ತಂಬಾಕು ಸೇವನೆಯಿಂದ ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆ ಹಾಗೂ ಶ್ವಾಸಕೋಶದ ಸಮಸ್ಯೆ, ಹೃದಯಾಘಾತ, ಪಾರ್ಶ್ವ ವಾಯು ಮುಂತಾದ ಗಂಭೀರ ಮಾರಣಾಂತಿಕ ಕಾಯಿಲೆಗಳಿಗೆ ಕಾರಣವಾಗಿ ಬದುಕು ದಯನೀಯವಾಗುತ್ತದೆ
ಕುಕನೂರು: ಆರೋಗ್ಯಕರ ಜೀವನಕ್ಕೆ ತಂಬಾಕು ಸೇವನೆ ಮಾಡದಿರಿ ಎಂದು ವೈದ್ಯೆ ಡಾ. ಜಿ.ಸುಷ್ಮಾ ಹೇಳಿದರು.
ಪಟ್ಟಣದ ವಿದ್ಯಾನಂದ ಗುರುಕುಲ ಪದವಿ ಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರ ಸಂಯುಕ್ತ ಆಶ್ರಯದಲ್ಲಿ ವಿಶ್ವ ತಂಬಾಕು ರಹಿತ ದಿನಾಚರಣೆ ಕಾರ್ಯಕ್ರಮ ಹಾಗೂ ದಂತ ತಪಾಸಣೆ ಶಿಬಿರವನ್ನುದ್ದೇಶಿಸಿ ಮಾತನಾಡಿದ ಅವರು, ತಂಬಾಕು ಸೇವನೆಯಿಂದ ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆ ಹಾಗೂ ಶ್ವಾಸಕೋಶದ ಸಮಸ್ಯೆ, ಹೃದಯಾಘಾತ, ಪಾರ್ಶ್ವ ವಾಯು ಮುಂತಾದ ಗಂಭೀರ ಮಾರಣಾಂತಿಕ ಕಾಯಿಲೆಗಳಿಗೆ ಕಾರಣವಾಗಿ ಬದುಕು ದಯನೀಯವಾಗುತ್ತದೆ ಎಂದರು.ಪ್ರಾಚಾರ್ಯ ಎನ್. ಪಾಂಡುರಂಗ ಅಧ್ಯಕ್ಷತೆ ವಹಿಸಿದ್ದರು. ಎಲ್ಲ ವಿದ್ಯಾರ್ಥಿಗಳ ಹಲ್ಲುಗಳನ್ನು ತಪಾಸಣೆ ಮಾಡಿ, ಹಲ್ಲುಗಳ ಆರೋಗ್ಯ, ಸ್ವಚ್ಛತೆ, ಕಾಪಾಡಿಕೊಳ್ಳುವುದರ ಬಗ್ಗೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಲಾಯಿತು. ಸಮುದಾಯ ಆರೋಗ್ಯ ಅಧಿಕಾರಿ ಶಶಿಕಲಾ.ಟಿ. ವಿದ್ಯಾರ್ಥಿಗಳಿಗೆ ರಕ್ತ ಹೀನತೆ, ಅದರಿಂದ ಉಂಟಾಗುವ ತೊಂದರೆ ಮತ್ತು ಪರಿಹಾರ ಕ್ರಮ ಬಗ್ಗೆ ಮಾಹಿತಿ ನೀಡಿದರು.
ಸ್ನೇಹ ಕ್ಲಿನಿಕ್ ಆಪ್ತಸಮಾಲೋಚಕ ಕಳಕಪ್ಪ ಬಂಡಿ, ವಿದ್ಯಾನಂದ ಗುರುಕುಲ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಸಮನ್ವಯಾಧಿಕಾರಿ ಆರ್. ಕೆ.ಪಾಟೀಲ್, ಉಪನ್ಯಾಸಕ ಸುರೇಶ್. ಹಳ್ಳಿಗುಡಿ, ಐ.ಟಿ. ಬಡಿಗೇರ್. ಬಸವರಾಜ್ ಬಂಗಿ, ಶ್ರೀಕಾಂತ ಕುಲಕರ್ಣಿ ಇತರರಿದ್ದರು.