ಸಾರಾಂಶ
ಕಾಮಿಕ ಸಚಿವ ಸಂತೋಷ ಲಾಡ್
ಕನ್ನಡಪ್ರಭ ವಾರ್ತೆ ಹಿರೇಕೆರೂರುರಾಜ್ಯದಲ್ಲಿ ೧.೮ ಕೋಟಿ ಅಸಂಘಟಿತ ಕಾರ್ಮಿಕರಿದ್ದು, ಎಲ್ಲ ಅಸಂಘಟಿತ ಕಾರ್ಮಿಕರಿಗೆ ಮೂಲಭೂತ ಸೌಲಭ್ಯ ನೀಡುವ ಮೂಲಕ ಅವರಿಗೆ ಸಾಮಾಜಿಕ ಭದ್ರತೆ ಒದಗಿಸಲಾಗುವುದು ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದರು.
ಶಾಸಕ ಯು.ಬಿ. ಬಣಕಾರ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರವೇ ನೇರವಾಗಿ ಎಲ್ಲ ಜಿಲ್ಲೆಗಳಿಗೂ ಭೇಟಿ ನೀಡಿ ಅಲ್ಲಿರುವ ನಗರ ವಾಸಿಗಳು ಹಾಗೂ ನೌಕರರ ಸಂಘಟನೆಯ ಜತೆಗೆ ಚರ್ಚಿಸಿ ಸಮಸ್ಯೆಗಳನ್ನು ಇತ್ಯರ್ಥಪಡಿಸಿ ಯೋಜನೆಗಳನ್ನು ರೂಪಿಸುವಂತೆ ಮುಖ್ಯಮಂತ್ರಿ ನಿರ್ದೇಶಿಸಿದ್ದಾರೆ. ಈ ಹಿನ್ನೆಲೆ ಜಿಲ್ಲೆಯಲ್ಲಿ ಇಲಾಖೆ ಪ್ರಗತಿ ಪರಿಶೀಲನೆಯ ಸಭೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.ಕಾರ್ಮಿಕ ಇಲಾಖೆಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಒಟ್ಟು ೪೫ ಲಕ್ಷ ಕಾರ್ಮಿಕರು ಕಾರ್ಮಿಕ ಕಾರ್ಡ್‌ಗಳನ್ನು ಹೊಂದಿದ್ದಾರೆ. ಕಳೆದ ವರ್ಷದಲ್ಲಿ ೩೯ ಲಕ್ಷ ಹೊಸ ಕಾರ್ಡ್‌ಗಳನ್ನು ವಿತರಿಸಲಾಗಿದೆ. ಜಿಲ್ಲೆಯಲ್ಲಿ ಈ ವರೆಗೂ ಒಟ್ಟು ೨.೯೩ ಲಕ್ಷ ಕಾರ್ಮಿಕರು ಕಾರ್ಮಿಕ ಕಾರ್ಡ್‌ಗಳನ್ನು ಹೊಂದಿದ್ದಾರೆ. ಹಾಗೆಯೇ ರಾಜ್ಯದಲ್ಲಿ ಶೇ. ೬೦ರಿಂದ ಶೇ. ೭೦ರಷ್ಟು ಕಾರ್ಡ್‌ಗಳು ಬೋಗಸ್ ಆಗಿವೆ. ಅಂತಹ ಬೋಗಸ್ ಕಾರ್ಡ್‌ಗಳನ್ನು ತಡೆಯಲು ಈಗಾಗಲೇ ಹೊಸ ಆ್ಯಪ್ ಬಿಡುಗಡೆ ಮಾಡುತ್ತಿದ್ದೇವೆ. ಅದರಲ್ಲಿ ನೈಜ ಕಾರ್ಮಿಕರ ಯಾರು ಎಂಬುದನ್ನು ಕಂಡುಹಿಡಿಯಲು ಸಹಾಯಕಾರಿಯಾಗಲಿದೆ ಎಂದರು.
ಬೋಗಸ್ ಕಾರ್ಡ್‌ಗಳನ್ನು ತಡೆಗಟ್ಟಲು ಕಾರ್ಮಿಕ ಸಂಘಟನೆಯ ಪಾತ್ರ ಮಹತ್ವದ್ದಾಗಿದೆ. ಎಲ್ಲರ ಸಲಹೆ, ಸೂಚನೆ ಹಾಗೂ ಸಹಾಯದಿಂದ ಆದಷ್ಟು ಬೋಗಸ್ ಕಾರ್ಡ್‌ಗಳನ್ನು ತಡೆಹಿಡಿಯಲು ಸಾಧ್ಯವಾಗುತ್ತದೆ. ಕಾರ್ಮಿಕರು ಕಾರ್ಯನಿರ್ವಹಿಸುವ ಸ್ಥಳಕ್ಕೆ ಖುದ್ದು ಸಂಬಂಧಪಟ್ಟ ಅಧಿಕಾರಿಯು ಭೇಟಿ ನೀಡಿ ಪರಿಶೀಲನೆಗೆ ಒಳಪಡಿಸಿ ನೈಜ ಕಾರ್ಮಿಕರನ್ನು ಗುರುತಿಸಿ ಹೊಸ ಕಾರ್ಡ್ ವಿತರಿಸಲಾಗುವುದು ಎಂದರು.ಹಾಗೆಯೇ ಬೇರೆ ಬೇರೆ ಸೌಲಭ್ಯಗಳ ಅಡಿಯಲ್ಲಿ ಹೊಸ ೧೩ ಲಕ್ಷ ಅರ್ಜಿಗಳು ಬಂದಿದ್ದು, ಅದರಲ್ಲಿ ೬ ಲಕ್ಷ ಅರ್ಜಿಗಳು ವಿವಿಧ ಸೇವೆಗಳ ಸೌಲಭ್ಯ ಪಡೆಯಲು ಬಂದ ಅರ್ಜಿಗಳಾಗಿದ್ದರೆ, ೭ ಲಕ್ಷ ಅರ್ಜಿಗಳು ವಿದ್ಯಾರ್ಥಿ ವೇತನದ ಅರ್ಜಿಗಳಾಗಿರುತ್ತವೆ. ಈ ಎಲ್ಲ ಅರ್ಜಿಗಳನ್ನು ಕೂಲಂಕಷವಾಗಿ ಪರಿಶೀಲನೆ ಮಾಡಿ ಸೌಲಭ್ಯ ಒದಗಿಸಿಕೊಡಲಾಗುವುದು ಎಂದರು.
ಸರ್ಕಾರ ಜಾರಿಗೆ ತಂದಿರುವ ೫ ಮಹತ್ತರ ಗ್ಯಾರಂಟಿ ಯೋಜನೆಯಿಂದ ಇಲಾಖೆಯ ಆರ್ಥಿಕತೆಗೆ ಯಾವುದೇ ಸಮಸ್ಯೆಯಾಗಿಲ್ಲ. ಸರ್ಕಾರವು ಸಾರಿಗೆ ಮಂಡಳಿ ಜತೆಗೆ ಒಪ್ಪಂದ ಮಾಡಿಕೊಳ್ಳುತ್ತಿದ್ದು, ಇದರಿಂದ ಸಾರಿಗೆ ಅನುದಾನ ಮತ್ತು ಸರ್ಕಾರದ ಅನುದಾನ ಸೇರಿ ರಾಜ್ಯದಲ್ಲಿರುವ ವಾಣಿಜ್ಯ ಪರವಾನಗಿ ಹೊಂದಿರುವ ಎಲ್ಲ ಖಾಸಗಿ ವಾಹನ ಚಾಲಕರು, ನಿರ್ವಾಹಕರು ಗ್ಯಾರೇಜ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಒಟ್ಟು ೩೫ ಲಕ್ಷ ಕಾರ್ಮಿಕರಿಗೆ ಕಾರ್ಮಿಕ ಕಾರ್ಡ್ ನೀಡಿ ಅವರಿಗೆ ಸಾಮಾಜಿಕ ಭದ್ರತೆ ಒದಗಿಸಲಾಗುವುದು ಎಂದರು.ವಿಧಾನಸಭಾ ಉಪಾಧ್ಯಕ್ಷ ರುದ್ರಪ್ಪ ಲಮಾಣಿ, ಹಿರೇಕೆರೂರು ಶಾಸಕ ಯು.ಬಿ. ಬಣಕಾರ ಉಪಸ್ಥಿತರಿದ್ದರು.