ಹುಬ್ಬಳ್ಳಿ: ಭಾರತವನ್ನು ಇಬ್ಭಾಗ ಮಾಡಲು ಕೆಲವು ಕ್ಷುದ್ರ ಶಕ್ತಿಗಳು ಕೈಜೋಡಿಸಿ ಕೆಲಸ ಮಾಡುತ್ತಿವೆ. ಹಿಂದೂಗಳೆಲ್ಲ ಒಗ್ಗಟ್ಟಾಗಿದ್ದರೆ ಇಂತಹ ಕ್ಷುದ್ರ ಶಕ್ತಿಗಳನ್ನು ತಡೆಯಲು ಸಾಧ್ಯವಾಗಲಿದೆ. ಈ ಕುರಿತು ಭಾರತೀಯರೆಲ್ಲರೂ ಜಾಗೃತರಾಗಬೇಕಿದೆ ಎಂದು ಆರ್‌ಎಸ್‌ಎಸ್‌ನ ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖ ಮಂಗೇಶ ಭೇಂಡೆ ಹೇಳಿದರು.
ಇಲ್ಲಿನ ನವನಗರದ ಹಳೇ ಕೆಎಚ್‌ಬಿ ಕಾಲನಿ ಹತ್ತಿರದ ಬಜರಂಗಿ ಮೈದಾನದಲ್ಲಿ ಭಾನುವಾರ ಸಂಜೆ ನವನಗರ, ಗಾಮನಗಟ್ಟಿ, ಅಮರಗೋಳ, ಸುತಗಟ್ಟಿ, ರಾಯಾಪುರ ಹಿಂದೂ ಸಮ್ಮೇಳನ ಸಮಿತಿಯಿಂದ ಏರ್ಪಡಿಸಿದ್ದ ಬೃಹತ್ ಹಿಂದೂ ಸಮಾವೇಶದಲ್ಲಿ ಮುಖ್ಯ ವಕ್ತಾರರಾಗಿ ಮಾತನಾಡಿದರು.ಭಾರತ ಪುಣ್ಯ ಭೂಮಿ. ಸಾಕ್ಷಾತ್ ಭಗವಂತನೇ ಜನ್ಮ ತಾಳಿದ ದೇವಭೂಮಿ. ಇಲ್ಲಿ ಮತ್ತೊಮ್ಮೆ ಜನಿಸಬೇಕೆಂದು ಬಹಳಷ್ಟು ಜನರ ಬಯಕೆ. ಇಡೀ ವಿಶ್ವವೇ ಸುಖವಾಗಿರಬೇಕು ಎಂದು ಬಯಸುವ ಜನರು ಹಿಂದೂಗಳು. ಸುಸಂಸ್ಕೃತ, ಜ್ಞಾನವನ್ನು ಜಗತ್ತಿಗೆ ಕೊಟ್ಟವರು ನಾವು. ಇಂಥ ರಾಷ್ಟ್ರ ಉಳಿಸಲು ಹಿಂದೂಗಳೆಲ್ಲ ಜಾತಿ-ಭೇದ ಮರೆತು ಒಂದಾಗಬೇಕಿದೆ ಎಂದರು.
ಭಾರತದಲ್ಲಿ ಮುಸ್ಲಿಮರು, ಬ್ರಿಟಿಷರು ಸೇರಿದಂತೆ ಬಹಳಷ್ಟು ಜನರು ಆಳ್ವಿಕೆ ಮಾಡಿದರು. ಆದರೆ, ದೇಶವನ್ನು ಗೆಲ್ಲಲು ಸಾಧ್ಯವಿಲ್ಲವೆಂದರಿತು ನಮ್ಮ ಮಧ್ಯೆ ಇರುವ ಕುತಂತ್ರಿಗಳ ಸಹಾಯ ಪಡೆದು ಸುದೀರ್ಘ ಆಳ್ವಿಕೆ ಮಾಡಿದರು. ಹಾಗಾಗಿ ನಾವೆಲ್ಲ ಹಿಂದೂಗಳು ಒಂದಾಗಿದ್ದರೆ, ಯಾವ ಶಕ್ತಿಗಳೂ ನಮ್ಮನ್ನು ಸದೆ ಬಡೆಯಲು ಸಾಧ್ಯವಿಲ್ಲ ಎಂದರು.ಸಾನ್ನಿಧ್ಯ ವಹಿಸಿದ್ದ ಗದಗನ ಶಿವಾನಂದ ಬೃಹನ್ಮಠದ ಸದಾಶಿವಾನಂದ ಶ್ರೀಗಳು ಮಾತನಾಡಿ, ಜೀವನ ಸಂಸ್ಕೃತಿ ಕಲಿಸಿದವರು ನಮ್ಮ ಹಿರಿಯರು. ನಾವು ಇವುಗಳನ್ನು ಈಗ ಮರೆಯುತ್ತಿದ್ದೇವೆ. ಊಟ ಮಾಡುವುದು, ನೀರು ಕುಡಿಯುವುದರ ಬಗ್ಗೆ ಅರಿವು, ಆಚಾರಗಳು ಮರೆಯಾಗುತ್ತಿವೆ. ವಿಶ್ವದ ವಿವಿಧ ದೇಶಗಳಲ್ಲಿ ಮತಗಳು, ಪಂಥಗಳು, ಸಂಪ್ರದಾಯಗಳು ಜನಿಸಿವೆ. ಧರ್ಮ ಭಾರತದಲ್ಲಿ ಜನಿಸಿದೆ. ನಮ್ಮದು ಧರ್ಮ ಭೂಮಿ. ಇದಕ್ಕೆ ಸಂಸ್ಥಾಪಕರು ಇಲ್ಲ. ಹಿಂದೂ ಧರ್ಮದಲ್ಲಿ ಶ್ರೇಷ್ಠ ಜೀವನ ವಿಧಾನ ರೂಪಿಸಿ ಕೊಟ್ಟಿದ್ದಾರೆ. ಧರ್ಮ ಅಮೂಲ್ಯವಾದದು ಎಂದರು.
ನಿವೃತ್ತ ಪ್ರಾಧ್ಯಾಪಕ ಡಾ. ಸಿ.ಎಂ. ಮಠ ಅಧ್ಯಕ್ಷತೆ ವಹಿಸಿದ್ದರು. ಸಂಚಾಲಕ ಸ್ವಾಮಿ ಮಹಾಜನಶೆಟ್ಟರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಧಾನಸಭೆ ಪ್ರತಿಪಕ್ಷದ ಉಪ ನಾಯಕ ಅರವಿಂದ ಬೆಲ್ಲದ, ಪ್ರಮುಖರಾದ ಸುಭಾಷಸಿಂಗ್ ಜಮಾದಾರ, ಜಯತೀರ್ಥ ಕಟ್ಟಿ, ನರೇಂದ್ರ ಕುಲಕರ್ಣಿ, ಬಸವರಾಜ ಕುಂದಗೋಳಮಠ ಸೇರಿದಂತೆ ಹಲವರಿದ್ದರು.