ಯಲ್ಲಮ್ಮನ ಗುಡ್ಡ ಅಭಿವೃದ್ಧಿಗೆ ಶೀಘ್ರ ಕಾಮಗಾರಿ ಆರಂಭ

| Published : Mar 08 2024, 01:46 AM IST

ಯಲ್ಲಮ್ಮನ ಗುಡ್ಡ ಅಭಿವೃದ್ಧಿಗೆ ಶೀಘ್ರ ಕಾಮಗಾರಿ ಆರಂಭ
Share this Article
  • FB
  • TW
  • Linkdin
  • Email

ಸಾರಾಂಶ

ಯಲ್ಲಮ್ಮನಗುಡ್ಡದ ಅಭಿವೃದ್ಧಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಸಾದ ಯೋಜನೆಯಡಿ ₹11 ಕೋಟಿ ಅನುದಾನ ನೀಡಿದ್ದಾರೆ. ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಶೀಘ್ರ ಕಾಮಗಾರಿ ಆರಂಭವಾಗಲಿವೆ ಎಂದು ಸಂಸದೆ ಮಂಗಲಾ ಅಂಗಡಿ ಹೇಳಿದರು.

ಕನ್ನಡಪ್ರಭ ವಾರ್ತೆ ಸವದತ್ತಿ

ಯಲ್ಲಮ್ಮನಗುಡ್ಡದ ಅಭಿವೃದ್ಧಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಸಾದ ಯೋಜನೆಯಡಿ ₹11 ಕೋಟಿ ಅನುದಾನ ನೀಡಿದ್ದಾರೆ. ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಶೀಘ್ರ ಕಾಮಗಾರಿ ಆರಂಭವಾಗಲಿವೆ ಎಂದು ಸಂಸದೆ ಮಂಗಲಾ ಅಂಗಡಿ ಹೇಳಿದರು.

ಸವದತ್ತಿಯ ಯಲ್ಲಮ್ಮನಗುಡ್ಡದಲ್ಲಿ ಕೇಂದ್ರದ ಪ್ರವಾಸೋದ್ಯಮ ಸಚಿವಾಲಯ ಹಾಗೂ ಜಿಲ್ಲಾಡಳಿತ ಮತ್ತು ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಯಲ್ಲಮ್ಮನಗುಡ್ಡದ ಅಭಿವೃದ್ಧಿಗಾಗಿ ಕೇಂದ್ರ ಪುರಸ್ಕೃತ ಪ್ರಸಾದ ಯೋಜನೆಯಡಿ ಮಂಜೂರಾದ ಕಾಮಗಾರಿಗಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವರ್ಚುವಲ್ ಮುಖಾಂತರ ಶಂಕುಸ್ಥಾಪನೆಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಈ ಅನುದಾನದಲ್ಲಿ ಗುಡ್ಡದಲ್ಲಿ ಸಾಮೂಹಿಕ ಶೌಚಗೃಹ, ಸ್ನಾನಗೃಹ, ಪ್ರಥಮ ಚಿಕಿತ್ಸಾ ಕೇಂದ್ರ, ಜಾನುವಾರುಗಳಿಗೆ ಪ್ರಥಮ ಚಿಕಿತ್ಸಾ ಕೇಂದ್ರ, ಭಕ್ತರಿಗೆ ಮಾಹಿತಿ ಕೇಂದ್ರ ಮತ್ತಿತರ ಕಾಮಗಾರಿ ಕೈಗೊಳ್ಳಲಾಗುವುದು ಎಂದ ಅವರು, ಪ್ರಸಾದ ಯೋಜನೆಯಡಿ ದೇಶದೆಲ್ಲೆಡೆ ಇರುವ ಪುರಾತನ ದೇವಾಲಯಗಳಿಗೆ ₹6,400 ಕೋಟಿ ಅನುದಾನ ನೀಡಲಾಗಿದೆ ಎಂದರು.

ಶಾಸಕ ವಿಶ್ವಾಸ ವೈದ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಯಲ್ಲಮ್ಮನಗುಡ್ಡದ ಸಮಗ್ರ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಯಲ್ಲಮ್ಮನಗುಡ್ಡ ಅಭಿವೃದ್ಧಿ ಪ್ರಾಧಿಕಾರ ರಚಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ ಗುಡ್ಡದ ಅಭಿವೃದ್ಧಿಗೆ ಆಸಕ್ತರಿದ್ದು, ಸಾಕಷ್ಟು ಅನುದಾನ ಕೊಡುತ್ತಿದ್ದಾರೆ. ಈಗ ಕೇಂದ್ರದ ಅನುದಾನವೂ ಬಂದಿದ್ದರಿಂದ ಅನುಕೂಲವಾಗಿದೆ. ಯಲ್ಲಮ್ಮನಗುಡ್ಡದ ಸಮಗ್ರ ಅಭಿವೃದ್ಧಿಗೆ ನಾವು ಬದ್ಧರಿದ್ದೇವೆ ಎಂದರು.

ಯಲ್ಲಮ್ಮ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಸಯ್ಯ ಹಿರೇಮಠ, ಪ್ರವಾಸೋದ್ಯಮ ಇಲಾಖೆ ಉಪ-ನಿರ್ದೇಶಕ ಶುಭಂ ಶುಕ್ಲಾ, ಎ ಗೋಪಾಲ, ವಿರೂಪಾಕ್ಷಿ ಮಾಮನಿ, ರತ್ನಾ ಮಾಮನಿ, ಅಶ್ವಿನಿ ಚಡಚಣ, ವೈ.ವೈ.ಕಾಳಪ್ಪನವರ, ಕೋಳ್ಳಪ್ಪಗೌಡ ಗಂದಿಗವಾಡ, ಮಲ್ಲು ಜಕಾತಿ, ಪ್ರವೀಣ ರಾಮಪ್ಪನವರ, ಲಕ್ಷ್ಮೀ ಹೂಲಿ, ನಯನಾ ಬಸ್ಮಿ, ತಹಸೀಲ್ದಾರ್‌ ಮಧುಸೂಧನ ಕುಲಕರ್ಣಿ, ದೇವಸ್ಥಾನ ಅಭಿಯಂತರ ಎ ವ್ಹಿ ಮೂಳ್ಳೂರ, ಜಿಲ್ಲಾಡಳಿತದ ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ದೇವಸ್ಥಾನದ ಸಿಬ್ಬಂದಿ ಉಪಸ್ಥಿತರಿದ್ದರು. ದೇವಸ್ಥಾನದ ಕಾರ್ಯನಿರ್ವಣಾಧಿಕಾರಿ ಎಸ್‌ಪಿಬಿ ಮಹೇಶ ಸ್ವಾಗತಿಸಿದರು. ಶಿವಾನಂದ ತಾರಿಹಾಳ ನಿರೂಪಿಸಿ, ವಂದಿಸಿದರು.