ಅಭಿವೃದ್ಧಿ ಯೋಜನೆ ಹೆಸರಲ್ಲಿ ಜನರಿಗೆ ಮೋಸ

| Published : Mar 08 2024, 01:46 AM IST

ಸಾರಾಂಶ

ನೆಲಮಂಗಲ: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಕ್ಷೇತ್ರದ ಶಾಸಕರು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಿಸಿ ಅಮಾಯಕ ಜನರನ್ನು ಯಾಮಾರಿಸುತ್ತಿದ್ದು ಲೋಕಸಭಾ ಚುನಾವಣೆಯಲ್ಲಿ ಜನರೇ ತಕ್ಕಪಾಠ ಕಲಿಸಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ರಾಮಕೃಷ್ಣ ಹೇಳಿದರು.

ನೆಲಮಂಗಲ: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಕ್ಷೇತ್ರದ ಶಾಸಕರು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಿಸಿ ಅಮಾಯಕ ಜನರನ್ನು ಯಾಮಾರಿಸುತ್ತಿದ್ದು ಲೋಕಸಭಾ ಚುನಾವಣೆಯಲ್ಲಿ ಜನರೇ ತಕ್ಕಪಾಠ ಕಲಿಸಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ರಾಮಕೃಷ್ಣ ಹೇಳಿದರು.

ನಗರದ ಅರಿಶಿನಕುಂಟೆಯಲ್ಲಿ ತಾಲ್ಲೂಕು ಬಿಜೆಪಿ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಸರ್ಕಾರದ ಐದು ಗ್ಯಾರಂಟಿಗಳು ಸಮಾಜದ ಮೇಲೆ ಪರೋಕ್ಷವಾಗಿ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದರೂ ಸರ್ಕಾರಕ್ಕೆ ಅರ್ಥ ಆಗುತ್ತಿಲ್ಲ. ಎಸ್ಸಿ/ಎಸ್ಟಿ ಜನಾಂಗಕ್ಕೆ ಕಾಯ್ದಿರಿಸಿದ್ದ ಸಹಸ್ರಾರು ಕೋಟಿ ಹಣವನ್ನು ಗ್ಯಾರಂಟಿಗಳಿಗೆ ಬಳಸಲಾಗುತ್ತಿದೆ. ಶಾಸಕರಿಗೆ ಅನುದಾನ ನೀಡಲಾಗುತ್ತಿಲ್ಲ. ಅಭಿವೃದ್ಧಿ ಕೆಲಸಗಳನ್ನು ಬದಿಗೊತ್ತಿ ಗ್ಯಾರಂಟಿಗಳನ್ನು ಮುಂದಿಟ್ಟುಕೊಂಡು ರಾಜ್ಯ ಸರ್ಕಾರ ಜನರಿಗೆ ಮೋಸ ಮಾಡುತ್ತಿದೆ ಎಂದರು.

ಬಿಜೆಪಿ ತಾಲೂಕು ಅಧ್ಯಕ್ಷ ಜಗದೀಶ್ ಚೌದರಿ ಮಾತನಾಡಿ, ಸಣ್ಣ ಚರಂಡಿ ಕೆಲಸ ಮಾಡಲಿಕ್ಕೆ ತಿಂಗಳು ಬೇಕಾಗುತ್ತದೆ. ಸರ್ಕಾರ ಅಧಿಕಾರಕ್ಕೆ ಬಂದು ವರ್ಷ ಪೂರೈಸಿಲ್ಲ. ಮುಖ್ಯಮಂತ್ರಿಗಳು, ಸಚಿವರ ದಂಡು ಕರೆದುಕೊಂಡು ಬಂದು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮಾಡಿಸಿರುವ ಶಾಸಕರು ಕಾಮಗಾರಿ ಪೂರ್ಣಗೊಳಿಸಿದಂತೆ ಬೀಗುತ್ತಿದ್ದಾರೆ. ಗ್ರಾಮಾಂತರ, ನಗರ, ತುಮಕೂರು ಜಿಲ್ಲೆಯ ಹಲವು ಕೆರೆಗಳಿಗೆ ವೃಷಭಾವತಿ ನೀರು ತುಂಬಿಸುವ ಯೋಜನೆ, ಬೆಸ್ಕಾಂ ಉಪಕೇಂದ್ರ ಸ್ಥಾಪನೆ, 100 ಹಾಸಿಗೆ ಆಸ್ಪತ್ರೆ ನಿರ್ಮಾಣದಂತ ಯೋಜನೆಗಳನ್ನು ಕಳೆದ ಸರ್ಕಾರದ ಅವಧಿಯಲ್ಲೆ ರೂಪಿಸಲಾಗಿತ್ತು. ಸತ್ಯವನ್ನು ಜನ ಅರ್ಥ ಮಾಡಿಕೊಳ್ಳಬೇಕು ಎಂದರು.

ವೃಷಭಾವತಿ ನದಿ ನೀರಿನಲ್ಲಿ ರಾಸಾಯನಿಕ ಪ್ರಮಾಣ ಅಧಿಕವಾಗಿದ್ದು ಕೃಷಿಗೂ ಯೋಗ್ಯವಲ್ಲ ಎಂಬ ಸತ್ಯವರದಿಯನ್ನು 20 ವರ್ಷಗಳ ಹಿಂದಯೇ ಸಂಸ್ಥೆಯೊಂದು ನೀಡಿದ್ದು ಮರೆಮಾಚಲಾಗಿದೆ. ಮಾಧ್ಯಮಗಳು ಈ ಬಗ್ಗೆ ಅಸಲಿ ಸತ್ಯ ಹೊರಗೆ ತರಬೇಕಿದೆ. ಎತ್ತಿನಹೊಳೆ ಯೋಜನೆಯಡಿ ಮಗದ ಕೆರೆಯೊಂದನ್ನು ಮಾತ್ರ ತುಂಬಿಸುತ್ತಿದ್ದು ಅದರ ಪಕ್ಕದಲ್ಲೆ ಇರುವ ಮಣ್ಣೆ, ನಿಡವಂದ, ಬಿದಲೂರು ಕೆರೆಗಳಿಗೂ ನೀರು ತುಂಬಿಸಲಿ, ರೈತರಿಗೂ ಅನುಕೂಲವಾಗಲಿದೆ. ಅದನ್ನು ಬಿಟ್ಟು ಚುನಾವಣೆ ಬಂದ ಕೂಡಲೇ ಸುಳ್ಳು ಹೇಳಬೇಡಿ ಎಂದರು.

ಇದೇ ವೇಳೆ ನೂತನ ತಾಲೂಕು ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಜಗದೀಶ್ ಚೌದರಿ ಅವರನ್ನು ಪಕ್ಷದ ಕಾರ್ಯಕರ್ತರು ಮುಖಂಡರು ಅಭಿನಂದಿಸಿದರು.

ಮಾಜಿ ಶಾಸಕ ಎಂ.ವಿ.ನಾಗರಾಜು, ಮುಖಂಡ ಸಪ್ತಗಿರಿ ಶಂಕರ್‌ನಾಯಕ್, ನೆ.ಯೋ.ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್.ಮಲ್ಲಯ್ಯ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಹೊಂಬಯ್ಯ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಸೌಮ್ಯ, ಮಾಜಿ ಅಧ್ಯಕ್ಷೆ ರಾಜಮ್ಮ, ಯುವಮೋರ್ಚಾ ಜಿಲ್ಲಾ ಉಪಾಧ್ಯಕ್ಷ ರಾಹುಲ್ ಗೌಡ, ಕಾರ್ಯದರ್ಶಿ ಮಂಜುನಾಥ್, ವಕೀಲ ರವಿ, ನಗರ ಅಧ್ಯಕ್ಷ ರವಿ, ವಕ್ತಾರ ಎನ್.ಸತೀಶ್, ಶಿವರಾಜು, ಗೊಲ್ಲಹಳ್ಳಿ ಗ್ರಾಪಂ ಅಧ್ಯಕ್ಷ ಎಚ್.ಡಿ.ಹರ್ಷ, ಮುಖಂಡರಾದ ರಾಯರಪಾಳ್ಯ ಮಹೇಶ್, ಪುನೀತ್‌ರಾಜ್, ಎಂಟಿಆರ್ ಮಂಜುನಾಥ್, ಅನಿತಾ, ವೇದಾವತಿ, ಮಂಜುಳಾ, ಶೀಲಾ, ಲತಾ, ಮಂಜಮ್ಮ, ಶೋಭಾ, ಸುಜಾತ, ಸುಮಾ, ಶೈಲಜಾ ಇತರರಿದ್ದರು.ಪೊಟೊ6ಕೆಎನ್‌ಎಲ್‌ಎಮ್‌1: ನೆಲಮಂಗಲ ತಾಲೂಕು ಬಿಜೆಪಿ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಜಿಲ್ಲಾಧ್ಯಕ್ಷ ರಾಮಕೃಷ್ಣಪ್ಪನವರು ನೂತನ ತಾಲೂಕು ಅಧ್ಯಕ್ಷ ಜಗದೀಶ್‌ ಚೌಧರಿ ಅವರಿಗೆ ಆದೇಶ ಪತ್ರ ನೀಡಿ ಅಭಿನಂದಿಸಿದರು.