ಸಾರಾಂಶ
ನರಸಿಂಹರಾಜಪುರಉತ್ತಮ ಪೋಟೋ ತೆಗೆಯಲು ಛಾಯಾಗ್ರಾಹಕರು ಉತ್ತಮ ಗುಣಮಟ್ಟದ ಕ್ಯಾಮೆರ ಬಳಸಬೇಕು ಎಂದು ಜಿಲ್ಲಾ ಛಾಯಾ ಚಿತ್ರ ಗ್ರಾಹಕರ ಸಂಘದ ಉಪಾಧ್ಯಕ್ಷ ಎಚ್.ಆರ್. ದುರ್ಗೇಶ್ ಸಲಹೆ ನೀಡಿದರು.
ತಾಲೂಕು ಛಾಯಾ ಚಿತ್ರ ಗ್ರಾಹಕರ ಸಂಘದ ನೂತನ ಪದಾಧಿಕಾರಿಗಳ ಪದವಿ ಸ್ವೀಕಾರ ಸಮಾರಂಭ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಉತ್ತಮ ಪೋಟೋ ತೆಗೆಯಲು ಛಾಯಾಗ್ರಾಹಕರು ಉತ್ತಮ ಗುಣಮಟ್ಟದ ಕ್ಯಾಮೆರ ಬಳಸಬೇಕು ಎಂದು ಜಿಲ್ಲಾ ಛಾಯಾ ಚಿತ್ರ ಗ್ರಾಹಕರ ಸಂಘದ ಉಪಾಧ್ಯಕ್ಷ ಎಚ್.ಆರ್. ದುರ್ಗೇಶ್ ಸಲಹೆ ನೀಡಿದರು.
ಮಂಗಳವಾರ ಪ್ರವಾಸಿ ಮಂದಿರದಲ್ಲಿ ತಾಲೂಕು ಛಾಯಾಚಿತ್ರ ಗ್ರಾಹಕರ ಸಂಘದ 2025 ನೇ ಸಾಲಿನ ನೂತನ ಪದಾಧಿಕಾರಿಗಳ ಪದವಿ ಸ್ವೀಕಾರ ಸಮಾರಂಭದಲ್ಲಿ ಛಾಯಾಗ್ರಾಹಕರನ್ನು ಉಳಿಸಿ ಎಂಬ ಬ್ಯಾನರ್ ಅನಾವರಣಗೊಳಿಸಿ, ತಾಲೂಕು ಛಾಯಾಗ್ರಾಹಕರ ಸಂಘಕ್ಕೆ ವೈಯ್ಯಕ್ತಿಕವಾಗಿ ₹25 ಸಾವಿರ ದೇಣಿಗೆ ನೀಡಿ ಮಾತನಾಡಿದರು. ರಾಜ್ಯ, ಜಿಲ್ಲಾ ಮಟ್ಟದ ಛಾಯಾ ಚಿತ್ರ ಗ್ರಾಹಕರ ಸಂಘಕ್ಕೆ ತಾಲೂಕು ಛಾಯಾ ಚಿತ್ರ ಗ್ರಾಹಕರ ಸಂಘದಿಂದ ಸದಸ್ಯರ ಆಯ್ಕೆ ಮಾಡಿ ಕಳಿಸಬೇಕಾಗಿದೆ. ಸಂಘಟನೆಯಲ್ಲಿ ಶಕ್ತಿ ಇದೆ. 1820 ರಲ್ಲಿ ಛಾಯಾಚಿತ್ರ ಗ್ರಹಣ ಪ್ರಾರಂಭವಾಗಿದೆ ಎಂದು ಇತಿಹಾಸದಿಂದ ತಿಳಿದು ಬಂದಿದೆ. ಪ್ರಸ್ತುತ ಛಾಯಾ ಚಿತ್ರ ಗ್ರಾಹಕರನ್ನು ಉಳಿಸಿ ಎಂದು ಹೋರಾಟ ಮಾಡಬೇಕಾಗಿದೆ ಎಂದರು.ಜಿಲ್ಲಾ ಛಾಯಾ ಚಿತ್ರ ಗ್ರಾಹಕರ ಸಂಘದ ಗೌರವ ಅಧ್ಯಕ್ಷ ಎಂ.ಓ.ಜೋಯಿ ಉದ್ಘಾಟಿಸಿ ಮಾತನಾಡಿ, ನರಸಿಂಹರಾಜಪುರ ಛಾಯಾಗ್ರಾಹಕರ ಸಂಘಕ್ಕೆ ಜಿಲ್ಲಾ ಮಟ್ಟದಲ್ಲಿ ಹಾಗೂ ರಾಜ್ಯಮಟ್ಟದಲ್ಲಿ ಒಳ್ಳೆಯ ಹೆಸರಿದೆ. ಪ್ರತಿ ತಿಂಗಳ ಸಭೆಯಲ್ಲಿ ಎಲ್ಲಾ ಛಾಯಾಗ್ರಾಹಕರು ಭಾಗವಹಿಸಬೇಕು. ಸಂಘ ಚೆನ್ನಾಗಿ ನಡೆದುಕೊಂಡು ಹೋಗಬೇಕು ಎಂದರು.
ಸಭೆ ಅಧ್ಯಕ್ಷತೆ ವಹಿಸಿದ್ದ ತಾಲೂಕು ಸಂಘದ ನೂತನ ಅಧ್ಯಕ್ಷ ಪಿ.ಜೆ ವಿಜು ಮಾತನಾಡಿ, ಸ್ಥಳೀಯ ಛಾಯಾಗ್ರಾಹಕರು ತುಂಬಾ ಸಮಸ್ಯೆ ಎದುರಿಸುತ್ತಿದ್ದಾರೆ. ಇಲ್ಲಿನ ದೊಡ್ಡ, ದೊಡ್ಡ ಕಾರ್ಯಕ್ರಮಗಳಿಗೆ ಕೇರಳ, ಬೆಂಗಳೂರು ಹಾಗೂ ಬೇರೆ,ಬೇರೆ ಜಿಲ್ಲೆಗಳಿಂದ ಛಾಯಾಚಿತ್ರ ಗ್ರಾಹಕರನ್ನು ಕರೆಸಿ ಪೋಟೋ, ವೀಡಿಯೋ ಮಾಡಿಸುತ್ತಾರೆ. ಸ್ಥಳೀಯರಿಗೆ ಚಿಕ್ಕ,ಚಿಕ್ಕ ಕಾರ್ಯ ಕ್ರಮಕ್ಕೆ ಮಾತ್ರ ಪೋಟೋ ತೆಗೆಯಲು ಕರೆಯುತ್ತಿದ್ದಾರೆ. ಇದರಿಂದ ಛಾಯಾಗ್ರಾಹಣವನ್ನೇ ನಂಬಿಕೊಂಡಿರುವ ಸ್ಥಳೀಯ ಛಾಯಾಚಿತ್ರ ಗ್ರಾಹಕರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಆದ್ದರಿಂದ ಮುಂದೆ ಎಲ್ಲಾ ಛಾಯಾ ಚಿತ್ರ ಗ್ರಾಹಕರು ಸಂಘಟಿತರಾಗಿ ಹೋರಾಟ ಮಾಡಬೇಕಾಗಿದೆ. ಅಸಂಘಟಿತ ಕಾರ್ಮಿಕ ವಲಯಕ್ಕೆ ಛಾಯಾಗ್ರಾಹಕರನ್ನು ಸೇರಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸುತ್ತಿದ್ದೇವೆ. ನನ್ನ ಮುಂದಿನ ಅವಧಿಯಲ್ಲಿ ಹಲವಾರು ಕಾರ್ಯಕ್ರಮ ಹಮ್ಮಿಕೊಳ್ಳಲು ಚಿಂತನೆ ನಡೆಸಿದ್ದು ಸಂಘದ ಎಲ್ಲಾ ಸದಸ್ಯರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ಛಾಯಾಗ್ರಾಹಕರ ಸಂಘದ ಉಪಾಧ್ಯಕ್ಷ ದುರ್ಗೇಶ್ ಅವರನ್ನು ಸನ್ಮಾನಿಸಲಾಯಿತು.ಸಭೆಯಲ್ಲಿ ತಾಲೂಕು ಛಾಯಾಗ್ರಾಹಕರ ಸಂಘದ ಗೌರವ ಅಧ್ಯಕ್ಷ ಮಥಾಯ್, ಸಂಘದ ನೂತನ ಕಾರ್ಯದರ್ಶಿ ಸಮೀರ್, ಖಜಾಂಚಿ ಅರ್ಜುನ್, ಸಂಘದ ಸಮನ್ವಯ ಸಮಿತಿ ಅಧ್ಯಕ್ಷ ಎಲಿಯಾಸ್, ಉಪಾಧ್ಯಕ್ಷರಾದ ಸಾಜು , ಸುಂದರೇಶ್, ಸಹ ಕಾರ್ಯದರ್ಶಿ ಮಾಳೂರು ದಿಣ್ಣೆ ವಾಸು, ಸಂಘಟನಾ ಕಾರ್ಯದರ್ಶಿ ಬಾಳೆಹೊನ್ನೂರು ಪ್ರವೀಣ್ , ಅರ್ಜುನ್ , ಗಿರಿರಾಜ್, ಸಾದತ್ ಸಮೀರ್ ಇದ್ದರು.