರಬೇಕು ವಿದ್ಯೆಯು ಮನುಷ್ಯನನ್ನು ಬೆಳೆಸುತ್ತದೆ. ಎತ್ತರಕ್ಕೆ ಬೆಳೆದ ವ್ಯಕ್ತಿ ಸಮಾಜದ ಪ್ರಗತಿ, ದೇಶದ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.


ಈ ಸಂದರ್ಭದಲ್ಲಿ ಗಣ್ಯರಾದ ಬಸವರಾಜ ಮೇಳಿ, ಮಹಾಂತೇಶ ನಾಗೂರು, ಬಸಪ್ಪ ಅಂಗಡಿ, ಶೇಖರಪ್ಪ, ಮಲ್ಲಪ್ಪ ಕುದರಿ, ಜಯಶ್ರೀ ಬೆಳ್ಳಿ, ಈರಮ್ಮ ನಿಡಸನೂರು, ಫಕೀರಪ್ಪ ದೇವರಮನಿ, ಜ್ಯೋತಿ ಹಿರೇಮಠ, ಮಲ್ಲಯ್ಯ, ಪರಶುರಾಮ, ಚನ್ನಯ್ಯ ಹಿರೇಮಠ ಸೇರಿದಂತೆ ಅನೇಕರು ಇದ್ದರು. ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.