ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮೇಲೆ ಇಲ್ಲದ ಆರೋಪಗಳನ್ನು ಮಾಡುತ್ತಿರುವ ಜೆಡಿಎಸ್ ಮುಖಂಡರು ಅಸೂಯೆ, ದ್ವೇಷದ ಕೀಳು ಮಟ್ಟದ ನಡವಳಿಕೆಯನ್ನು ತೋರಿಸಿದ್ದಾರೆ.  

ಮಂಡ್ಯ : ಅಮಾಯಕ ಹೆಣ್ಣು ಮಕ್ಕಳ ಮೇಲೆ ಮಾಡಿರುವ ದೌರ್ಜನ್ಯ ಹಾಗೂ ಜೆಡಿಎಸ್ ಪಕ್ಷಕ್ಕೆ ಬಂದಿರುವ ಕಳಂಕವನ್ನು ಮರೆಮಾಚಲು ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಪ್ರತಿಭಟನೆ ನಡೆಸುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಎಂ.ಎಸ್. ಚಿದಂಬರ್ ಕಿಡಿಕಾರಿದರು.

ಕಾಂಗ್ರೆಸ್ ಪಕ್ಷ ಮಹಿಳೆಯರ ಮೇಲೆ ಇಟ್ಟಿರುವ ಗೌರವದಿಂದಲೇ ಗೃಹಲಕ್ಷ್ಮೀ, ಶಕ್ತಿ ಯೋಜನೆ, ಗೃಹಜ್ಯೋತಿಯಂತಹ ಹಲವು ಕಾರ್ಯಕ್ರಮಗಳನ್ನು ಉಚಿತವಾಗಿ ಕೊಟ್ಟಿದೆ. ಡಿ.ಕೆ.ಶಿವಕುಮಾರ್ ಅವರ ರಾಜಕೀಯ ಬೆಳವಣಿಗೆ ಹಾಗೂ ಒಕ್ಕಲಿಗ ಸಮುದಾಯದ ಬೆಂಬಲವನ್ನು ಸಹಿಸಿಕೊಳ್ಳಲಾಗದೇ ರಾಜ್ಯದ ಜನತೆಗೆ ತಪ್ಪು ಕಲ್ಪನೆ ಮೂಡಿಸಲು ಜೆಡಿಎಸ್ ಮುಂದಾಗಿದೆ ಎಂದು ದೂರಿದರು.

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮೇಲೆ ಇಲ್ಲದ ಆರೋಪಗಳನ್ನು ಮಾಡುತ್ತಿರುವ ಜೆಡಿಎಸ್ ಮುಖಂಡರು ಅಸೂಯೆ, ದ್ವೇಷದ ಕೀಳು ಮಟ್ಟದ ನಡವಳಿಕೆಯನ್ನು ತೋರಿಸಿದ್ದಾರೆ. ಇದನ್ನು ಕಾಂಗ್ರೆಸ್ ಪಕ್ಷದ ಕಾರ್ಯರ್ತರು ತೀವ್ರವಾಗಿ ಖಂಡಿಸುವುದಲ್ಲದೇ, ಮುಂದಿನ ದಿನಗಳಲ್ಲಿ ಇದಕ್ಕೆ ಜೆಡಿಎಸ್ ಪಶ್ಚಾತಾಪ ಪಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಬಲಿಷ್ಠವಾಗಿದ್ದು, ಶಾಸಕರು, ಸಹಸ್ರಾರು ಮುಖಂಡರು, ಕಾರ್ಯಕರ್ತರು ಡಿಕೆಶಿ. ಅಭಿಮಾನಿಗಳು ಇದ್ದು, ಜೆಡಿಎಸ್‌ನ ಎಲ್ಲಾ ಮುಖಂಡರ ಪ್ರತಿಕೃತಿಗೆ ಚಪ್ಪಲಿ, ಪೊರಕೆ ಸೇವೆ ಮಾಡುವ ಶಕ್ತಿ ಇದೆ ಎಂಬುದನ್ನು ಜೆಡಿಎಸ್‌ನವರು ಮರೆಯಬಾರದು ಎಂದು ಎಚ್ಚರಿಕೆ ನೀಡಿದರು.

ಜೆಡಿಎಸ್ ಸಂಸದರ ಕರ್ಮಕಾಂಡದಿಂದ ಜನತೆ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಆಗಿರುವ ಅಪಮಾನಕ್ಕೆ ಜೆಡಿಎಸ್ ನೈತಿಕ ಹೊಣೆ ಹೊರಬೇಕು ಎಂದು ಆಗ್ರಹಿಸಿದರು.

ವಕೀಲ ದೇವರಾಜೇಗೌಡ ಮಾಡಿರುವ ಆರೋಪ ಶುದ್ಧ ಸುಳ್ಳಿನಿಂದ ಕೂಡಿದೆ. ಈಗಾಗಲೇ ಎಸ್‌ಐಟಿಯವರು ತನಿಖೆ ಕೈಗೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಇದರಲ್ಲಿ ಯಾರ್ಯಾರು ಭಾಗಿಯಾಗಿದ್ದಾರೆ ಎಂಬುದು ತಿಳಿಯುತ್ತದೆ ಎಂದರು.

ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣವನ್ನು ಸಿಬಿಐಗೆ ವಹಿಸುವ ಅಗತ್ಯವಿಲ್ಲ. ನಮ್ಮ ಪೊಲೀಸರೇ ಸಮರ್ಥರಾಗಿದ್ದು, ಎಲ್ಲವನ್ನೂ ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ಸತ್ಯಾಸತ್ಯತೆಯನ್ನು ಬಯಲಿಗೆಳೆಯಲಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಮುಖಂಡರಾದ ಸಿ.ಆರ್.ರಮೇಶ್, ವೀಣಾ ಶಂಕರ್, ವಿಜಯಲಕ್ಷ್ಮೀ ರಘುನಂದನ್ ಇತರರು ಗೋಷ್ಠಿಯಲ್ಲಿದ್ದರು.