ಸಾರಾಂಶ
ಕಾರವಾರ: ಇಲ್ಲಿನ ಶಿವಾಜಿ ಬಾಲಮಂದಿರ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆ ಬಾಡದಲ್ಲಿ ಮಂಗಳವಾರ ದೀಪಾವಳಿ ಹಬ್ಬವನ್ನು ಪರಿಸರಸ್ನೇಹಿಯಾಗಿ ಆಚರಿಸುವ ಕುರಿತು ಪರಿಸರ ಜಾಗೃತಿ ಕಾರ್ಯಕ್ರಮ ನಡೆಯಿತು.
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಪ್ರಾದೇಶಿಕ ಕಚೇರಿಯ ಪರಿಸರ ಅಧಿಕಾರಿ ಬಿ.ಕೆ. ಸಂತೋಷ ಉದ್ಘಾಟನೆ ನೆರವೇರಿಸಿ, ಹಸಿರು ಪಟಾಕಿಯನ್ನು ಹೆಚ್ಚಾಗಿ ಬಳಸುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಸರ್ವೋಚ್ಛ ನ್ಯಾಯಾಲಯವು ಪಟಾಕಿಗಳಿಗೆ ಸಂಬಂಧಿಸಿದಂತೆ ಹಲವಾರು ನಿರ್ದೇಶನಗಳನ್ನು ನೀಡಿದೆ. ಈ ಆದೇಶದಲ್ಲಿ ಸರ್ವೋಚ್ಛ ನ್ಯಾಯಾಲಯವು ರಾತ್ರಿ 8 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಮಾತ್ರ ಪಟಾಕಿಗಳನ್ನು ಸಿಡಿಸಲು ಅವಕಾಶ ನೀಡಿದೆ. ಇದಲ್ಲದೆ ಹಸಿರು ಪಟಾಕಿಗಳನ್ನು ಬಿಟ್ಟು ಉಳಿದ ಯಾವುದೇ ಇತರೆ ಪಟಾಕಿಗಳ ಮಾರಾಟ ಹಾಗೂ ಬಳಕೆಯನ್ನು ಸಹ ನಿಷೇಧಿಸಿದೆ ಎಂದರು.ಉಪ ಪರಿಸರ ಅಧಿಕಾರಿ ಡಾ. ಗಣಪತಿ ಹೆಗಡೆ, ವಿದ್ಯಾರ್ಥಿಗಳಿಗೆ ಪಟಾಕಿಯನ್ನು ಬಳಸುವುದರಿಂದ ಆಗುವ ಶಬ್ದ, ವಾಯು, ಜಲ ಮಾಲಿನ್ಯ ಮತ್ತು ಸ್ಫೋಟದ ತೀವ್ರತೆಯಿಂದ ಆಗುವ ಅನಾಹುತಗಳ ಬಗ್ಗೆ ತಿಳಿಸಿದರು. ಪಟಾಕಿಗಳಲ್ಲಿ ಭಾರ ಲೋಹವನ್ನು ಬಳಸುವುದರಿಂದ ಇದು ಮಾನವನ ಆರೋಗ್ಯದ ಮೇಲೆ ಹಾಗೂ ಪ್ರಾಣಿ, ಪಕ್ಷಿಗಳ ಮೇಲೂ ದುಷ್ಪರಿಣಾಮ ಬೀರುವುದಲ್ಲದೇ ಕಣ್ಣು ಉರಿ, ಚರ್ಮ ಸಂಬಂಧ ರೋಗಗಳು ಅಸ್ತಮಾ, ಅಲರ್ಜಿಗಳು ಹೆಚ್ಚಾಗಿ ಉಂಟಾಗುತ್ತದೆ ಎಂದು ತಿಳಿಸಿ ಪ್ರತಿಜ್ಞಾ ವಿಧಿ ಬೋಧಿಸಿದರು.ಬಾಡ ಶಿವಾಜಿ ಬಾಲಮಂದಿರ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆ ಮುಖ್ಯಾಧ್ಯಾಪಕಿ ರೂಪಾ ಗಾಂವಕರ, ಸಂಗಮ ಸೇವಾ ಸಂಸ್ಥೆ ಅಧ್ಯಕ್ಷ ರವೀಂದ್ರ ಎನ್. ಶೆಟ್ಟಿ, ಶಿಕ್ಷಕಿಯರಾದ ರಾಜೇಶ್ವರಿ, ವಿಜಯಾ ನಾಯ್ಕ ಇದ್ದರು.ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಚೇರಿ, ಸಂಗಮ ಸೇವಾ ಸಂಸ್ಥೆ ಅಂಕೋಲಾ ಹಾಗೂ ಶಿವಾಜಿ ಬಾಲಮಂದಿರ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆ ಬಾಡ ಇವರ ಆಶ್ರಯದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.ದೀಪಾವಳಿ ಪರಿಸರಸ್ನೇಹಿಯಾಗಿ ಆಚರಿಸಿ: ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ
ಕಾರವಾರ: ದೀಪಾವಳಿ ಹಬ್ಬದ ಸಂದರ್ಭದಲ್ಲಿ ನಿಷೇಧಿತ ಪಟಾಕಿ ಸಿಡಿಸಿದರೆ ಶಬ್ದಮಾಲಿನ್ಯ, ವಾಯುಮಾಲಿನ್ಯ ಹಾಗೂ ಘನತ್ಯಾಜ್ಯ ಉತ್ಪಾದನೆಯಾಗಿ ಪರಿಸರ ಮಾಲಿನ್ಯ ಹೆಚ್ಚಾಗುವುದರಿಂದ ಜಿಲ್ಲೆಯ ಜನತೆ ಈ ಬಾರಿ ದೀಪಾವಳಿಯನ್ನು ಮಾಲಿನ್ಯರಹಿತವಾಗಿ ಆಚರಿಸುವಂತೆ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಕೋರಿದ್ದಾರೆ.ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ದೀಪಾವಳಿ ಸಂದರ್ಭದಲ್ಲಿ ಕೇವಲ ಹಸಿರು ಪಟಾಕಿಗಳನ್ನು ಮಾತ್ರ ಬಳಸಬೇಕು. ಇವುಗಳನ್ನು ಬಳಸುವಾಗ ಯಾವುದೇ ಪ್ರಾಣಿ, ಪಕ್ಷಿಗಳು, ಮಕ್ಕಳು ಹಾಗೂ ವೃದ್ಧರಿಗೆ ತೊಂದರೆಯಾಗದಂತೆ ಬಳಸಬೇಕು. ಆಸ್ಪತ್ರೆ, ಶಿಕ್ಷಣ ಸಂಸ್ಥೆಗಳ(ಹಾಸ್ಟೆಲ್), ಅನಾಥಾಶ್ರಮ, ಸುತ್ತಮುತ್ತ ಹಾಗೂ ಇತರೇ ನಿಷೇಧಿತ ಪ್ರದೇಶಗಳಲ್ಲಿ ಯಾವುದೇ ರೀತಿಯ ಪಟಾಕಿಗಳನ್ನು ಸಿಡಿಸುವುದನ್ನು ನಿಷೇಧಿಸಲಾಗಿದೆ. ಪಟಾಕಿ ಸಿಡಿತದಿಂದ ಬರುವ ಹೊಗೆ ಅಸ್ತಮಾ ರೋಗಿಗಳು ಹೃದ್ರೋಗಿಗಳು, ವಯೋವೃದ್ಧರು, ಚಿಕ್ಕಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟುಮಾಡುತ್ತದೆ. ಪ್ರತಿವರ್ಷ ಈ ರೀತಿಯ ಹಲವಾರು ಪ್ರಕರಣಗಳು ನಡೆಯುತ್ತಿರುತ್ತವೆ. ಜಿಲ್ಲೆಯ ಎಲ್ಲ ಪಟಾಕಿ ಮಾರಾಟ ಮಾಡುವ ಮಳಿಗೆಗಳಿಗೆ ಕೇವಲ ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡಲು ಸೂಚಿಸಲಾಗಿದೆ. ಸಾರ್ವಜನಿಕರು ಪಟಾಕಿ ಖರೀದಿಸುವ ಮುನ್ನ ಪಟಾಕಿಯ ಮೇಲಿರುವ ಹಸಿರು ಚಿಹ್ನೆಗಳನ್ನು ಪರೀಕ್ಷಿಸಿ ಖರೀದಿಸಬೇಕು ಹಾಗೂ ಪಟಾಕಿಯನ್ನು ಸಿಡಿಸುವ ಸಂದರ್ಭದಲ್ಲಿ ಚಿಕ್ಕ ಮಕ್ಕಳ ಜತೆ ಪೋಷಕರು ಇದ್ದು, ಅವಘಡಗಳು ಸಂಭವಿಸದಂತೆ ಜಾಗೃತೆ ವಹಿಸಬೇಕು ಎಂದಿದ್ದಾರೆ.