ಸಾರಾಂಶ
ಕನ್ನಡಪ್ರಭ ವಾರ್ತೆ ಬೀದರ್
ದೇವರಿಲ್ಲ ಅಂತ ವಾದ ಮಾಡೋಲ್ಲ, ದೇವರು ಇದ್ದಾನೆ ಒಂದೇ ಕಡೆ ಇಲ್ಲ. ದೇವರು ಸರ್ವ ವ್ಯಾಪಿ ಆದರೆ ತೀರ್ಥ ಯಾತ್ರೆ, ದೇವರ ದರ್ಶನದಿಂದ ಪರಿಹಾರ ಸಿಗುತ್ತೆ ಎಂದು ತಿಳಿದರೆ ಅದು ಮೂರ್ಖತನ. ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಳ್ಳುವುದೇ ದೇವರಿಗೆ ಸಲ್ಲಿಸುವ ನಿಜವಾದ ಭಕ್ತಿ. ಮನುಷ್ಯನನ್ನು ಪ್ರೀತಿಸುವದೇ ದೇವರಿಗೆ ಸಲ್ಲಿಸುವ ಸೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.ಬಸವಕಲ್ಯಾಣದಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಜಾತಿ, ವರ್ಗ ಹೋಗಬೇಕು, ಕಂದಾಚಾರ, ಮೌಢ್ಯಗಳು ಹೋಗಿ ವೈಚಾರಿಕತೆ ಬೆಳೆಯಬೇಕು. ಆದರೆ ಅನೇಕ ವಿದ್ಯಾವಂತರು ಕಂದಾಚಾರ, ಗೊಡ್ಡು ಸಂಪ್ರದಾಯಗಳಿಗೆ ಜೋತು ಬೀಳುತ್ತಿರುವುದನ್ನು ಕಾಣುತ್ತಿದ್ದೇವೆ. ಸ್ವರ್ಗ ನರಕ ಎಲ್ಲೂ ಇಲ್ಲ. ನಿಮ್ಮ ನಡುವಳಿಕೆಯಲ್ಲಿದೆ. ಅದಕ್ಕಾಗಿ ಇನ್ನೊಬ್ಬರನ್ನು ಗೌರವ, ಪ್ರೀತಿಯಿಂದ ಕಾಣಬೇಕು. ಇದನ್ನು ಬಸವಾದಿ ಶರಣರು ತಮ್ಮ ವಚನಗಳಲ್ಲಿ ಹೇಳಿದ್ದಾರೆ ಎಂದು ತಿಳಿಸಿದರು.
ಅಷ್ಟಕ್ಕೂ 12ನೇ ಶತಮಾನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ಸಮಾಜದಲ್ಲಿ ಬದಲಾವಣೆ ತರಲು ಜಾತಿ ರಹಿತ, ಮೂಢನಂಬಿಕೆ ರಹಿತ ಸಮಾಜ ನಿರ್ಮಿಸಲು ನಡೆದ ಪರಿವರ್ತನೆ ನಮಗೆಲ್ಲ ಮಾದರಿಯಾಗಿದೆ. ಬುದ್ಧ ಬಸವ ಗಾಂಧೀಜಿ ಅಂಬೇಡ್ಕರ್ ಅವರೆ ಪ್ರೇರಣೆ, ಅವರ ವಿಚಾರಗಳು ಇಂದಿಗೂ ಪ್ರಸ್ತುತ, ಮುಂದೆಯೂ ಪ್ರಸ್ತುತ ಎಂಬುವದನ್ನು ಅರಿತುಕೊಳ್ಳಬೇಕಿದೆ ಎಂದು ಹೇಳಿದರು.ಮಾತೃಭಾಷೆಯಲ್ಲಿ ಧರ್ಮ ಬೋಧನೆ ಸೂಕ್ತ: ನಾನು ಸಂಸ್ಕೃತ ಓದಿಲ್ಲ. ನಂಜೇಗೌಡ ಎಂಬ ಮೇಷ್ಟ್ರು ಅಮರ ಕೋಶ ಎಂಬ ಸಂಸ್ಕೃತ ಪಾಠ ಹೇಳಿಕೊಡುತ್ತಿದ್ದರು. ಅದನ್ನು ಬಾಯಿ ಪಾಠ ಮಾಡುತ್ತಿದ್ದೆ ಹೊರತು, ಅರ್ಥೈಸಿಕೊಳ್ಳಲು ಆಗಲಿಲ್ಲ. ಹೀಗಾಗಿ ಯಾವುದೇ ಧರ್ಮ ಬೋಧನೆ ಮಾತೃ ಭಾಷೆಯಲ್ಲಿ ಆದಲ್ಲಿ ಮಾತ್ರ ಅದು ನಮ್ಮನ್ನು ಆವರಿಸುತ್ತದೆ. ಅದಕ್ಕಾಗಿಯೇ ಬಸವಾದಿ ಶರಣರು ವಚನಗಳನ್ನು ಕನ್ನಡದಲ್ಲಿ ರಚಿಸಿ ಎಲ್ಲರಿಗೂ ಅರಿತುಕೊಳ್ಳುವಂತೆ ಮಾಡಿದರು ಎಂದು ಸಿದ್ದರಾಮಯ್ಯ ಕನ್ನಡದ ಪ್ರಾಮುಖ್ಯತೆ ವಿವರಿಸಿದರು.
ಬಸವಾದಿ ಶರಣರು ಕಂಡಿದ್ದ ಸಮ ಸಮಾಜದ ಕನಸು ನನಸಾಗಿಲ್ಲ. ಇನ್ನೂ ಸಮಾಜದಲ್ಲಿನ ಜನರಿಗೆ ಆರ್ಥಿಕ, ಸಾಮಾಜಿಕ ಸಮಾನತೆ, ಭ್ರಾತೃತ್ವದ ಸಮಾಜವನ್ನು ಕಾಣುವಲ್ಲಿ ಸಾಧ್ಯವಾಗಿಲ್ಲ. ರಾಜಕೀಯ ಸ್ವಾತಂತ್ರ್ಯ ಸಿಕ್ಕಲ್ಲಿ ಮಾತ್ರ ಅಭಿವೃದ್ಧಿ ಅಸಾಧ್ಯ. ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಸ್ವಾತಂತ್ರ್ಯ ಸಿಕ್ಕಲ್ಲಿ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.